
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆ ಆಗಿ 4 ದಿನ ಕಳೆದಿದೆ. ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 4ನೇ ದಿನವಾದ ಶನಿವಾರ (ಆಗಸ್ಟ್ 29) ಭಾರತದಲ್ಲಿ ಈ ಸಿನಿಮಾದ ಕಲೆಕ್ಷನ್‌ನಲ್ಲಿ (Toxic Box Office Collection) ಶುಕ್ರವಾರಕ್ಕೆ ಹೋಲಿಸಿದರೆ ಸಣ್ಣ ಕುಸಿತ ಕಂಡುಬಂದಿದೆ. ವಿಶ್ವದಾದ್ಯಂತ ಸಿನಿಮಾ ಒಟ್ಟು 254.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ‘ಸಾಕ್ನಿಲ್ಕ್’ ವರದಿ ಪ್ರಕಟಿಸಿದೆ.
ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಅವರ ನಟನೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಒಟ್ಟಾರೆಯಾಗಿ ಸಿನಿಮಾ ಮೂಡಿಬಂದಿರುವ ರೀತಿಯ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಕಾರಣದಿಂದ ಮೊದಲ ದಿನಕ್ಕೆ ಹೋಲಿಸಿದರೆ ನಂತರದ ದಿನಗಳಲ್ಲಿ ಕಲೆಕ್ಷನ್ ಇಳಿಕೆ ಆಗಿದೆ.
ಸಾಕ್ನಿಲ್ಕ್ ವರದಿಯ ಪ್ರಕಾರ, ‘ಟಾಕ್ಸಿಕ್’ ಸಿನಿಮಾ ಶನಿವಾರ ಭಾರತದಲ್ಲಿ ಅಂದಾಜು ರೂ 24.50 ಕೋಟಿ ರೂಪಾಯಿ ನೆಟ್ ಗಳಿಕೆ ಮಾಡಿದೆ. ದೇಶಾದ್ಯಂತ ಒಟ್ಟು 17,612 ಶೋಗಳಿಂದ ಈ ಮೊತ್ತ ಸಂಗ್ರಹವಾಗಿದೆ. ಶುಕ್ರವಾರ (27.20 ಕೋಟಿ) ಕಲೆಕ್ಷನ್‌ಗೆ ಹೋಲಿಸಿದರೆ ಶನಿವಾರದ ಕಲೆಕ್ಷನ್‌ನಲ್ಲಿ ಶೇಕಡ 9.9ರಷ್ಟು ಇಳಿಕೆ ಆಗಿದೆ. ಇದರೊಂದಿಗೆ, ಚಿತ್ರ ಬಿಡುಗಡೆಯಾದ ಮೊದಲ 4 ದಿನಗಳಲ್ಲಿ ಭಾರತದಲ್ಲಿ ಒಟ್ಟು 190.45 ಕೋಟಿ ರೂಪಾಯಿ ನೆಟ್ ಮತ್ತು 227.50 ಕೋಟಿ ರೂಪಾಯಿ ಗ್ರಾಸ್ ಗಳಿಕೆ ಕಂಡಿದೆ.
‘ಟಾಕ್ಸಿಕ್’ ಸಿನಿಮಾ ಮೊದಲ ದಿನ (ಆಗಸ್ಟ್ 26) ಭಾರತದಲ್ಲಿ ಭರ್ಜರಿ 101.10 ಕೋಟಿ ರೂಪಾಯಿ ಗಳಿಸುವ ಮೂಲಕ ಶುಭಾರಂಭ ಮಾಡಿತ್ತು. ಎರಡನೇ ದಿನವಾದ ಗುರುವಾರ 37.65 ಕೋಟಿ ಹಾಗೂ ಮೂರನೇ ದಿನವಾದ ಶುಕ್ರವಾರ ರೂ 27.20 ಕೋಟಿ ಕಲೆಕ್ಷನ್ ಮಾಡಿತ್ತು. ನಾಲ್ಕನೇ ದಿನವಾದ ಶನಿವಾರ ಅಂದಾಜು ರೂ 24.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ. ಈ ಮೂಲಕ ಚಿತ್ರವು ಬಿಡುಗಡೆಯಾದ ಮೊದಲ 4 ದಿನಗಳಲ್ಲಿ ಭಾರತದಲ್ಲಿ ಒಟ್ಟಾರೆಯಾಗಿ ರೂ 190.45 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ಬೋಲ್ಡ್ ದೃಶ್ಯಕ್ಕೆ ರುಕ್ಮಿಣಿ ವಸಂತ್ ಟ್ರೋಲ್: ನಟಿಯ ಬೆಂಬಲಕ್ಕೆ ನಿಂತ ಫ್ಯಾನ್ಸ್
ಐದೂ ಭಾಷೆಗಳ ಪೈಕಿ ಕನ್ನಡ ಆವೃತ್ತಿಯಲ್ಲೇ ಅತಿ ಹೆಚ್ಚು ಅಂದರೆ ಶೇಕಡ 47.23ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ. ಅದರಲ್ಲೂ ಕನ್ನಡದ ನೈಟ್ ಶೋಗಳು ಹಲವು ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಂಡಿವೆ. ಹಿಂದಿ ಆವೃತ್ತಿಯು ಶೇಕಡ 26.19ರಷ್ಟು ಆಕ್ಯುಪೆನ್ಸಿ ಹೊಂದಿದೆ. ಮಲಯಾಳಂ, ತಮಿಳು, ತೆಲುಗಿನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.