‘ನನ್ನ ಬೆಲೆ ಆ ಸೌಪರ್ಣಿಕಾಗಿಂತ ಹೆಚ್ಚು’; ಹರ್ಷನಿಗೆ ಚುಚ್ಚಿ ಮಾತನಾಡಿದ ಭುವಿ
ಹರ್ಷ ಹಾಗೂ ಭುವಿ ಪ್ರೀತಿಸಿ ಮದುವೆ ಆದವರು. ಹಲವು ಅಡೆತಡೆಗಳನ್ನು ಎದುರಿಸಿ ಇಬ್ಬರೂ ಮದುವೆ ಆಗಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ವರುಧಿನಿ ಹಾಗೂ ಸಾನಿಯಾ ಮಾಡುತ್ತಿರುವ ಸಂಚುಗಳಿಂದ ಇವರ ಸಂಬಂಧದಲ್ಲಿ ಬಿರುಕು ಮೂಡುತ್ತಿದೆ
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಭುವಿ ಬಳಿ ಹರ್ಷ ಸುಳ್ಳು ಹೇಳಿದ್ದ. ಅದು ವಿಲ್ ವಿಚಾರದಲ್ಲಿ. ವಿಲ್ ವಿಚಾರದ ಬಗ್ಗೆ ತನಗೆ ಮೊದಲೇ ಗೊತ್ತಿತ್ತು ಎಂಬುದನ್ನು ಪ್ರತಿಪಾದಿಸಿದ್ದ. ಆದರೆ, ಆತನಿಗೆ ಈ ವಿಚಾರ ಗೊತ್ತೇ ಇರಲಿಲ್ಲ. ವರುಧಿನಿ ಕೂಡ ಇದೇ ಮಾದರಿಯ ಸುಳ್ಳನ್ನು ಹೇಳಿದ್ದಳು. ಎರಡೂ ಸುಳ್ಳುಗಳು ಲಿಂಕ್ ಆಗಿವೆ. ಇದರಿಂದ ಭುವಿಗೆ ಹರ್ಷನ ಮೇಲೆ ಅನುಮಾನ ಹೆಚ್ಚಾಗಿದೆ.
ಹರ್ಷ ಹಾಗೂ ಭುವಿ ಮಧ್ಯೆ ಅಂತರ
ಹರ್ಷ ಹಾಗೂ ಭುವಿ ಪ್ರೀತಿಸಿ ಮದುವೆ ಆದವರು. ಹಲವು ಅಡೆತಡೆಗಳನ್ನು ಎದುರಿಸಿ ಇಬ್ಬರೂ ಮದುವೆ ಆಗಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ವರುಧಿನಿ ಹಾಗೂ ಸಾನಿಯಾ ಮಾಡುತ್ತಿರುವ ಸಂಚುಗಳಿಂದ ಇವರ ಸಂಬಂಧದಲ್ಲಿ ಬಿರುಕು ಮೂಡುತ್ತಿದೆ. ಈಗ ವರುಧಿನಿ ಮಾಡಿದ ಕೆಲಸದಿಂದ ಹರ್ಷ ಹಾಗೂ ಭುವಿ ಬೇರೆ ಆಗುವ ಸೂಚನೆ ಸಿಕ್ಕಿದೆ.
‘ಸೌಪರ್ಣಿಕಾ ಎಂಬ ಹೆಸರು ಇದ್ದಿದ್ದರಿಂದಲೇ ನಿನ್ನನ್ನು ಹರ್ಷ ಮದುವೆ ಆಗಿದ್ದಾನೆ’ ಎಂದು ಭುವಿ ಬಳಿ ಸುಳ್ಳು ಹೇಳಿದ್ದಾಳೆ ವರುಧಿನಿ. ಈ ಸುಳ್ಳನ್ನು ನಂಬುವಂತಹ ಘಟನೆಗಳು ನಡೆದವು. ಇದು ವರುಗೆ ವರದಾನವಾಗಿದೆ. ಆಕೆ ಮಾಡುತ್ತಿರುವ ಸಂಚುಗಳು ಯಶಸ್ಸು ಕಾಣುತ್ತಿವೆ. ಈಗ ಹರ್ಷ ಹಾಗೂ ಭುವಿ ಮಧ್ಯೆ ಬೆಂಕಿಕಡ್ಡಿ ಗೀರಿದ್ದಾಳೆ. ಇದು ದೊಡ್ಡ ಕಾಡ್ಗಿಚ್ಚಾಗಿ ಹಬ್ಬುವ ಸೂಚನೆ ಸಿಕ್ಕಿದೆ.
ಚರ್ಚೆಗೆ ಬಂತು ಸೌಪರ್ಣಿಕಾ ವಿಚಾರ
ಭುವಿಗೆ ಹರ್ಷ ಕರೆ ಮಾಡಿದ್ದಾನೆ. ರಸ್ತೆ ಬದಿಯಲ್ಲಿ ಟೀ ಕುಡಿಯಲು ಇಬ್ಬರೂ ಕಾರಿನಲ್ಲಿ ತೆರಳಿದ್ದಾಳೆ. ಭುವಿ ಯಾವಾಗಲೂ ಹರ್ಷನ ಪಕ್ಕ ಕುಳಿತುಕೊಳ್ಳುವವಳು ಈ ಬಾರಿ ಕಾರಿನ ಮುಂಭಾಗಕ್ಕೆ ಬಂದು ಕೂತಿದ್ದಾಳೆ. ಇವರ ಮಧ್ಯೆ ಅಂತರ ಮೂಡುತ್ತಿದೆ ಎಂಬುದನ್ನು ಸೂಚ್ಯವಾಗಿ ತೋರಿಸಲಾಗಿದೆ. ಹರ್ಷನ ಹೆಗಲ ಮೇಲೆ ಕೈ ಹಾಕಿ ಸಮಾಧಾನ ಮಾಡಬೇಕು ಎಂದು ಭುವಿ ಅಂದುಕೊಂಡಳು. ಅದೇ ವೇಳೆ ಹರ್ಷ ಕೂಡ ಭುವಿಯ ಕೈ ಹಿಡಿದುಕೊಳ್ಳಬೇಕು ಎಂದುಕೊಂಡ. ಆದರೆ, ಇಬ್ಬರೂ ಮುಂದುವರಿದಿಲ್ಲ. ಹೀಗಾಗಿ, ಇಬ್ಬರ ಮಧ್ಯೆ ಅಂತರ ಉಳಿದುಕೊಂಡಿದೆ.
ಹರ್ಷ ಹಾಗೂ ಭುವಿ ಟೀ ಹೀರಿದ್ದಾರೆ. ಹರ್ಷ ವಕೀಲರನ್ನು ಭೇಟಿ ಮಾಡಲು ಹೋದಾಗ ವರುಧಿನಿ ವಾಯ್ಸ್ ನೋಟ್ ಒಂದನ್ನು ಕಳುಹಿಸಿದ್ದಳು. ‘ನಾನು ಹೇಳಿದ್ದು ನಿಜ. ಯಾರ ಮೇಲೆ ಬೇಕಾದರೂ ಆಣೆ ಮಾಡಿ ಹೇಳುತ್ತೇನೆ’ ಎಂದು ಹೇಳಿದ್ದಾಳೆ. ಇದು ಭುವಿಗೆ ಶಾಕ್ ನೀಡಿದೆ. ಹರ್ಷ ಮರಳಿದ ನಂತರ ಮತ್ತೆ ಹಿಂಭಾಗಕ್ಕೆ ಹೋಗಿ ಕುಳಿತಿದ್ದಾಳೆ. ‘ಆ ಸೌಪರ್ಣಿಕಾಗಿಂತ ಈ ಸೌಪರ್ಣಿಕಾ ಬೆಲೆ ಹೆಚ್ಚು. ಹೀಗಾಗಿ ನನಗೆ ನಿಮ್ಮ ರಕ್ಷಣೆ ಬೇಕು’ ಎಂದು ತಿವಿದಿದ್ದಾಳೆ.
ವಕೀಲರು ಸೌಪರ್ಣಿಕಾ ಎನ್ನುವ ಹುಡುಗಿಯನ್ನು ಹುಡುಕು ಎಂದು ಹರ್ಷನಿಗೆ ಹೇಳಿದ್ದರು. ಆಕೆಯ ಹೆಸರಿಗೆ ಆಸ್ತಿ ಬರೆಯಲಾಗಿದೆ ಎಂಬ ಕಾರಣಕ್ಕೆ ಅವರು ಈ ರೀತಿ ಹೇಳಿದ್ದರು. ಈ ವೇಳೆ ಹರ್ಷ ತಪ್ಪಾದ ಸೌಪರ್ಣಿಕಾಳನ್ನು ಹುಡುಕಿದ್ದ. ಆಕೆಯ ಜೀವಕ್ಕೂ ಅಪಾಯ ಬಂದೊದಗಿತ್ತು. ಇದು ಭುವಿ ಮನಸ್ಸಿನಲ್ಲಿದೆ.
ಅಸ್ಥಿ ವಿಸರ್ಜನೆ ದಿನ ಕೂಗಾಟ?
ಅಸ್ಥಿ ಬಿಡುವ ದಿನ ಆಸ್ತಿಯಲ್ಲಿ ಭಾಗ ಕೇಳಬೇಕು ಎಂದು ಸುದರ್ಶನ್ ಪ್ಲ್ಯಾನ್ ಮಾಡಿಕೊಂಡಿದ್ದಾನೆ. ಅದು ಇತ್ಯರ್ಥವಾದರೆ ಮನೆ ಬಿಟ್ಟು ಹೋಗುವ ಆಲೋಚನೆ ಅವನದ್ದು. ಎಲ್ಲ ಆಸ್ತಿ ಹರ್ಷನ ಹೆಸರಿಗೆ ಇದೆ ಎಂದು ಆತ ಅಂದುಕೊಂಡಿದ್ದಾನೆ. ಆದರೆ, ಅಲ್ಲಿಯ ಅಸಲಿಯತ್ತೇ ಬೇರೆ. ಹೀಗಾಗಿ, ಅಸ್ಥಿ ವಿಸರ್ಜನೆ ದಿನ ದೊಡ್ಡ ಜಗಳ ನಡೆದರೂ ಅಚ್ಚರಿ ಏನಿಲ್ಲ. ವರುಧಿನಿ ಕೂಡ ಇದೇ ಮಾತನ್ನು ಹೇಳಿದ್ದಾಳೆ.
ಶ್ರೀಲಕ್ಷ್ಮಿ ಎಚ್.