
ಬೆಂಗಳೂರು, ಜೂನ್ 26: ಸ್ಯಾಂಡಲ್‌ವುಡ್ ನಟ ದರ್ಶನ್ ಅವರ ಪುತ್ರ ವಿನೀಶ್ ಪ್ರಯಾಣಿಸುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಟಚ್ ಆಗಿದ್ದು, ಸ್ಥಳೀಯರು ಹಾಗೂ ವಿನೀಶ್ ನಡುವೆ ವಾಗ್ವಾದ ನಡೆದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಬೆಂಗಳೂರಿನ ಆರ್.ಆರ್. ನಗರದ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ (ಜೂನ್ 25) ಈ ಅಪಘಾತ ಸಂಭವಿಸಿದೆ. ವಿನೀಶ್ ಕಾರು ಓಡಿಸುತ್ತಿದ್ದರು ಎಂಬ ಬಗ್ಗೆ ವರದಿ ಆಗಿತ್ತು. ಆದರೆ, ಅದು ನಿಜವಲ್ಲ ಎಂಬ ವಿಷಯವೂ ರಿವೀಲ್ ಆಗಿದೆ.
ವಿನೀಶ್ ಅವರು KA01 MU9969 ಸಂಖ್ಯೆಯ ಫೋರ್ಡ್ ಕಾರಿನಲ್ಲಿ ತೆರಳುತ್ತಿದ್ದರು. ಅಪಘಾತದ ಸಮಯದಲ್ಲಿ ವಿನೀಶ್ ಕಾರನ್ನು ಓಡಿಸುತ್ತಿರಲಿಲ್ಲ. ಅವರು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದರು ಎಂಬುದು ಸ್ಪಷ್ಟವಾಗಿದೆ. ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾದ ಕಾರಣ ಸ್ಥಳದಲ್ಲಿ ಕೆಲಕಾಲ ಗಲಾಟೆ ಮತ್ತು ವಾಗ್ವಾದ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.
ಈ ಘಟನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳ ಕುರಿತು ವಿನೀಶ್ ತಾಯಿ ವಿಜಯಲಕ್ಷ್ಮೀ ದರ್ಶನ್ ಅವರು ಪತ್ರದ ಮೂಲಕ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.
‘ವಿನೀಶ್‌ಗೆ ದೊಡ್ಡ ಅಪಘಾತವಾಗಿದೆ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹರಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು. ವಿನೀಶ್ ಸುರಕ್ಷಿತವಾಗಿದ್ದಾನೆ ಮತ್ತು ಆರಾಮಾಗಿದ್ದಾನೆ. ಎಂದಿನಂತೆ ನಮ್ಮ ಚಾಲಕನೇ ಕಾರನ್ನು ಚಲಾಯಿಸುತ್ತಿದ್ದನು. ವಿನೀಶ್ ವಾಹನ ಚಲಾಯಿಸುತ್ತಿರಲಿಲ್ಲ. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಾಮಾನ್ಯ ಎನ್ನುವಂತಹ ಒಂದು ಸಣ್ಣ ರಸ್ತೆ ಅಪಘಾತ ಸಂಭವಿಸಿದೆ ಅಷ್ಟೆ. ಎದುರಿಗಿದ್ದ ಬೈಕ್ ಸವಾರರು ಕೂಡ ತಮ್ಮದೇ ತಪ್ಪು ಎಂದು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ’ ಎಂದು ವಿಜಯಲಕ್ಷ್ಮೀ ಪತ್ರದಲ್ಲಿ ತಿಳಿಸಿದ್ದಾರೆ.
‘ಬೈಕ್‌ನಲ್ಲಿದ್ದವರು ಸುರಕ್ಷಿತವಾಗಿದ್ದಾರೆಯೇ ಎಂದು ನೋಡಲು ವಿನೀಶ್ ಕಾರಿನಿಂದ ಕೆಳಗಿಳಿದಿದ್ದನು. ಆದರೆ ಆ ಕೆಲವು ಕ್ಷಣಗಳ ದೃಶ್ಯಗಳನ್ನು ಸಂದರ್ಭಕ್ಕೆ ತಕ್ಕುದಲ್ಲದ ರೀತಿಯಲ್ಲಿ ಮತ್ತು ತಪ್ಪು ದಾರಿಗೆಳೆಯುವಂತೆ ಬಿಂಬಿಸಲಾಗಿದೆ. ಯಾರು ಕೂಡ ಇಂತಹ ಸುಳ್ಳು ವರದಿಗಳನ್ನು ನಂಬಬೇಡಿ ಮತ್ತು ಶೇರ್ ಮಾಡಬೇಡಿ’ ಎಂದು ಅವರು ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: