‘ಕೆಡಿ’ ಅಶ್ಲೀಲ ಹಾಡಿನ ವಿವಾದ: ಮಹಿಳಾ ಆಯೋಗದ ಮುಂದೆ ಕ್ಷಮೆ ಕೇಳಿದ ಸಂಜಯ್ ದತ್

ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ: ದಿ ಡೆವಿಲ್’ ಚಿತ್ರದ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಂಜಯ್ ದತ್ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ, 50 ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದಾಗಿ ತಿಳಿಸಿದ್ದಾರೆ.

‘ಕೆಡಿ’ ಅಶ್ಲೀಲ ಹಾಡಿನ ವಿವಾದ: ಮಹಿಳಾ ಆಯೋಗದ ಮುಂದೆ ಕ್ಷಮೆ ಕೇಳಿದ ಸಂಜಯ್ ದತ್
Nora Fatehi, Sanjay Dutt

Updated on: Apr 27, 2026 | 8:46 PM

ಕನ್ನಡದ ಪ್ಯಾನ್-ಇಂಡಿಯಾ ಸಿನಿಮಾ ‘ಕೆಡಿ: ದಿ ಡೆವಿಲ್’ (KD: The Devil) ಬಿಡುಗಡೆಗೂ ಮುನ್ನ ಸಖತ್ ವಿವಾದ ಮಾಡಿಕೊಂಡಿದೆ. ಈ ಸಿನಿಮಾದ ‘ಸರ್ಕೆ ಚುನಾರ್ ತೇರಿ ಸರ್ಕೆ’ ಹಾಡಿನಲ್ಲಿನ ಅಶ್ಲೀಲ ಸಾಹಿತ್ಯದ ಕಾರಣಕ್ಕೆ ಭಾರಿ ಟೀಕೆ ವ್ಯಕ್ತವಾಯಿತು. ಈ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರು ಸೋಮವಾರ (ಏಪ್ರಿಲ್ 27) ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾಗಿ ಕ್ಷಮೆ ಯಾಚಿಸಿದ್ದಾರೆ.

ಸೋಮವಾರ ಮಧ್ಯಾಹ್ನ ತಮ್ಮ ವಕೀಲರೊಂದಿಗೆ ಮಹಿಳಾ ಆಯೋಗದ ಕಚೇರಿಗೆ ಆಗಮಿಸಿದ ಸಂಜಯ್ ದತ್ ಅವರು ಹಾಡಿನ ಸಾಹಿತ್ಯದ ಬಗ್ಗೆ ತಮಗೆ ಮೊದಲೇ ಅರಿವಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ನಟನ ಪರ ವಕೀಲರು ಮಾತನಾಡಿ, ‘ಸಂಜಯ್ ದತ್ ಅವರು ಮಹಿಳೆಯರ ಮತ್ತು ಆಯೋಗದ ಮೇಲೆ ಅಪಾರ ಗೌರವ ಹೊಂದಿದ್ದಾರೆ. ಹಾಡನ್ನು ರೆಕಾರ್ಡ್ ಮಾಡುವಾಗ ಅದು ಬೇರೆ ಭಾಷೆಯಲ್ಲಿದ್ದ ಕಾರಣ ಸಾಹಿತ್ಯದ ಅರ್ಥ ತಮಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ. ಆದರೂ, ಘಟನೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ. ಇದೇ ವೇಳೆ ಅವರು ಸ್ವಯಂಪ್ರೇರಿತರಾಗಿ ಬುಡಕಟ್ಟು ಸಮುದಾಯದ 50 ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ಮುಂದಾಗಿದ್ದಾರೆ’ ಎಂದು ತಿಳಿಸಿದರು.

ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ಈ ಹಾಡಿನಲ್ಲಿ ನೋರಾ ಫತೇಹಿ ಮತ್ತು ಸಂಜಯ್ ದತ್ ಕಾಣಿಸಿಕೊಂಡಿದ್ದರು. ಹಾಡಿನ ಆರಂಭಿಕ ಸಾಲುಗಳು ಲೈಂಗಿಕತೆಯನ್ನು ಬಿಂಬಿಸುವ ದ್ವಂದ್ವಾರ್ಥದಿಂದ ಕೂಡಿದ್ದು, ಅತ್ಯಂತ ಅಶ್ಲೀಲವಾಗಿವೆ ಎಂದು ಆಕ್ಷೇಪ ವ್ಯಕ್ತವಾಗಿತ್ತು. ಹಾಡಿನ ನೃತ್ಯ ಸಂಯೋಜನೆಯೂ ಕೂಡ ಆಕ್ಷೇಪಾರ್ಹವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು.

ರಾಷ್ಟ್ರೀಯ ಮಹಿಳಾ ಆಯೋಗವು ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಈ ಹಾಡು ಭಾರತೀಯ ನ್ಯಾಯ ಸಂಹಿತೆ, ಐಟಿ ಕಾಯ್ದೆ ಮತ್ತು ಪೋಕ್ಸೋ (POCSO) ಕಾಯ್ದೆಗಳ ನಿಬಂಧನೆಗಳನ್ನು ಉಲ್ಲಂಘಿಸುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆಯೋಗ ಹೇಳಿತ್ತು.

ಇದನ್ನೂ ಓದಿ: ‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ ನೋಡಿ..

ವಿವಾದ ತಾರಕಕ್ಕೇರುತ್ತಿದ್ದಂತೆ, ಹಾಡನ್ನು ಬಿಡುಗಡೆ ಮಾಡಿದ್ದ ‘ಆನಂದ್ ಆಡಿಯೋ’ ಸಂಸ್ಥೆಯು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಲಿರಿಕಲ್ ವಿಡಿಯೋಗಳನ್ನು ಯೂಟ್ಯೂಬ್‌ನಿಂದ ತೆಗೆದುಹಾಕಿತು. ನಟಿ ನೋರಾ ಫತೇಹಿ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿ, ‘ನಾನು ಇಂತಹ ಸಾಹಿತ್ಯವನ್ನು ಬೆಂಬಲಿಸುವುದಿಲ್ಲ. ಪ್ರತಿರೋಧದ ನಂತರ ಚಿತ್ರತಂಡ ಹಾಡನ್ನು ತೆಗೆದುಹಾಕಿರುವುದು ಸಮಾಧಾನ ತಂದಿದೆ’ ಎಂದು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us