ಮಂಡ್ಯಕ್ಕೆ ಸತೀಶ್ ನೀನಾಸಂ ಚುನಾವಣಾ ರಾಯಭಾರಿ, ಮತದಾನ ತಪ್ಪಿಸಬೇಡಿ ಎಂದ ನಟ
Satish Ninasam: ಮಂಡ್ಯ ಜಿಲ್ಲೆ ಮತದಾನ ಜಾಗೃತಿ ರಾಯಭಾರಿಯನ್ನಾಗಿ ನಟ ಸತೀಶ್ ನೀನಾಸಂ ಅವರನ್ನು ನೇಮಿಸಲಾಗಿದ್ದು, ಎಲ್ಲರೂ ಮತದಾನದಲ್ಲಿ ಭಾಗವಹಿಸಿ ಯೋಗ್ಯ ವ್ಯಕ್ತಿಗಳ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಕರ್ನಾಟಕ ವಿಧಾನಸಭೆ ಚುನಾವಣೆ 2023 (Karnataka Assembly election 2023) ಜಾರಿಯಲ್ಲಿದ್ದು, ಮಂಡ್ಯ (Mandya) ಜಿಲ್ಲೆಯ ಮತದಾನ ಜಾಗೃತಿ ರಾಯಭಾರಿಯನ್ನಾಗಿ ನಟ ಸತೀಶ್ ನೀನಾಸಂ (Sathish Ninasam) ಅವರನ್ನು ಚುನಾವಣಾ ಆಯೋಗ ನೇಮಿಸಿದೆ. ಇಂದು (ಏಪ್ರಿಲ್ 13) ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಮತದಾನ ಶಿಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಸ್ವತಂತ್ರ್ಯವಾಗಿ ಮತದಾನ ಮಾಡಿ, ಅಮೂಲ್ಯ ಮತವನ್ನ ಹಾಳುಮಾಡಿಕೊಳ್ಳಬೇಡಿ, ಯೋಗ್ಯ ವ್ಯಕ್ತಿಗಳಿಗೆ ಮತದಾನ ಮಾಡಿ ಎಂದು ಮನವಿ ಮಾಡಿದರು.
ಎಲ್ಲಿಯವರೆಗೆ ಮತದಾರರು ಜಾಗೃತರಾಗುವುದಿಲ್ಲವೋ ಅಲ್ಲಿಯವರೆಗೆ ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಈ ಪವಿತ್ರ ಮತದಾನದಲ್ಲಿ ಪ್ರತಿಯೊಬ್ಬರೂ ಅಗತ್ಯವಾಗಿ ಭಾಗವಹಿಸಿ ಮತದಾನ ಮಾಡುವ ಮೂಲಕ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ನಾನ್ಯಾಕೆ ಮತದಾನ ಮಾಡಬೇಕು ಎಂಬ ಆಲೋಚನೆ ಬೇಡ. ನಿಮ್ಮ ಮತದ ಶಕ್ತಿಯನ್ನು ಅರಿತುಕೊಂಡು ಮತದಾನ ಮಾಡಲು ಸ್ವಯಂ ಪ್ರೇರಿತವಾಗಿ ಆಗಮಿಸಿ. ಇಡೀಯ ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ಆಗುವಂತೆ ಮಾಡಿ ಎಂದು ಸತೀಶ್ ನೀನಾಸಂ ಮನವಿ ಮಾಡಿದರು.
ಪ್ರತಿಯೊಬ್ಬರು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಬಡವರ ಮಕ್ಕಳು ಬಡವರಾಗಿಯೇ ಇರಬೇಕೆಂದೇನಿಲ್ಲ. ಎಷ್ಟು ದಿನ ಬೇರೆಯವರ ಬಳಿ ಕೈಕಟ್ಟಿ ನಿಂತುಕೊಳ್ಳುವುದು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ, ಅವಕಾಶಗಳಿವೆ. ಲೋಕಜ್ಞಾನ ಬೆಳೆಸಿಕೊಂಡು ಆ ಹಕ್ಕುಗಳ ಸದುಪಯೋಗಪಡಿಸಿಕೊಳ್ಳಬೇಕು. ಯುವಕರ ಕೈಯಲ್ಲಿ ದೇಶವನ್ನು ಬದಲಾಯಿಸುವ ಶಕ್ತಿಯಿದೆ. ಯುವಕರು ತಮ್ಮ ಜವಾಬ್ದಾರಿಯನ್ನು ಅರಿತು ವರ್ತಿಸಬೇಕು. ಆಮಿಷಗಳಿಗೆ ಬಲಿಯಾಗದೆ ಯೋಗ್ಯ ವ್ಯಕ್ತಿಗೆ ಮತದಾನ ಮಾಡುವ ಮೂಲಕ ಬದಲಾವಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು, ಉತ್ತಮ ವ್ಯಾಸಾಂಗ ನೀಡಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು. ಇದೇ ಸಮಯದಲ್ಲಿ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯ್ತು. ಅಂಗವಿಕಲರ ಬೈಕ್ ರ್ಯಾಲಿ ಹಾಗೂ ಪೋಸ್ಟರ್ ರಚಿಸುವ ಸ್ಪರ್ಧೆಗೂ ಚಾಲನೆ ನೀಡಲಾಯ್ತು.
ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸತೀಶ್ ನೀನಾಸಂ, ಮಂಡ್ಯ ಜಿಲ್ಲಾಧಿಕಾರಿಗಳು ಹಾಗೂ ಸಿಇಒ ತನ್ವೀರ್ ಅವರು ನನ್ನನ್ನು ಮಂಡ್ಯ ಜಿಲ್ಲೆಯ ಮತದಾನ ಜಾಗೃತಿ ರಾಯಭಾರಿಯಾಗಿ ಆಯ್ಕೆ ಮಾಡಿದ್ದಾರೆ. ಯಾವುದೇ ಪಕ್ಷಪಾತ ಇಲ್ಲದ ವ್ಯಕ್ತಿ ರಾಯಭಾರಿ ಆಗಬೇಕು ಎಂದಿದ್ದರು, ಅಂತೆಯೇ ಅದಕ್ಕೆ ಒಪ್ಪಿ ಸಹಿ ಮಾಡಿ ರಾಯಭಾರಿ ಆಗಿದ್ದೇನೆ. ಪ್ರಶ್ನೆ ಮಾಡಲು ಹಕ್ಕು ಬೇಕು ಎಂದರೆ ನಾವು ಮತದಾನ ಮಾಡಬೇಕು. ಮತದಾನದಲ್ಲಿ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನಕ್ಕೆ ಬರಬೇಕೆಂಬುದು ನನ್ನ ಆಸೆ. ಮಂಡ್ಯ ಮಾತ್ರವೇ ಅಲ್ಲ ಇಡೀ ರಾಜ್ಯದಲ್ಲಿ ಮತದಾನ ಚೆನ್ನಾಗಿ ಆಗಬೇಕು ಎಂದರು.
ಇದನ್ನೂ ಓದಿ: ‘ಐದು ವರ್ಷಗಳ ಪ್ರಯಾಣಕ್ಕೆ ಈಗ ನೆಮ್ಮದಿ ಸಿಕ್ಕಿದೆ’; ನಟ ಸತೀಶ್ ನೀನಾಸಂ
ಮುಂದುವರೆದು, ”ನಮ್ಮ ಊರು ಮಂಡ್ಯ. ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ನನ್ನನ್ನು ಇಂದು ಜಿಲ್ಲೆಯ ರಾಯಭಾರಿ ಆಗಿ ಮಾಡಿದ್ದಾರೆ. ಅದು ಬಹಳ ಹೆಮ್ಮೆ ತಂದಿದೆ. ಇದಕ್ಕೆ ನಾನು ಜಿಲ್ಲಾಧಿಕಾರಿಗಳಿಗೆ ಹಾಗೂ ಸಿಇಓ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು ನನಗೆ ದೊರೆತ ಗೌರವ ಎಂದ ಸತೀಶ್ ನೀನಾಸಂ. ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಸಿನಿಮಾ ನೋಡುವಂತೆ ಹೇಳಿದ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಹಾಗಾಗಿ ಸಿನಿಮಾ ನೋಡುವಂತೆ ಹೇಳಿದೆ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ