
ರಾಕಿಂಗ್ ಸ್ಟಾರ್ ಯಶ್ (Yash) ಹಾಗೂ ನಿರ್ದೇಶಕಿ ಗೀತು ಮೋಹನ್ ದಾಸ್ ಕಾಂಬಿನೇಷನ್‌ನ ‘ಟಾಕ್ಸಿಕ್’ (Toxic) ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಆದರೆ ಸಿನಿಮಾ ತೆರೆಕಂಡ ಬೆನ್ನಲ್ಲೇ, ಚಿತ್ರದ ವಿರುದ್ಧ ನಕಾರಾತ್ಮಕ ವಿಮರ್ಶೆ ಮತ್ತು ಆಕ್ಷೇಪಾರ್ಹ ವಿಷಯ ಪ್ರಸಾರ ಮಾಡದಂತೆ ಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಇಟ್ಟುಕೊಂಡು ಯೂಟ್ಯೂಬರ್‌ಗಳಿಗೆ ಲೀಗಲ್ ನೋಟಿಸ್ (Legal Notice) ನೀಡಲಾಗುತ್ತಿದೆ ಎಂಬ ಆರೋಪ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.
ಮೊದಲಿಗೆ ಯೂಟ್ಯೂಬರ್ ಸೂರಜ್ ಕುಮಾರ್ ಎಂಬುವವರು ತಮಗೆ ಲೀಗಲ್ ನೋಟಿಸ್ ಬಂದಿದೆ ಎಂದು ಇಮೇಲ್ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದರು. ಇದೀಗ ಮತ್ತೊಬ್ಬ ಸಿನಿಮಾ ವಿಮರ್ಶಕ ಹಾಗೂ ಯೂಟ್ಯೂಬರ್ ಪ್ರಶಾಂತ್ ರಂಗಸ್ವಾಮಿ ಕೂಡ ‘ಟಾಕ್ಸಿಕ್’ ತಂಡದಿಂದ ತಮಗೆ ಕಾನೂನು ನೋಟಿಸ್ ಬಂದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಿನಿಮಾವನ್ನು ರೋಸ್ಟ್ ಮಾಡಿ ವಿಮರ್ಶೆ ನೀಡಿದ್ದ ಪ್ರಶಾಂತ್ ರಂಗಸ್ವಾಮಿ ಅವರು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ನನಗೆ ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ತಂಡದಿಂದ ಟಾಕ್ಸಿಕ್ ರಿವ್ಯೂಗಾಗಿ ಲೀಗಲ್ ನೋಟಿಸ್ ಬಂದಿದೆ’ ಎಂದು ಅವರು ಚಿತ್ರತಂಡದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಸೂರಜ್ ಕುಮಾರ್ ಅವರಂತೆ ಪ್ರಶಾಂತ್ ರಂಗಸ್ವಾಮಿ ತಮಗೆ ಬಂದ ನೋಟಿಸ್‌ನ ಸ್ಕ್ರೀನ್‌ಶಾಟ್ ಬಹಿರಂಗಪಡಿಸಿಲ್ಲ.
Got legal notice from @TheNameIsYash and @KvnProductions for #Toxic review .
I thought he is all macho in real life as well .
Looks like he is just another rich and influential person !
— Prashanth Rangaswamy (@itisprashanth) August 27, 2026
ಇದಕ್ಕೂ ಮೊದಲು ಯೂಟ್ಯೂಬರ್ ಸೂರಜ್ ಕುಮಾರ್ ಅವರು ತಮಗೆ ಖಾಸಗಿ ಕಂಪನಿಯಿಂದ ಕಳಿಸಿಸಲಾಗಿದ್ದ ಇಮೇಲ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದರು. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಟಾಕ್ಸಿಕ್ ಚಿತ್ರತಂಡದ ಪರವಾಗಿ ಕೋರ್ಟ್ ಆದೇಶವನ್ನು ಜಾರಿಗೆ ತರಲು ತಮಗೆ ಅಧಿಕಾರ ನೀಡಲಾಗಿದೆ ಎಂದು ಆ ಕಂಪನಿಯು ನೋಟಿಸ್‌ನಲ್ಲಿ ತಿಳಿಸಿತ್ತು.
ಇದನ್ನೂ ಓದಿ: ‘ಟಾಕ್ಸಿಕ್’ ನೋಡಿ ಮೆಚ್ಚಿಕೊಂಡ ಉಪೇಂದ್ರ; ಆದರೆ ನೆಟ್ಟಿಗರ ಅಭಿಪ್ರಾಯವೇ ಬೇರೆ
ಸಿನಿಮಾ ಬಿಡುಗಡೆಯಾಗುವ ಮೊದಲೇ, ಅಂದರೆ ಆಗಸ್ಟ್ 22ರಂದು ಕೋರ್ಟ್‌ನಿಂದ ‘ಟಾಕ್ಸಿಕ್’ ತಂಡವು ಮಧ್ಯಂತರ ತಡೆಯಾಜ್ಞೆ ಪಡೆದುಕೊಂಡಿತ್ತು. ಚಿತ್ರದ ವಿರುದ್ಧ ಸುಳ್ಳು, ಮಾನಹಾನಿಕರ ಅಥವಾ ಅವಹೇಳನಕಾರಿ ವಿಷಯ ಪ್ರಸಾರ ಮಾಡುವುದನ್ನು ತಡೆಯಲು ಈ ಆದೇಶ ಹೊರಡಿಸಲಾಗಿತ್ತು. ಇದನ್ನೇ ಇಟ್ಟುಕೊಂಡು ಯೂಟ್ಯೂಬರ್‌ಗಳಿಗೆ ನೋಟಿಸ್ ಕಳಿಸಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.