ಅಳಿಸಿದ್ದಾಯ್ತು, ನಗಿಸಿದ್ದಾಯ್ತು.. ಈಗ ಭಯ ಹುಟ್ಟಿಸುವ ಲುಕ್ನಲ್ಲಿ ಶ್ರುತಿ; ಹುಟ್ಟುಹಬ್ಬಕ್ಕೆ ಖಡಕ್ ಪೋಸ್ಟರ್
ಶಿವರಾಜ್ಕುಮಾರ್ ನಾಯಕತ್ವದ ‘ಭಜರಂಗಿ 2’ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವ ರೀತಿಯಲ್ಲಿ ಈಗ ಶ್ರುತಿ ಅವರ ಪಾತ್ರದ ಪೋಸ್ಟರ್ ಬಿಡುಗಡೆ ಆಗಿದೆ.
ಹಿರಿಯ ನಟಿ ಶ್ರುತಿ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. 90ರ ದಶಕದಿಂದ ಇಂದಿನವರೆಗೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಅವರು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸೆಂಟಿಮೆಂಟಲ್ ಸಿನಿಮಾಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಅಳಿಸಿದ್ದಾರೆ. ಕಾಮಿಡಿ ಚಿತ್ರಗಳ ಮೂಲಕ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದಾರೆ. ಯಾವ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವಂತಹ ಕಲಾವಿದೆ ಶ್ರುತಿ. ಈಗ ‘ಭಜರಂಗಿ 2’ ಸಿನಿಮಾದಲ್ಲಿ ಅವರಿಗೆ ಖಡಕ್ ಆದಂತಹ ಲುಕ್ ನೀಡಲಾಗಿದೆ. ಅದರ ಫಸ್ಟ್ಲುಕ್ ಕೂಡ ಬಿಡುಗಡೆ ಆಗಿದೆ.
ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಶ್ರುತಿ ಅವರು ‘ಭಜರಂಗಿ 2’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಕ್ಷಣ ಅವರ ಪಾತ್ರದ ಗೆಟಪ್ ನೋಡಿದರೆ ಭಯ ಹುಟ್ಟಿಸುವಂತಿದೆ. ಸೂಪರ್ ನ್ಯಾಚುರಲ್ ಅಂಶಗಳನ್ನು ಹೊಂದಿರುವ ಈ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬುದರ ಝಲಕ್ ಅನ್ನು ಈ ಪೋಸ್ಟರ್ ಮೂಲಕ ತೋರಿಸಲಾಗಿದೆ. ಆ ಮೂಲಕ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚುವಂತೆ ಮಾಡಲಾಗಿದೆ.
ಮೈ ತುಂಬ ಬಗೆಬಗೆಯ ಆಭರಣಗಳನ್ನು ಧರಿಸಿ, ಕೈಯಲ್ಲಿ ಚುಟ್ಟ ಹಿಡಿದು, ಖಡಕ್ ಆಗಿ ಅವರು ಪೋಸ್ ನೀಡಿದ್ದಾರೆ. ಶಿವರಾಜ್ ಕುಮಾರ್ ನಾಯಕತ್ವದ ಈ ಚಿತ್ರದಲ್ಲಿ ಶ್ರುತಿ ಪಾತ್ರ ಹೇಗೆ ಮೂಡಿಬಂದಿರಬಹುದು ಎಂಬುದನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸೆ.10ರಂದು ಈ ಸಿನಿಮಾ ತೆರೆಕಾಣಬೇಕಿತ್ತು. ಆದರೆ ಕೊರೊನಾ ವೈರಸ್ ಹಾವಳಿಯಿಂದ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ. ಚಿತ್ರಮಂದಿರದಲ್ಲಿ ಕೇವಲ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇರುವುದರಿಂದ ನಿರ್ಮಾಪಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
‘ಭಜರಂಗಿ 2’ ಚಿತ್ರಕ್ಕೆ ಎ. ಹರ್ಷ ನಿರ್ದೇಶನ ಮಾಡಿದ್ದು, ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ಗಳ ಮೂಲಕ ಚಿತ್ರದ ಮೇಲೆ ಭಾರಿ ನಿರೀಕ್ಷೆ ಮೂಡುವಂತಾಗಿದೆ. ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವ ರೀತಿಯಲ್ಲಿ ಈಗ ಶ್ರುತಿ ಅವರ ಪಾತ್ರದ ಪೋಸ್ಟರ್ ಬಿಡುಗಡೆ ಆಗಿದೆ.
ಶ್ರುತಿ ಜನ್ಮದಿನಕ್ಕೆ ಅನೇಕರು ವಿಶ್ ಮಾಡುತ್ತಿದ್ದಾರೆ. ರವಿಚಂದ್ರನ್, ತರುಣ್ ಸುಧೀರ್, ವಾಸುಕಿ ವೈಭವ್, ನಂದಿತಾ ಶ್ವೇತಾ, ಶೈನ್ ಶೆಟ್ಟಿ, ಅನು ಪ್ರಭಾಕರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ವಿಡಿಯೋ ಮೂಲಕ ಶ್ರುತಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಇದನ್ನೂ ಓದಿ:
ಇಂದು ವಿಷ್ಣುವರ್ಧನ್, ಉಪೇಂದ್ರ, ಶ್ರುತಿ ಜನ್ಮದಿನ; ಅಭಿಮಾನಿಗಳಿಗೆ ಏನೆಲ್ಲ ಸಿಗಲಿದೆ?
‘ಆಂಜನೇಯನ ಕೃಪೆಯಿಂದ ಸ್ವಲ್ಪದರಲ್ಲೇ ಬಚಾವ್ ಆದ್ವಿ’; ಭಜರಂಗಿ 2 ಶೂಟಿಂಗ್ ಅವಘಡ ನೆನೆದ ನಿರ್ದೇಶಕ ಹರ್ಷ
Published On - 4:01 pm, Sat, 18 September 21