Dwarakish: ದ್ವಾರಕೀಶ್ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳು; ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ನಟ
‘ನಿಮ್ಮ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ. ಗಟ್ಟಿಮುಟ್ಟಾಗಿದ್ದೀನಿ, ಯಾವುದೇ ಚಿಂತೆ ಇಲ್ಲದೇ ನಗುನಗುತ್ತಾ ಇದ್ದೇನೆ’ ಎಂದು ದ್ವಾರಕೀಶ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಸುದ್ದಿಗಳು ಬಹುಬೇಗ ಹರಡುತ್ತವೆ. ಅದರಲ್ಲೂ ನೆಗೆಟಿವ್ ವಿಚಾರಗಳು ಕಾಡ್ಗಿಚ್ಚಿನಂತೆ ಹಬ್ಬುತ್ತವೆ. ಅದನ್ನೇ ಬಂಡವಾಳ ಮಾಡಿಕೊಂಡು ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು (Fake News) ಹಬ್ಬಿಸುತ್ತಾರೆ. ಸೆಲೆಬ್ರಿಟಿಗಳ ಸಾವಿನ ಬಗ್ಗೆಯೂ ವದಂತಿ (Death Hoax) ಹರಡಿಸಲಾಗುತ್ತದೆ. ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಬಗ್ಗೆಯೂ ಅಂಥ ಸುಳ್ಳು ಸುದ್ದಿ ಹರಡಿದೆ. ಆ ವದಂತಿ ಕೇಳಿದ ಅಭಿಮಾನಿಗಳಿಗೆ ಒಂದರೆಕ್ಷಣ ಆತಂಕ ಆಗಿದ್ದು ನಿಜ. ಆದರೆ ಆ ಕುರಿತಾಗಿ ಸ್ವತಃ ದ್ವಾರಕೀಶ್ (Dwarakish) ಅವರು ಸ್ವಷ್ಟನೆ ನೀಡಿದ್ದಾರೆ. ‘ನಾನು ಚೆನ್ನಾಗಿದ್ದೀನಿ’ ಎಂದು ಅವರು ಹೇಳಿದ್ದಾರೆ. ಈ ವಿಡಿಯೋ ನೋಡಿದ ಬಳಿಕ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
‘ಎಲ್ಲರಿಗೂ ನಮಸ್ಕಾರ.. ನಾನು ನಿಮ್ಮ ದ್ವಾರಕೀಶ್. ನೀವೇ ಸಾಕಿದ ದ್ವಾರಕೀಶ್. ನಿಮ್ಮ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ. ನಿಮ್ಮ ಆಶೀರ್ವಾದ ನನಗೆ ಬೇಕು. ನಾನು ಗಟ್ಟಿಮುಟ್ಟಾಗಿದ್ದೀನಿ. ಯಾವುದೇ ಚಿಂತೆ ಇಲ್ಲದೇ ನಗುನಗುತ್ತಾ ಇದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ಇದೇ ರೀತಿ ಇರಲಿ. ನಿಮ್ಮ ಆಶೀರ್ವಾದ ಇರುವ ತನಕ ನನಗೆ ಏನೂ ತೊಂದರೆ ಆಗುವುದಿಲ್ಲ. ಐ ಆ್ಯಮ್ ಫೈನ್’ ಎಂದು ದ್ವಾರಕೀಶ್ ಹೇಳಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್ ಅವರು ನೀಡಿದ ಕೊಡುಗೆ ಅಪಾರ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ತಮ್ಮ ಛಾಪು ಮೂಡಿಸಿದ್ದಾರೆ. 1966ರಿಂದ ಇಂದಿನ ತನಕವೂ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ‘ದ್ವಾರಕೀಶ್ ಚಿತ್ರ’ ನಿರ್ಮಾಣ ಸಂಸ್ಥೆ ಮೂಲಕ ಅವರು ಹಲವಾರು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್ ಮುಂತಾದ ಲೆಜೆಂಡರಿ ನಟರ ಜೊತೆ ಕೆಲಸ ಮಾಡಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: Dwarakish: ಸಕಲಕಲಾವಲ್ಲಭ ಹಿರಿಯ ನಟ ದ್ವಾರಕೀಶ್ ಅವರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಘೋಷಣೆ
ಕನ್ನಡ ಚಿತ್ರಗಳಷ್ಟೇ ಅಲ್ಲದೇ ಹಿಂದಿ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಚಿತ್ರರಂಗಕ್ಕೆ ಅವರು ಮಾಡಿದ ಸೇವೆಯನ್ನು ಮನಗೊಂಡು ಬೆಂಗಳೂರು ವಿಶ್ವವಿದ್ಯಾನಿಲಯ 2022ರ ಡಿ. 5ರಂದು ನಡೆದ 57ನೇ ಘಟಿಕೋತ್ಸವದಲ್ಲಿ ದ್ವಾರಕೀಶ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತ್ತು. ದ್ವಾರಕೀಶ್ ಅವರು 80ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ 2022ರಲ್ಲಿ ಕರ್ನಾಟಕ ಫಿಲ್ಮ್ ಚೇಂಬರ್ನಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆಗ ದ್ವಾರಕೀಶ್ ಅವರು ಭಾವುಕರಾಗಿದ್ದರು. ನಟಿ ಭವ್ಯಾ ಅವರು ದ್ವಾರಕೀಶ್ ಅವರಿಗಾಗಿ ವಿಶೇಷ ಹಾಡನ್ನು ಹಾಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:27 pm, Sun, 30 April 23