
ನಟ ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ 2 ಅರ್ಜಿಗಳ ವಿಚಾರಣೆ ನಡೆದಿದೆ. ದರ್ಶನ್ ಅವರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ (Bellary Central Jail) ಸ್ಥಳಾಂತರ ಮಾಡುವಂತೆ ಕೋರಿದ್ದ ಅರ್ಜಿ ಹಾಗೂ ದರ್ಶನ್ಗೆ ಹೆಚ್ಚುವರಿ ದಿಂಬು, ಬೆಡ್ಶೀಟ್ ನೀಡುವಂತೆ ಕೋರಿದ್ದ ಅರ್ಜಿಯ ವಿಚಾರಣೆ ಮಾಡಲಾಗಿದೆ. ಇದರ ಆದೇಶವನ್ನು ಸೆಪ್ಟೆಂಬರ್ 9ರಂದು ಸಿಸಿಹೆಚ್ 64 ಕೋರ್ಟ್ ಪ್ರಕಟಿಸಲಿದೆ. ಒಂದು ವೇಳೆ ದರ್ಶನ್ (Darshan) ಅವರನ್ನು ಮತ್ತೆ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಿದರೆ ಅವರಿಗೆ ಸಂಕಷ್ಟ ಹೆಚ್ಚಾಗಲಿದೆ.
‘ದರ್ಶನ್ಗೆ ಏನಾದರೂ ಸಾಲಿಟರಿ ಕನ್ಫೈನ್ಮೆಂಟ್ ಶಿಕ್ಷೆ (ಒಂದು ರೂಮಿನಲ್ಲಿ ಒಬ್ಬನೇ ಇರುವ ಏಕಾಂತ ಶಿಕ್ಷೆ) ಆಗಿದ್ಯಾ? ಈ ರೀತಿಯ ತಾರತಮ್ಯಕ್ಕೆ ಈಗಿನ ಕಾರಾಗೃಹ ಡಿಜಿಪಿ ದಯಾನಂದ ಅವರು ಕಾರಣ. ಜೈಲಿನ ಸೆಲ್ನಿಂದ ಹೊರಗೆ ಬರಲು ಬಿಟ್ಟಿಲ್ಲ. ಹೀಗಿದ್ದಾಗ ಸೌಲಭ್ಯಕ್ಕೆ ಲಿಖಿತ ಮನವಿ ನೀಡಲು ಹೇಗೆ ಸಾಧ್ಯ? ಜೈಲು ಅಧಿಕಾರಿಗಳು ಕನಿಷ್ಠ ಸೌಲಭ್ಯ ಕೂಡ ದರ್ಶನ್ಗೆ ನೀಡುತ್ತಿಲ್ಲ’ ಎಂದು ದರ್ಶನ್ ಪರ ವಕೀಲರು ವಾದ ಮಾಡಿದ್ದಾರೆ.
‘ಈವರೆಗೂ ದರ್ಶನ್ ತನ್ನ ಕುಟುಂಬಸ್ಥರನ್ನ ಮಾತನಾಡಿಸಿಲ್ಲ. ಮಗ ಹಾಗೂ ಪತ್ನಿಯನ್ನ ಮಾತನಾಡಿಸಿಲ್ಲ. ಒಳಗಡೆ ಆಗುತ್ತಿರುವುದನ್ನು ನಾವು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗೆ ಹೇಳೋಕೆ ಆಗಲ್ಲ. ನಮಗೆ ಆಗ್ತಿರೋದನ್ನು ನಾವು ಇಲ್ಲಿ ಹೇಳ್ತಿದ್ದೇವೆ. ಒಳಗಡೆ ದರ್ಶನ್ನ ತುಂಬಾ ಅಮಾನವೀಯವಾಗಿ ನಡೆಸಿಕೊಳ್ತಿದ್ದಾರೆ. ಬೇರೆ ಕೈದಿಗಳಿಗೆ ಸೌಲಭ್ಯ ಇದೆ. ಶಿಕ್ಷೆ ವಿಧಿಸಿದವರಿಗೂ ಸೌಲಭ್ಯ ಇದೆ. ಆದರೆ ದರ್ಶನ್ಗೆ ಮಾತ್ರ ಈ ರೀತಿ ಮಾಡ್ತಿದ್ದಾರೆ’ ಎಂದಿದ್ದಾರೆ ದರ್ಶನ್ ಪರ ವಕೀಲರು.
‘ಎಲ್ಲವನ್ನೂ ಜೈಲಾಧಿಕಾರಿಗಳು ಮಾಡುತ್ತಿದ್ದಾರೆ. ಒಂದು ಪುಸ್ತಕದ ಮೇಲೆ ವೆಬ್ ಸೀರಿಸ್ ಮಾಡಲಾಗಿದೆ. ಅದರಲ್ಲಿ ಜೈಲಾಧಿಕಾರಿಗಳು ಯಾವ ರೀತಿ ಕೈದಿಗಳನ್ನು ನಡೆಸಿಕೊಳ್ತಾರೆ ಎಂಬುದನ್ನು ತೋರಿಸಿದ್ದಾರೆ. ಅಷ್ಟು ಅಮಾನವೀಯವಾಗಿ ದರ್ಶನ್ನ ಜೈಲಿನಲ್ಲಿ ನಡೆಸಿಕೊಳ್ಳಲಾಗ್ತಿದೆ. ಸುಪ್ರೀಂ ಕೋರ್ಟ್ ಜಾಮೀನು ಕ್ಯಾನ್ಸಲ್ ಮಾಡಿದೆ ಎಂಬ ಕಾರಣಕ್ಕೆ ಏನೂ ಕೊಡುವಂತಿಲ್ಲ ಅಂತ ಜೈಲಾಧಿಕಾರಿಗಳು ಹೇಳ್ತಿದ್ದಾರೆ. ದರ್ಶನ್ನ ಬೇರೆ ಜೈಲಿಗೆ ಶಿಫ್ಟ್ ಮಾಡಬಾರದು ಹಾಗೂ ಕನಿಷ್ಠ ಸೌಲಭ್ಯ ಕೊಡಬೇಕೆಂದು ಮನವಿ ಮಾಡುತ್ತೇನೆ’ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ.
ಇದನ್ನೂ ಓದಿ: ದರ್ಶನ್ ಬಳ್ಳಾರಿ ಜೈಲಿಗೆ ಹೋಗುವುದು ತಡೆಯಲು ವಕೀಲರ ವಾದ: ನೀಡಿದ ಕಾರಣಗಳೇನು?
‘ಬಟ್ಟೆ, ಹಾಸಿಗೆ, ಚಪ್ಪಲಿ, ತಟ್ಟೆ, ಚಮಚ ಸೇರಿ ಅಗತ್ಯ ವಸ್ತುಗಳನ್ನ ಸ್ವಂತವಾಗಿ ಪಡೆಯಲು ಅವಕಾಶ ಇದೆ. ಪ್ರಿಸನ್ಸ್ ಕಾಯ್ದೆಯ 63ರ ಪ್ರಕಾರ ಸ್ವಂತ ವಸ್ತುಗಳನ್ನು ಹೊಂದಲು ಅವಕಾಶ ಇದೆ. ವಿಚಾರಣಾದೀನ ಖೈದಿ, ಶಿಕ್ಷಿತ ಅಪರಾಧಿ ಕೂಡ ಪಡೆಯಲು ಅವಕಾಶ ಇದೆ. ಕಾನೂನಿನಲ್ಲಿ ಇರುವ ಅವಕಾಶ ಕೊಡಿ ಅಂತ ದರ್ಶನ್ ಕೇಳುತ್ತಾ ಇದ್ದಾರೆ. ನಾವು ಹೆಚ್ಚುವರಿಯಾಗಿ ಕೇಳುತ್ತಿಲ್ಲ. ನಿನ್ನೆ ಜೈಲು ಅಧಿಕಾರಿಗಳ ನನಗೆ ಕರೆ ಮಾಡಿ ಅರ್ಜಿ ಹಿಂಪಡೆಯಲು ಕೇಳಿಕೊಂಡಿದ್ದಾರೆ’ ಎಂದು ದರ್ಶನ್ ಪರ ವಕೀಲರು ವಾದಿಸಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.