Actor Lakshman Death: ಕನ್ನಡದ ಹೆಸರಾಂತ ನಟ ಲಕ್ಷ್ಮಣ್ ಹೃದಯಾಘಾತದಿಂದ ನಿಧನ
ಹೃದಯಾಘಾತ ಸಂಭವಿಸಿದ್ದರಿಂದ ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
‘ಯಜಮಾನ’, ‘ಸೂರ್ಯವಂಶ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿ ಗಮನ ಸೆಳೆದಿದ್ದ ನಟ ಲಕ್ಷ್ಮಣ್ (Lakshman) ಅವರು ಇಂದು (ಜನವರಿ 23) ನಿಧನ ಹೊಂದಿದ್ದಾರೆ. ಹೃದಯಾಘಾತ ಸಂಭವಿಸಿದ್ದರಿಂದ ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಲಕ್ಷ್ಮಣ್ ನಿಧನಕ್ಕೆ ಸ್ಯಾಂಡಲ್ವುಡ್ (Sandalwood) ಸೆಲೆಬ್ರಿಟಿಗಳು ಹಾಗೂ ಸಿನಿಪ್ರಿಯರು ಸಂತಾಪ ಸೂಚಿಸಿದ್ದಾರೆ.
ಭಾನುವಾರ (ಜನವರಿ 22ರಂದು) ರಾತ್ರಿ ಲಕ್ಷ್ಮಣ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಇಂದು ಮುಂಜಾನೆ 3.30 ಸುಮಾರಿಗೆ ಅವರನ್ನು ನಾಗರಬಾವಿಯಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಇಸಿಜಿ ಮಾಡಿ ಅವರನ್ನು ಮನೆಗೆ ಕರೆದುಕೊಂಡು ಬರಲಾಯಿತು. ಮುಂಜಾನೆ ಅವರಿಗೆ ಹೃದಯಾಘಾತ ಸಂಭವಿಸಿದೆ. ಅವರ ಮನೆಯಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ.
ಲಕ್ಷ್ಮಣ್ ಅವರು ಪೋಷಕ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಅನೇಕ ಸಿನಿಮಾಗಳಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದರು. ವೃತ್ತಿ ಜೀವನದಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಲಕ್ಷ್ಮಣ್ ಬಣ್ಣ ಹಚ್ಚಿದ್ದರು. ‘ಒಲವಿನ ಉಡುಗೊರೆ’, ‘ಸಾಂಗ್ಲಿಯಾನ’ ಮೊದಲಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ಅಂಬರೀಷ್, ವಿಷ್ಣುವರ್ಧನ್, ಶಂಕರ್ ನಾಗ್ ಸೇರಿದಂತೆ ಕನ್ನಡದ ದಿಗ್ಗಜರ ಜೊತೆ ಅವರು ತೆರೆ ಹಂಚಿಕೊಂಡಿದ್ದರು.
ಇದನ್ನೂ ಓದಿ: Emergency: ಇಂದಿರಾ ಗಾಂಧಿ ಕುರಿತು ಸಿನಿಮಾ ಮಾಡಲು ಆಸ್ತಿ ಅಡವಿಟ್ಟ ಕಂಗನಾ ರಣಾವತ್
ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಒಂದಾದಮೇಲೆ ಒಂದರಂತೆ ಬರಸಿಡಿಲು ಬಂದೆರಗುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಹಲವು ಕಲಾವಿದರನ್ನು ಚಿತ್ರರಂಗ ಕಳೆದುಕೊಂಡಿದೆ. ಈಗ ಲಕ್ಷ್ಮಣ್ ಅವರನ್ನು ಕಳೆದುಕೊಂಡ ಚಿತ್ರರಂಗ ಬಡವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:16 am, Mon, 23 January 23