‘ಸಾಹಸ ಸಿಂಹ’ ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇಂದು (ಜ.29) ಉದ್ಘಾಟನೆ ಆಗಲಿದೆ. ಮೈಸೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಷ್ಣು ಸ್ಮಾರಕವನ್ನು (Vishnuvardhan Memorial) ಲೋಕಾರ್ಪಣೆ ಮಾಡಲಿದ್ದಾರೆ. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದಾರೆ. ಮೈಸೂರಿನ ಎಚ್.ಡಿ. ಕೋಟೆ ರಸ್ತೆಯ ಅಲ್ಲಾಳು ಗ್ರಾಮದಲ್ಲಿ ಭವ್ಯ ಸ್ಮಾರಕ ಅನಾವರಣಗೊಳ್ಳುತ್ತಿದೆ. ಆ ಪ್ರಯುಕ್ತ ಅಭಿಮಾನಿಗಳು (Vishnuvardhan Fans) ಅನ್ನದಾನಕ್ಕೆ ವ್ಯವಸ್ಥೆ ಮಾಡಿದ್ದಾರೆ. ಆದರೆ ಅದಕ್ಕೆ ಅಡೆತಡೆ ಉಂಟಾಗಿದೆ. ಸ್ಥಳದಲ್ಲಿ ಅಡುಗೆ ಮಾಡಲು ಪೊಲೀಸರು ಅವಕಾಶ ನೀಡಿಲ್ಲ. ಇದರಿಂದ ಫ್ಯಾನ್ಸ್ ಪರದಾಡಿದ್ದಾರೆ.
ಅಭಿಮಾನಿಗಳ ಅನ್ನದಾನ ಕಾರ್ಯಕ್ಕೆ ಅಡ್ಡಿ ಆಗಿರುವುದು ಬೇಸರ ಮೂಡಿಸಿದೆ. ಪ್ರೋಟೊಕಾಲ್ ಹೆಸರಿನಲ್ಲಿ ಅಡುಗೆ ಮಾಡುವ ಸ್ಥಳ ಬದಲಾವಣೆ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ. ತರಕಾರಿ ಕಟ್ ಮಾಡಲು ಕೂಡ ಅಭಿಮಾನಿಗಳು ಪರದಾಡಿದ್ದಾರೆ. ಕೊನೆಗೆ ಬದಲಾದ ಸ್ಥಳದಲ್ಲಿ ಅಡುಗೆಗೆ ಅವಕಾಶ ಕಲ್ಪಿಸಲಾಗಿದೆ.
ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಲವು ಬಗೆಯ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಹಾಲಾಳು ಗ್ರಾಮದಲ್ಲಿ ಇಡೀ ದಿನ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ವಿಷ್ಣು ಸ್ಮಾರಕ ಎದುರಿನ ಖಾಲಿ ಜಾಗದಲ್ಲಿ ಶಿಬಿರ ಆಯೋಜನೆಗೊಂಡಿದೆ. ಜೀವಧಾರ ರಕ್ತನಿಧಿ ಕೇಂದ್ರವು ಇದರ ಉಸ್ತುವಾರಿ ವಹಿಸಿದೆ. ಸ್ಮಾರಕದ ಆವರಣದ ಸುತ್ತಲೂ ಡಾ. ವಿಷ್ಣುವರ್ಧನ್ ಅವರ ಕಟೌಟ್ಗಳ ರಾರಾಜಿಸುತ್ತಿವೆ. ನೆಚ್ಚಿನ ನಟನ ಕಟೌಟ್‌ಗಳಿಗೆ ಬೃಹತ್ ಹಾರಗಳನ್ನು ಹಾಕಿ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.
ವಿಷ್ಣುವರ್ಧನ್ ಅವರ ಸ್ಮಾರಕದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲು ಬೆಂಗಳೂರಿನಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಮೈಸೂರಿಗೆ ತೆರಳಿದ್ದಾರೆ. ರಾಜ್ಯ ರಾಜಧಾನಿಯಿಂದ ಜನಸಾಗರವೇ ಮೈಸೂರಿನತ್ತ ಸಾಗಿದೆ. ಸಾವಿರಾರು ವಾಹನಗಳಲ್ಲಿ ಅಭಿಮಾನಿಗಳು ಜಾಥಾ ಹೊರಟಿದ್ದಾರೆ. ವಿಷ್ಣುವರ್ಧನ್ ಅವರ ಫೋಟೋ ಹಿಡಿದು, ಜೈಕಾರ ಕೂಗುತ್ತ ಅಭಿಮಾನ ಮೆರೆಯಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:58 pm, Sun, 29 January 23