ಖುಷ್ಬೂ ಎಂದಿಗೂ ಮರೆಯಲಾಗದ ಸಹಾಯ ಮಾಡಿದ್ದ ರವಿಚಂದ್ರನ್; ಈಗಲೂ ನೆನಪಿಸಿಕೊಳ್ಳುತ್ತಾರೆ ನಟಿ
ಖುಷ್ಬೂ ಸುಂದರ್ ಅವರು ತಮ್ಮ ಆರಂಭಿಕ ದಿನಗಳಲ್ಲಿ ವಿ. ರವಿಚಂದ್ರನ್ ಮತ್ತು ಅವರ ತಂದೆ ವೀರಸ್ವಾಮಿ ಅವರಿಂದ ಪಡೆದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ. ತಾಯಿಯ ಆಸ್ಪತ್ರೆ ವೆಚ್ಚವನ್ನು ಭರಿಸಲು ಸಹಾಯ ಮಾಡಿದ್ದಕ್ಕಾಗಿ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ ಈಗ ವೈರಲ್ ಆಗಿದೆ.

ವಿ. ರವಿಚಂದ್ರನ್ (V. Ravichandran) ಅವರು ಕನ್ನಡ ಚಿತ್ರಂಗಕ್ಕೆ ಸಾಕಷ್ಟು ನಟ-ನಟಿಯರನ್ನು ಪರಿಚಯಿಸಿದ್ದಾರೆ. ಕಷ್ಟ ಎಂದು ಬಂದವರಿಗೆ ಅವರು ಸಹಾಯವನ್ನೂ ಮಾಡಿದ್ದಾರೆ. ಅನೇಕರು ರವಿಚಂದ್ರನ್ ಮಾಡಿದ ಸಹಾಯವನ್ನು ಈಗಲೂ ನೆನಪಿಟ್ಟುಕೊಂಡಿದ್ದಾರೆ. ಈ ರೀತಿ ನೆನಪು ಇಟ್ಟುಕೊಂಡವರಲ್ಲಿ ಬಹುಭಾಷಾ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಕೂಡ ಒಬ್ಬರು. ಈಗ ಈ ಬಗ್ಗೆ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ರವಿಚಂದ್ರನ್ ಹಾಗೂ ಅವರ ತಂದೆ ವೀರಸ್ವಾಮಿ ಗುಣಗಾನವನ್ನು ಅವರು ಮಾಡಿದ್ದಾರೆ.
ಖುಷ್ಬೂ ಸುಂದರ್ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರೇ ರವಿಚಂದ್ರನ್ ಹಾಗೂ ವೀರಸ್ವಾಮಿ. 1988ರಲ್ಲಿ ರಿಲೀಸ್ ಆದ ‘ರಣಧೀರ’ ಸಿನಿಮಾದಲ್ಲಿ ಖುಷ್ಬು ಬಣ್ಣ ಹಚ್ಚಿದರು. ಇದು ಅವರು ನಟಿಸಿದ ಮೊದಲ ಕನ್ನಡ ಸಿನಿಮಾ. ಈ ಚಿತ್ರವನ್ನು ರವಿಚಂದ್ರನ್ ಅವರೇ ನಿರ್ದೇಶಿಸಿದ್ದರು. ಅವರ ತಂದೆ ವೀರಸ್ವಾಮಿ ನಿರ್ಮಾಣ ಮಾಡಿದ್ದರು.
‘ನಾನು ವಿ. ರವಿಚಂದ್ರನ್ ಜೊತೆ ಶೂಟ್ ಮಾಡುತ್ತಿದ್ದೆ. ಆ ಚಿತ್ರಕ್ಕೆ ಅವರದ್ದೇ ನಿರ್ದೇಶನ ಇತ್ತು. ಅವರ ತಂದೆ ನಿರ್ಮಾಣ ಮಾಡಿದ್ದರು. ಈ ಚಿತ್ರದ ಶೂಟ್ ಸಂದರ್ಭದಲ್ಲಿ ನನ್ನ ತಾಯಿ ಆಸ್ಪತ್ರೆಯಲ್ಲಿ ಇದ್ದರು. ಈ ವೇಳೆ 36 ಸಾವಿರ ರೂಪಾಯಿ ಬಿಲ್ ಆಗಿತ್ತು. ಅದನ್ನು ಹೇಗೆ ಪಾವತಿಸೋದು ಎಂದು ನಾನು ಚಿಂತೆಯಲ್ಲಿ ಇದ್ದೆ. ನಾನು ಆಗ ಒಬ್ಬಂಟಿಯಾಗಿದ್ದೆ. ತಾಯಿಗೆ ಅನಾರೋಗ್ಯ ಆದ ವಿಚಾರವನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ’ ಎಂದಿದ್ದಾರೆ ಖುಷ್ಬೂ.
View this post on Instagram
ಖುಷ್ಬು ಸಾಕಷ್ಟು ಡಿಸ್ಟರ್ಬ್ ಆಗಿರೋದನ್ನು ಗಮನಿಸಿದ ರವಿಚಂದ್ರನ್ ಅವರು ಈ ಬಗ್ಗೆ ಸ್ಟಾಫ್ಗಳ ಬಳಿ ವಿಚಾರಿಸಿದರು. ಆಗ ಇರೋ ವಿಚಾರವನ್ನು ಅವರು ತಿಳಿಸಿದರು. ‘ರವಿಚಂದ್ರನ್ ಅವರ ತಂದೆ ವೀರಸ್ವಾಮಿ ಅವರು ವಿಚಾರ ತಿಳಿದು ಆಸ್ಪತ್ರೆಗೆ ತೆರಳಿದರು. ವೈದ್ಯರ ಜೊತೆ ಮಾತನಾಡಿ, ಬಿಲ್ ಕಟ್ಟಿ ನನ್ನ ತಾಯಿಯನ್ನು ಮನೆಗೆ ಕರೆದುಕೊಂಡು ಹೋಗಿ ಬಿಟ್ಟರು’ ಎಂದು ಖುಷ್ಬೂ ಹೇಳಿದ್ದಾರೆ.
ಇದನ್ನೂ ಓದಿ: ‘ಲೇ ಕಳಸ್ರಯ್ಯ ಇವಳನ್ನ’; ಸುಕೃತಾ ಮೇಲೆ ರವಿಚಂದ್ರನ್ ಸಿಟ್ಟಾಗಿದ್ದೇಕೆ?
ಶೂಟಿಂಗ್ ಮುಗಿದ ಬಳಿಕ ರವಿಚಂದ್ರನ್ ಹಾಗೂ ವೀರಸ್ವಾಮಿ ಅವರು ಖುಷ್ಬೂ ವಿರುದ್ಧ ಸಿಟ್ಟಾದರಂತೆ. ‘ಏಕೆ ಈ ವಿಚಾರ ಮುಚ್ಚಿಟ್ಟಿರಿ’ ಎಂದು ಕೇಳಿದರಂತೆ. ‘ನನಗೆ ಹಣವನ್ನು ಹೇಗೆ ಕೇಳಬೇಕು ಎಂಬುದು ಗೊತ್ತಾಗಿರಲಿಲ್ಲ’ ಎಂದು ಖುಷ್ಬು ಅವರು ವೀರಸ್ವಾಮಿಗೆ ವಿವರಿಸಿದ್ದರು. ಇದನ್ನು ಖುಷ್ಬೂ ಈಗಲೂ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:01 pm, Tue, 1 April 25