ಹೊಸ ಸಿನಿಮಾ ಪ್ರೋಮೊ ಬಿಡುಗಡೆ ದಿನಾಂಕ ಘೋಷಿಸಿದ ಸುದೀಪ್

|

Updated on: Apr 29, 2023 | 3:32 PM

Kichcha Sudeep New Movie: ಚುನಾವಣಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಟ ಸುದೀಪ್, ಚುನಾವಣೆ ಮುಗಿಯುತ್ತಿದ್ದಂತೆ ಸಿನಿಮಾ ಕಾರ್ಯಕ್ಕೆ ಮರಳಲಿದ್ದಾರೆ. ತಮ್ಮ ಹೊಸ ಸಿನಿಮಾದ ಪ್ರೋಮೋ ಚಿತ್ರೀಕರಣ ಹಾಗೂ ಬಿಡುಗಡೆ ದಿನಾಂಕವನ್ನು ಅವರು ಘೋಷಿಸಿದ್ದಾರೆ.

ಹೊಸ ಸಿನಿಮಾ ಪ್ರೋಮೊ ಬಿಡುಗಡೆ ದಿನಾಂಕ ಘೋಷಿಸಿದ ಸುದೀಪ್
ಸುದೀಪ್
Follow us on

ಬಿಜೆಪಿ (BJP) ಪಕ್ಷದ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರ (Election Campaign) ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ ಸುದೀಪ್ (Sudeep). ಪ್ರತಿದಿನ ನೂರಾರು ಕಿ.ಮೀಗಳ ಪ್ರಯಾಣ ಬೆಳೆಸಿ ಬಿಸಿಲಿನಲ್ಲಿ ರ್ಯಾಲಿಗಳನ್ನು ನಡೆಸಿ ಭಾಷಣಗಳನ್ನು ಮಾಡಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಆದರೆ ಚುನಾವಣಾ ಪ್ರಕ್ರಿಯೆಗಳು ಮುಗಿದ ಕೂಡಲೇ ಸಣ್ಣ ವಿರಾಮ ಪಡೆದು ಮತ್ತೆ ಸಿನಿಮಾ (Movie) ಕಡೆಗೆ ಗಮನವಹಿಸಲಿದ್ದಾರೆ ಸುದೀಪ್.

ವಿಕ್ರಾಂತ್ ರೋಣ (Vikranth Rona) ಸಿನಿಮಾದ ಬಳಿಕ ದೊಡ್ಡ ಗ್ಯಾಪ್ ತೆಗೆದುಕೊಂಡಿರುವ ಸುದೀಪ್, ಪ್ರಸ್ತುತ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅದರಲ್ಲಿ ಒಂದು ಸಿನಿಮಾದ ಪ್ರೋಮೊ ಚಿತ್ರೀಕರಣವನ್ನು ಮಾಡಲು ಮುಂದಾಗಿರುವ ಬಗ್ಗೆ ಸುದೀಪ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಮೂರು ಸಿನಿಮಾಗಳಲ್ಲಿ ಒಂದರ ಪ್ರೋಮೋ ಚಿತ್ರೀಕರಣದಲ್ಲಿ ಮೇ 22ರಂದು ಭಾಗವಹಿಸಲಿದ್ದೇನೆ ಎಂಬ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ಬಹಳ ಖುಷಿಯಾಗುತ್ತಿದೆ. ಜೂನ್ 1 ರಂದು ಪ್ರೋಮೋ ಲಾಂಚ್ ಆಗಲಿದೆ. ನನ್ನ ಬಹಳ ಇಷ್ಟದ ಮಾದರಿಯ ಕತೆ ಹಾಗೂ ಚಿತ್ರಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಎಂದು ಟ್ವೀಟ್ ಮಾಡಿದ್ದಾರೆ ಸುದೀಪ್.

ಯಾವ ಸಿನಿಮಾದ ಪ್ರೋಮೋ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ಸುದೀಪ್ ಬಿಟ್ಟುಕೊಟ್ಟಿಲ್ಲವಾದರೂ, ಕೆಲವು ಮೂಲಗಳ ಪ್ರಕಾರ, ಬಿಲ್ಲಾ ರಂಗ ಭಾಷಾ ಸಿನಿಮಾದ ಪ್ರೋಮೊ ಚಿತ್ರೀಕರಣ ಇದಾಗಿರಲಿದೆ ಎಂದು ಊಹಿಸಲಾಗುತ್ತಿದೆ. ಬಿಲ್ಲಾ ರಂಗ ಭಾಷಾ ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಲಿದ್ದಾರೆ. ವಿಕ್ರಾಂತ್ ರೋಣ ಸಿನಿಮಾವನ್ನು ಸಹ ಇವರೇ ನಿರ್ದೇಶನ ಮಾಡಿದ್ದರು. ಅನುಪ್ ಭಂಡಾರಿ ಹಾಗೂ ಸುದೀಪ್ ದ್ರೋಣ ಹೆಸರಿನ ಸಿನಿಮಾ ಮಾಡುವುದಾಗಿ ಸುದ್ದಿಯಾಗಿತ್ತು ಆದರೆ ಆ ಪ್ರಾಜೆಕ್ಟ್​ ಬದಲಿಗೆ ಬಿಲ್ಲಾ ರಂಗ ಭಾಷಾ ಕೈಗೆತ್ತಿಕೊಂಡಿದ್ದಾರೆ.

ಇದರ ಹೊರತಾಗಿ ಇನ್ನೂ ಎರಡು ಸಿನಿಮಾಗಳಲ್ಲಿ ಸುದೀಪ್ ನಟಿಸಲಿದ್ದಾರೆ. ತಮಿಳಿನ ಹಿಟ್ ನಿರ್ದೇಶಕ ಚರಣ್, ಸುದೀಪ್​ಗಾಗಿ ಬಹುಭಾಷೆಯ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದ ಕತೆ, ಶೆಡ್ಯೂಲ್ ಅಂತಿಮವಾಗಿವೆ. ಬಿಲ್ಲಾ ರಂಗ ಭಾಷಾ ಹಾಗೂ ಚರಣ್ ಜೊತೆಗಿನ ಸಿನಿಮಾ ಬಹುತೇಕ ಒಟ್ಟೊಟ್ಟಿಗೆ ಚಿತ್ರೀಕರಣಗೊಳ್ಳಲಿವೆ ಎನ್ನಲಾಗುತ್ತಿವೆ. ಇವೆರಡು ಸಿನಿಮಾಗಳ ಬಳಿಕ ನಂದ ಕಿಶೋರ್ ಅವರು ಸುದೀಪ್​ಗಾಗಿ ಸಿನಿಮಾ ಒಂದನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ.

ಇದರ ಜೊತೆಗೆ ಹೊಂಬಾಳೆ ಫಿಲಮ್ಸ್​ ನಿರ್ಮಾಣ ಮಾಡಲಿರುವ ಸಿನಿಮಾ ಒಂದರಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೆ ಹೊರಬೀಳಬೇಕಿವೆ. ವಿಕ್ರಾಂತ್ ರೋಣ ಸಿನಿಮಾದ ಬಳಿಕ ಕಬ್ಜ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಷ್ಟೆ ಸುದೀಪ್ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ