‘ಆತಂಕ ಇದ್ದೇ ಇರುತ್ತದೆ’: ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹೊರಟ ಶಿವಣ್ಣ ಭಾವುಕ ಮಾತು

|

Updated on: Dec 18, 2024 | 5:56 PM

ನಟ ಶಿವರಾಜ್​ಕುಮಾರ್​ ಅವರಿಗೆ ಅನಾರೋಗ್ಯ ಉಂಟಾಗಿದೆ. ಚಿಕಿತ್ಸೆ ಪಡೆಯಲು ಅವರು ವಿದೇಶಕ್ಕೆ ಹೋಗುತ್ತಿದ್ದಾರೆ. ಫಾರಿನ್​ಗೆ ಹೊರಡುವುದಕ್ಕೂ ಮುನ್ನ ಮಾಧ್ಯಮಗಳ ಜೊತೆ ಶಿವಣ್ಣ ಮಾತನಾಡಿದ್ದಾರೆ. ಈ ವೇಳೆ ಅವರು ಎಮೋಷನಲ್ ಆದರು. ಭಾವುಕವಾಗಿ ಮಾತನಾಡುತ್ತ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಶಿವರಾಜ್​ಕುಮಾರ್​ ಅವರನ್ನು ಅನೇಕ ಸೆಲೆಬ್ರಿಟಿಗಳು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.

‘ಆತಂಕ ಇದ್ದೇ ಇರುತ್ತದೆ’: ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹೊರಟ ಶಿವಣ್ಣ ಭಾವುಕ ಮಾತು
Shivarajkumar
Follow us on

ಅನಾರೋಗ್ಯ ಉಂಟಾದ ಕಾರಣದಿಂದ ನಟ ಶಿವರಾಜ್​ಕುಮಾರ್​ ಅವರು ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆಯಲಿದ್ದಾರೆ. ಇಂದು (ಡಿಸೆಂಬರ್​ 18) ಅವರು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅದಕ್ಕೂ ಮುನ್ನ ಅವರನ್ನು ಸುದೀಪ್​ ಮುಂತಾದವರು ಭೇಟಿ ಮಾಡಿದ್ದಾರೆ. ಮನೆಯಿಂದ ವಿಮಾನ ನಿಲ್ದಾಣಕ್ಕೆ ತೆರಳುವಾಗ ಶಿವರಾಜ್​ಕುಮಾರ್​ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅನಾರೋಗ್ಯ ಮತ್ತು ಚಿಕಿತ್ಸೆಯ ಬಗ್ಗೆ ಮಾತನಾಡುವಾಗ ಅವರು ಭಾವುಕರಾದರು.

‘ಎಲ್ಲರಿಗೂ ಇರುವಂಥದ್ದೇ. ನಾವು ಕೂಡ ಸ್ವಲ್ಪ ಎಮೋಷನಲ್ ಆಗುತ್ತೇವೆ. ಅದು ಸಹಜ. ಇಲ್ಲಿ ಪರೀಕ್ಷೆ ಮಾಡಿಸಿದಾಗ ಎಲ್ಲ ಲಕ್ಷಣಗಳು ಚೆನ್ನಾಗಿವೆ. ಆದರೂ ಕೂಡ ಒಂದು ಆತಂಕ ಇದ್ದೇ ಇರುತ್ತದೆ. ಮನೆಯಿಂದ ಹೋಗುತ್ತಿದ್ದೇವಲ್ಲ.. ತಂಗಿ ಹಾಗೂ ಸಂಬಂಧಿಕರನ್ನೆಲ್ಲ ನೋಡುವಾಗ ಸ್ವಲ್ಪ ಎಮೋಷನಲ್ ಆಯಿತು. ಅಭಿಮಾನಿಗಳು ಕೂಡ ಇದ್ದಾರೆ. ಸ್ವಲ್ಪ ದುಃಖ ಆಗಿದೆ ಹೊರತೂ ಇನ್ನೇನೂ ಇಲ್ಲ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ತಿರುಪತಿ ಸನ್ನಿಧಾನಕ್ಕೆ ತೆರಳಿ ಮುಡಿ ಕೊಟ್ಟ ಶಿವರಾಜ್​ಕುಮಾರ್-ಗೀತಾ

‘ನಾನು ಆತ್ಮವಿಶ್ವಾಸದಿಂದ ಇದ್ದೇನೆ. ಡಿಸೆಂಬರ್​ 24ರಂದು ಸರ್ಜರಿ ನಡೆಯುತ್ತದೆ. ಅದರ ಬಗ್ಗೆ ಏನೂ ಯೋಚನೆ ಇಲ್ಲ. ಕಡಿಮೆ ಅವಧಿ ಆದರೆ ಪರವಾಗಿಲ್ಲ. ಆದರೆ 35 ದಿನ ಮನೆಯಿಂದ, ಭಾರತದಿಂದ ಹೊರಗೆ ಇರುತ್ತೇನೆ ಎಂಬ ನೋವು ಇರುತ್ತದೆ. ಎಲ್ಲರ ಹಾರೈಕೆ ಇದೆ. ಅಭಿಮಾನಿಗಳು, ಮಾಧ್ಯಮದವರು ಕಾಳಜಿ ತೋರಿಸಿದ್ದಾರೆ. ಆರೋಗ್ಯ ಸಮಸ್ಯೆ ಇದೆ ಎಂಬುದು ಗೊತ್ತಿದ್ದರೂ ಕೂಡ ಯಾರೂ ಅದನ್ನು ವೈಭವಿಕರಿಸಿಲ್ಲ. ಅದು ನನಗೆ ಖುಷಿ ಕೊಟ್ಟಿದೆ. ಅಷ್ಟು ಪ್ರೀತಿ ಮತ್ತು ಗೌರವ ನನ್ನ ಮೇಲೆ ಇಟ್ಟಿದ್ದಾರೆ’ ಎಂದಿದ್ದಾರೆ ಶಿವರಾಜ್​ಕುಮಾರ್​.

ಶಿವರಾಜ್​ಕುಮಾರ್​ ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಆದರೆ ಅನಾರೋಗ್ಯ ಉಂಟಾಗಿರುವುದರಿಂದ ಅವರು ಸದ್ಯಕ್ಕೆ ಸಿನಿಮಾ ಕೆಲಸಗಳಿಗೆ ಬ್ರೇಕ್​ ನೀಡಿದ್ದಾರೆ. ದೇವರಿಗೆ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಿವಣ್ಣ ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.