Dwarakish: ಸಕಲಕಲಾವಲ್ಲಭ ಹಿರಿಯ ನಟ ದ್ವಾರಕೀಶ್ ಅವರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್​​ ಘೋಷಣೆ

ನಟ, ನಿರ್ದೇಶಕ ಮತ್ತು ನಿರ್ಮಾಪಕ ಸ್ಯಾಂಡಲ್‌ವುಡ್‌ನ (Sandalwood) ಸಕಲಕಲಾವಲ್ಲಭ ಹಿರಿಯ ನಟ ದ್ವಾರಕೀಶ್ ಅವರು ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ.

Dwarakish: ಸಕಲಕಲಾವಲ್ಲಭ ಹಿರಿಯ ನಟ ದ್ವಾರಕೀಶ್ ಅವರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್​​ ಘೋಷಣೆ
ಹಿರಿಯ ನಟ ದ್ವಾರಕೀಶ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Nov 25, 2022 | 10:37 PM

ನಟ, ನಿರ್ದೇಶಕ ಮತ್ತು ನಿರ್ಮಾಪಕ ಸ್ಯಾಂಡಲ್‌ವುಡ್‌ನ (Sandalwood) ಸಕಲಕಲಾವಲ್ಲಭ ಹಿರಿಯ ನಟ ದ್ವಾರಕೀಶ್ (Dwarakish) ಅವರು ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಶೈಲಿಯಲ್ಲಿ ಕೊಡುಗೆ ನೀಡುತ್ತ ಬಂದಿರುವ ದ್ವಾರಕೀಶ್ ಅವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್​​ ಘೋಷಣೆ ಮಾಡಿದೆ. ಈ ವಿಚಾರ ದ್ವಾರಕೀಶ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಜೊತೆಗೆ ಚಿತ್ರರಂಗದ ಹಲವರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಹಿರಿಯ ನಟ ದ್ವಾರಕೀಶ್ ಅವರು ಮೂಲತಃ ಮೈಸೂರಿನವರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಮಾಡಿದ್ದು, ನಂತರ ಅವರ ಸೋದರನ ಜೊತೆ ಸೇರಿ ‘ಭಾರತ್ ಆಟೋ ಸ್ಪೇರ್ ಸ್ಟೋರ್’ ಶುರುಮಾಡುತ್ತಾರೆ. ಆದರೆ ನಟನೆ ಇವರನ್ನು ಕೈಬೀಸಿ ಕರೆಯುತ್ತದೆ. ಹಾಗಾಗಿ 1963ರಲ್ಲಿ ವ್ಯಾಪಾರ ಬಿಟ್ಟು ನಟನೆಯನ್ನು ಆಯ್ದುಕೊಳ್ಳುತ್ತಾರೆ. ಹಲವು ಅವಕಾಶಗಳು ಕೈತಪ್ಪಿ ಹೋದ ಬಳಿಕ 1964ರಲ್ಲಿ ತೆರೆಕಂಡ ‘ವೀರಸಂಕಲ್ಪ’ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಅಲ್ಲಿಂದ ನಟ ದ್ವಾರಕೀಶ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ನಟನಾ ಶೈಲಿಯಿಂದ ಮನೆಮಾತಾಗುತ್ತಾರೆ. ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ‘ಕಳ್ಳ-ಕುಳ್ಳ’ ಜೋಡಿ ಎಂದು ಪ್ರಸಿದ್ಧ.

‘ಜನ್ಮರಹಸ್ಯ’, ‘ಮಂಕುತಿಮ್ಮ’, ‘ಪೆದ್ದ ಗೆದ್ದ’, ‘ಕಿಟ್ಟು ಪುಟ್ಟು’, ‘ಸಿಂಗಾಪುರದಲ್ಲಿ ರಾಜಾಕುಳ್ಳ’, ‘ಆಪ್ತಮಿತ್ರ’, ‘ಪ್ರಚಂಡ ಕುಳ್ಳ’, ‘ಗುರುಶಿಷ್ಯರು’, ‘ಆಟಗಾರ’, ‘ವಿಷ್ಣುವರ್ಧನ್’ ಹೀಗೆ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಕೇವಲ ನಟನೆ ಮಾತ್ರವಲ್ಲದೇ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಸಹ ಹೊಂದಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. 15ಕ್ಕೂ ಹೆಚ್ಚು ಚಿತ್ರಗಳಿಗೆ ಆ್ಯಕ್ಷನ್ ಕಟ್​ ಹೇಳಿದ್ದಾರೆ. ವಿದೇಶದಲ್ಲಿ ಚಿತ್ರೀಕರಣ ಮಾಡಿದ ಮೊದಲ ನಟ ಎಂಬ ಕೀರ್ತಿ ನಟ ದ್ವಾರಕೀಶ್ ಅವರಿಗೆ ಸಲ್ಲುತ್ತದೆ.

ಕನ್ನಡ ಚಿತ್ರಗಳಷ್ಟೇ ಅಲ್ಲದೇ ಹಿಂದಿ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಚಿತ್ರರಂಗಕ್ಕೆ ಅವರು ಗೈದ ಸೇವೆಯನ್ನು ಮನಗೊಂಡು ಬೆಂಗಳೂರು ವಿಶ್ವವಿದ್ಯಾನಿಲಯ ಡಿ. 5ರಂದು ನಡೆಯಲಿರುವ 57ನೇ ಘಟಿಕೋತ್ಸವದಲ್ಲಿ ದ್ವಾರಕೀಶ್​ ಅವರಿಗೆ ಗೌರವ ಡಾಕ್ಟರೇಟ್​ ಪ್ರದಾನ ಮಾಡಲಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.