30 ರೂಪಾಯಿಯ ಋಣ, ಗಿರಿಜಾ ಲೋಕೇಶ್ ಗ್ರೇಟ್ ಬಿಡಿ
Girija Lokesh: ಒಂದು ಹೊತ್ತಿನ ಊಟವೂ ಬರುವುದಿಲ್ಲ ಈಗ. ಆದರೆ ಅದೇ 30 ರೂಪಾಯಿ ಒಬ್ಬ ಹಿರಿಯ ನಟಿಯ ಜೀವ ಉಳಿಸಲು ನೆರವಾಗಿದೆ, ಆಶ್ರಯ ಸಿಗಲು ನೆರವಾಗಿದೆ. ಏನು ಈ ಮೂವತ್ತು ರೂಪಾಯಿಯ ಕತೆ. ಮೂವತ್ತು ರೂಪಾಯಿ ಯಾರ ಜೀವ ಉಳಿಸಿತು, ಯಾರ ಋಣಭಾರವನ್ನು ತಗ್ಗಿಸಿತು? ಇಲ್ಲಿದೆ ಮಾಹಿತಿ...

30 ರೂಪಾಯಿಗೆ ಏನಾಗಬಹುದು, ಒಂದು ಹೊತ್ತಿನ ಊಟವೂ ಬರುವುದಿಲ್ಲ ಈಗ. ಆದರೆ ಅದೇ 30 ರೂಪಾಯಿ ಒಬ್ಬ ಹಿರಿಯ ನಟಿಯ ಜೀವ ಉಳಿಸಲು ನೆರವಾಗಿದೆ, ಆಶ್ರಯ ಸಿಗಲು ನೆರವಾಗಿದೆ. ಶೈಲಶ್ರೀ ಸುದರ್ಶನ್ ಅವರು ಕನ್ನಡ ಚಿತ್ರರಂಗದ ಹಿರಿಯ ನಟಿ, ಕನ್ನಡ ಚಿತ್ರರಂಗದ ಹಿರಿಯ ನಟ ಸುದರ್ಶನ್ ಅವರ ಪತ್ನಿ ಮತ್ತು ಆರ್ಎನ್ ನಾಗೇಂದ್ರರಾಯರ ಸೊಸೆ. ಇತ್ತೀಚೆಗೆ ಅವರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದರು. ಚಿತ್ರರಂಗದ ಕೆಲವು ಗಣ್ಯರು ಅವರಿಗೆ ನೆರವಾದರು, ಅದರಲ್ಲಿ ಪ್ರಮುಖರು ಹಿರಿಯ ನಟಿ ಗಿರಿಜಾ ಲೋಕೇಶ್.
ಶೈಲಶ್ರೀ ಅವರಿಗೆ ಕ್ಯಾನ್ಸರ್ ಆಗಿತ್ತು. ದರ್ಶನ್ ಸೇರಿದಂತೆ ಚಿತ್ರರಂಗದ ಕೆಲವು ಗೆಳೆಯರು ಸೇರಿಕೊಂಡು ಅವರಿಗೆ ನೆರವಾಗಿದ್ದಾರೆ. ನೆರವಿನಲ್ಲಿ ಗಿರಿಜಾ ಲೋಕೇಶ್ ಅವರ ಪಾತ್ರ ದೊಡ್ಡದಿದೆ. ಇದೀಗ ಶೈಲಶ್ರೀ ಅವರು ಮಡಿಲು ಆಶ್ರಮ ಸೇರಿದ್ದು ಅಲ್ಲಿಯೇ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶೈಲಶ್ರೀ ಅವರು, ಗಿರಿಜಾ ಲೋಕೇಶ್ ತಮಗೆ ಮಾಡಿದ ಸಹಾಯ ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ ಗಿರಿಜಾ ಲೋಕೇಶ್ ಅವರು ತಮಗೆ ಸಹಾಯ ಮಾಡಲು ಕಾರಣವಾದ 30 ರೂಪಾಯಿಯ ಸಂಗತಿಯನ್ನೂ ಹಂಚಿಕೊಂಡಿದ್ದಾರೆ.
ಗಿರಿಜಾ ಲೋಕೇಶ್ ಮತ್ತು ಶೈಲಶ್ರೀ ಅವರೆಲ್ಲ ದೂರದ ಸಂಬಂಧಿಗಳೇ, ಇಬ್ಬರೂ ಕೆಲವು ಬಾರಿ ಒಟ್ಟಿಗೆ ಡ್ಯಾನ್ಸ್ ಪ್ರದರ್ಶನ ಎಲ್ಲ ನೀಡಿದ್ದರಂತೆ. ಒಮ್ಮೆ ಗಿರಿಜಾ ಲೋಕೇಶ್ ಅವರು ಡ್ಯಾನ್ಸ್ ಪ್ರದರ್ಶನ ನೀಡಿದಾಗ ಖುಷಿಯಿಂದ ಶೈಲಶ್ರೀ ಅವರು 30 ರೂಪಾಯಿ ನೀಡಿದ್ದರಂತೆ. ಈ ವಿಷಯವನ್ನು ಸ್ವತಃ ಶೈಲಶ್ರೀ ಮರೆತು ಹೋಗಿದ್ದಾರೆ ಆದರೆ ಗಿರಿಜಾ ಲೋಕೇಶ್ ಅವರಿಗೆ ನೆನಪಿದೆ. ಆ ಮೂವತ್ತು ರೂಪಾಯಿ ಋಣವನ್ನು ಇಷ್ಟು ಅದ್ಭುತವಾಗಿ ಅರ್ಥವಾಗಿ ತೀರಿಸಿದ್ದಾರೆ ಗಿರಿಜಾ ಲೋಕೇಶ್.
ಇದನ್ನೂ ಓದಿ:50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶೈಲಶ್ರೀ ಅವರ ಪತಿ ಸುದರ್ಶನ್ ಅವರಿಗೆ ಹುಷಾರು ತಪ್ಪಿದಾಗ ಮೊದಲು ಧಾವಿಸಿ ಬಂದಿದ್ದು ಗಿರಿಜಾ ಲೋಕೇಶ್ ಅವರೇ ಅಂತೆ. ಅದಾದ ಬಳಿಕ ಶೈಲಶ್ರೀ ಅವರಿಗೆ ಕ್ಯಾನ್ಸರ್ ಆಗಿದೆ ಎಂಬ ವಿಷಯ ಗೊತ್ತಾದಾಗ ಮೊದಲಿಗೆ ಬಂದು ಶೈಲಶ್ರೀ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿ, ಕೈಗೆ ಹಣವಿಟ್ಟು ಹೋಗಿದ್ದರಂತೆ. ಆ ಬಳಿಕ ಅವರ ಚಿಕಿತ್ಸೆಗೆ ಹಣ ನೀಡಿದ್ದು ಮಾತ್ರವೇ ಅಲ್ಲದೆ ಈಗಲೂ ಅವರಿಗೆ ಬೆನ್ನೆಲುಬಾಗಿ ಗಿರಿಜಾ ಲೋಕೇಶ್ ನಿಂತಿದ್ದಾರೆ.
ಮಾವ ಸುಬ್ಬಯ್ಯ ನಾಯ್ಡು, ಪತಿ ಲೋಕೇಶ್ ಅವರ ಹೆಸರು ಘನತೆ ಉಳಿಸುವ ಕಾರ್ಯವನ್ನು ಗಿರಿಜಾ ಲೋಕೇಶ್ ಮಾಡುತ್ತಿದ್ದಾರೆ. ಶೈಲಶ್ರೀ ಮಾತ್ರವೇ ಅಲ್ಲದೆ ಕನ್ನಡ ಚಿತ್ರರಂಗದ ಇನ್ನೂ ಕೆಲವು ಹಿರಿಯ ಜೀವಗಳಿಗೆ ಕೈಲಾದ ಮಟ್ಟಿಗೆ ನೆರವಾಗುತ್ತಿದ್ದಾರಂತೆ ಗಿರಿಜಾ ಲೋಕೇಶ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ