ಬಿಡುಗಡೆ ಆಗಲಿದೆ ‘GST’ ಸಿನಿಮಾ, ಇದೆ ಹಲವು ವಿಶೇಷತೆಗಳು
ಕನ್ನಡದಲ್ಲಿ ಭಿನ್ನ ಹೆಸರಿನ ಸಿನಿಮಾಗಳು ಬರುತ್ತಿವೆ. ಉಪೇಂದ್ರ ‘ಯುಐ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಹೊಸ ತಂಡವೊಂದು ‘ಸಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಇದೀಗ ‘ಜಿಎಸ್ಟಿ’ ಹೆಸರಿನ ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಶೀಘ್ರ ಬಿಡುಗಡೆ ಆಗಲಿದೆ.
ಕನ್ನಡದಲ್ಲಿ ಭಿನ್ನ ಹೆಸರಿನ ಸಿನಿಮಾಗಳು ಒಂದರ ಹಿಂದೊಂದು ತೆರೆಗೆ ಬರುತ್ತಿವೆ. ಉಪೇಂದ್ರ ಆರಂಭಿಸಿದ ಈ ಟ್ರೆಂಡ್ ಇಂದಿಗೂ ನಡೆದುಕೊಂಡು ಬರುತ್ತಿದೆ. ಇದೀಗ ಉಪೇಂದ್ರ ‘ಯುಐ’ ಎಂದು ಭಿನ್ನ ಹೆಸರಿಟ್ಟು ಸಿನಿಮಾ ಮಾಡುತ್ತಿದ್ದಾರೆ. ಇನ್ನೊಂದು ಹೊಸ ತಂಡ ‘ಸಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ‘ಜಿಎಸ್ಟಿ’ ಹೆಸರಿನ ಸಿನಿಮಾ ಸಹ ನಿರ್ಮಾಣಗೊಂಡಿದೆ. ಸೃಜನ್ ಲೋಕೇಶ್ ನಟಿಸಿರುವ ‘ಜಿಎಸ್ಟಿ’ ಸಿನಿಮಾ ಇತ್ತೀಚೆಗಷ್ಟೆ ಚಿತ್ರೀಕರಣ ಮುಗಿಸಿದ್ದು ಶೀಘ್ರವೇ ಬಿಡುಗಡೆ ಸಹ ಆಗಲಿದೆ. ಅಂದಹಾಗೆ ಈ ‘ಜಿಎಸ್ಟಿ’ ಸಿನಿಮಾಕ್ಕೂ ತೆರಿಗೆಗೂ ಯಾವುದೇ ಸಂಬಂಧವಿಲ್ಲ.
ನಿರ್ಮಾಪಕ ಸಂದೇಶ್ ಅವರು ‘ಜಿಎಸ್ಟಿ’ ಸಿನಿಮಾ ನಿರ್ಮಾಣ ಮಾಡುತ್ತಿದ್ದು ಸೃಜನ್ ಲೋಕೇಶ್ ನಾಯಕನಾಗಿ ನಟಿಸಿದ್ದಾರೆ. ಮಾತ್ರವಲ್ಲದೆ ಪ್ರಥಮ ಬಾರಿಗೆ ನಿರ್ದೇಶನವನ್ನು ಸಹ ಮಾಡಿದ್ದಾರೆ. ‘GST’ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಮುಕ್ತಾಯ ಆಗಿದೆ. ಕಬಿನಿ ಬಳಿಯ ಸಂದೇಶ್ ಅವರ ಹೊಸ ರೆಸಾರ್ಟ್ ನಲ್ಲಿ ನಾಯಕ ಸೃಜನ್ ಹಾಗೂ ನಾಯಕಿ ರಜನಿ ಭಾರದ್ವಾಜ್ ನಟಿಸಿದ ಹಾಡೊಂದರ ಚಿತ್ರೀಕರಣ ಹಾಗೂ ಮೈಸೂರಿನಲ್ಲಿ ಸೃಜನ್ ಲೋಕೇಶ್, ಸಂಹಿತ ವಿನ್ಯ, ತಬಲನಾಣಿ, ಗಿರೀಶ್ ಶಿವಣ್ಣ, ವಿನೋದ್ ಗೊಬ್ಬರಗಾಲ ಮುಂತಾದವರು ಅಭಿನಯಿಸಿದ ಮತ್ತೊಂದು ಹಾಡಿನ ಚಿತ್ರೀಕರಣ ನಡೆದಿದೆ. ಈ ಹಾಡುಗಳನ್ನು ಸೃಜನ್ ಲೋಕೇಶ್ ಹಾಗೂ ಚಂದನ್ ಶೆಟ್ಟಿ ಬರೆದಿದ್ದಾರೆ. ಈ ಎರಡು ಹಾಡುಗಳ ಚಿತ್ರೀಕರಣದೊಂದಿಗೆ “ಜಿ ಎಸ್ ಟಿ” ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ. ಈಗ ಸಿನಿಮಾದ ಸಿಜಿ ಕಾರ್ಯ ನಡೆಯಲಿದೆ.
ಇದನ್ನೂ ಓದಿ:ಆ್ಯಂಕರ್ಗೆ ದುಡ್ಡು ಕೊಡಲ್ಲ ಸೃಜನ್ ಲೋಕೇಶ್; ತಾರಾ ಹೊಸ ಆರೋಪ
‘GST’ ಸಿನಿಮಾ ಕೆಲ ವಿಶೇಷತೆಗಳನ್ನು ಒಳಗೊಂಡಿದೆ. ಈ ಸಿನಿಮಾದ ನಿರ್ಮಾಪಕ ಸಂದೇಶ್, ಪ್ರಮುಖ ಪಾತ್ರದಲ್ಲಿ ನಟಸಿದ್ದಾರೆ ಸಹ. ಆದರೆ ಅವರು ಯಾವ ಪಾತ್ರದಲ್ಲಿ ನಟಿಸಿದ್ದಾರೆ ಎಂಬುದನ್ನು ನಿರ್ದೇಶಕ ಸೃಜನ್ ಗುಟ್ಟಾಗಿ ಇಟ್ಟಿದ್ದಾರೆ. ಈ ಸಿನಿಮಾದಲ್ಲಿ ಸೃಜನ್ರ ತಾಯಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಅವರ ಪುತ್ರ ಸುಕೃತ್ ಮೂರು ಜನ ಅಭಿನಯಿಸಿರುವುದು ವಿಶೇಷ. ಅಜ್ಜಿ, ಮಗ ಹಾಗೂ ಮೊಮ್ಮಗ ಮೂರು ಜನರನ್ನು ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ‘GST’ ಸಿನಿಮಾ ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಜಿಎಸ್ಟಿ ಎಂದರೆ “ಘೋಸ್ಟ್ ಇನ್ ಟ್ರಬಲ್” ಎಂದರ್ಥ.
ನಾಯಕ ಸೃಜನ್ ಲೋಕೇಶ್ಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟನೆ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ, ಗಿರಿಜಾ ಲೋಕೇಶ್, ಶೋಭ್ ರಾಜ್, ಶರತ್ ಲೋಹಿತಾಶ್ವ, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ, ಮಾಸ್ಟರ್ ಸುಕೃತ್ ಮುಂತಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಹಾಗೂ ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ತೇಜಸ್ವಿ ಕೆ ನಾಗ್ ಈ ಚಿತ್ರದ ಸಹ ನಿರ್ದೇಶಕರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ