ಅರ್ಧ ಕೋಟಿಗೆ ಕುಸಿದ ‘ಡೆವಿಲ್’ ಕಲೆಕ್ಷನ್; ಕೈ ಹಿಡಿಯಬೇಕಿದೆ ಅಭಿಮಾನಿಗಳು
'ಡೆವಿಲ್' ಸಿನಿಮಾ ಕಲೆಕ್ಷನ್ ದಿನೇ ದಿನೇ ಕುಸಿತ ಕಾಣುತ್ತಿದೆ. ಆರಂಭಿಕ ಉತ್ತಮ ಗಳಿಕೆಯ ನಂತರವೂ, ಚಿತ್ರದ ಬೃಹತ್ ಬಜೆಟ್‌ಗೆ ಹೋಲಿಸಿದರೆ ಪ್ರಸ್ತುತ ಗಳಿಕೆ ಸಾಕಾಗುತ್ತಿಲ್ಲ. ಗುರುವಾರ ಕಲೆಕ್ಷನ್ ತೀವ್ರವಾಗಿ ಇಳಿದಿದ್ದು, ಅಭಿಮಾನಿಗಳ ಬೆಂಬಲ ಅನಿವಾರ್ಯವಾಗಿದೆ. ಮುಂಬರುವ ವಾರ ಹೊಸ ಕನ್ನಡ ಚಿತ್ರಗಳ ಬಿಡುಗಡೆಯಿಂದ 'ಡೆವಿಲ್' ಇನ್ನಷ್ಟು ಸವಾಲು ಎದುರಿಸಲಿದೆ.

‘ಡೆವಿಲ್’ ಸಿನಿಮಾ ಕಲೆಕ್ಷನ್ (Devil Movie Collection) ದಿನ ಕಳೆದಂತೆ ಕುಸಿತ ಕಾಣುತ್ತಿದೆ. ಅಭಿಮಾನಿಗಳು ತಾವು ಸಿನಿಮಾನ ಗೆಲ್ಲಿಸೋದಾಗಿ ಹೇಳಿದ್ದರು. ಚಿತ್ರ ಒಳ್ಳೆಯ ಗಳಿಕೆ ಕೂಡ ಮಾಡಿದೆ. ಆದರೆ, ಸಿನಿಮಾದ ಬಜೆಟ್ ಹೆಚ್ಚಿರುವುದರಿಂದ ಗಳಿಕೆ ಏನಕ್ಕೂ ಸಾಲುತ್ತಿಲ್ಲ. ಹಿಗೆಯೇ ಮುಂದುವರಿದರೆ ನಿರ್ಮಾಪಕರು ಕಷ್ಟ ಅನುಭವಿಸಬೇಕಾಗಿ ಬರಬಹುದು. ಇನ್ನು, ಗುರುವಾರ (ಡಿಸೆಂಬರ್ 18) ಸಿನಿಮಾದ ಗಳಿಕೆ ತೀವ್ರವಾಗಿ ಕುಸಿತ ಕಂಡಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಅಭಿಮಾನಿಗಳು ಕೈ ಹಿಡಿಯಬೇಕಾದ ಅನಿವಾರ್ಯತೆ ಇದೆ.
‘ಡೆವಿಲ್’ ಸಿನಿಮಾ ರಿಲೀಸ್ ಆಗಿ 8 ದಿನಗಳು ಪೂರ್ಣಗೊಂಡಿವೆ. ಮೊದಲ ದಿನ ಸಿನಿಮಾ ಅದ್ಭುತ ಕಲೆಕ್ಷನ್ ಮಾಡಿತು. ಆದರೆ, ದಿನ ಕಳೆದಂತೆ ಚಿತ್ರದ ಕಲೆಕ್ಷನ್ ಕುಗ್ಗುತ್ತಾ ಇದೆ. sacnilk ವರದಿ ಪ್ರಕಾರ ಈ ಚಿತ್ರ ಕಲೆಕ್ಷನ್ ಮಾಡಿರುವುದು 25 ಕೋಟಿ ರೂಪಾಯಿ. ಗುರುವಾದ ಕಲೆಕ್ಷನ್ ಕೇವಲ 53 ಲಕ್ಷ ರೂಪಾಯಿ. ಶನಿವಾರ ಹಾಗೂ ಭಾನುವಾರ ಸಿನಿಮಾ ಪಾಲಿಗೆ ತುಂಬಾನೇ ಮುಖ್ಯವಾಗಲಿದೆ.
ದರ್ಶನ್ ಅವರು ಜೈಲಿನಲ್ಲಿ ಇರುವಾಗಲೇ ‘ಡೆವಿಲ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದ ಪ್ರಚಾರದ ಜವಾಬ್ದಾರಿಯನ್ನು ಅಭಿಮಾನಿಗಳು ಹೊತ್ತುಕೊಂಡಿದ್ದರು. ಆದರೆ, ಸಿನಿಮಾಗೆ ಅಂದುಕೊಂಡ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ. ವಿಮರ್ಶಕರಿಂದ ಹಾಗೂ ಸಿನಿಮಾ ಪ್ರಿಯರಿಂದ ‘ಡೆವಿಲ್’ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಈಗ ಅವರೇ ಕೈ ಹಿಡಿದು ಚಿತ್ರವನ್ನು ನಡೆಸಬೇಕಿದೆ.
ಇದನ್ನೂ ಓದಿ: ಬುಧವಾರ ಕೋಟಿಯಿಂದ ಲಕ್ಷಕ್ಕೆ ಕುಸಿದ ‘ಡೆವಿಲ್’ ಸಿನಿಮಾ ಕಲೆಕ್ಷನ್; ವಾರದ ಗಳಿಕೆ ಎಷ್ಟು?
ಈ ಶನಿವಾರ ಹಾಗೂ ಭಾನುವಾರ ಒಳ್ಳೆಯ ಕಲೆಕ್ಷನ್ ಆದರೆ ಮಾತ್ರ ಸಿನಿಮಾ ಚೇತರಿಸಿಕೊಳ್ಳಲಿದೆ. ಮುಂದಿನವಾರ ‘ಮಾರ್ಕ್’ ಹಾಗೂ ‘45’ ಸಿನಿಮಾಗಳು ಬರಲಿವೆ. ಎರಡೂ ಕನ್ನಡದ ಸಿನಿಮಾಗಳೇ. ಹೀಗಾಗಿ, ಹಲವು ಚಿತ್ರಮಂದಿರಗಳಲ್ಲಿ ಈ ಎರಡು ಸಿನಿಮಾಗಳು ರಾರಾಜಿಸಲಿವೆ. ಇದರಿಂದ ‘ಡೆವಿಲ್’ ಚಿತ್ರಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ‘ಡೆವಿಲ್’ ಚಿತ್ರಕ್ಕೆ ಪ್ರಕಾಶ್ ವೀರ್ ನಿರ್ದೇಶನ ಇದೆ. ಈ ಸಿನಿಮಾಗೆ ರಚನಾ ರೈ ನಾಯಕಿ. ದರ್ಶನ್ ಅವರದ್ದು ದ್ವಿಪಾತ್ರ. ಅಚ್ಯುತ್ ಕುಮಾರ್ ಪಾತ್ರಕ್ಕೂ ಪ್ರಾಮುಖ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:52 am, Fri, 19 December 25




