ದರ್ಶನ್ ಬಳ್ಳಾರಿ ಜೈಲಿಗೆ ಹೋಗುವುದು ತಡೆಯಲು ವಕೀಲರ ವಾದ: ನೀಡಿದ ಕಾರಣಗಳೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರಿಗೆ ಜೈಲುವಾಸ ಕಷ್ಟ ಆಗುತ್ತಿದೆ. ಬೇರೆ ಹಾಸಿಗೆ, ದಿಂಬು, ಬೆಡ್ಶೀಟ್ ಮುಂತಾದ ಸೌಲಭ್ಯ ಬೇಕು ಎಂದು ಅವರು ಕೇಳುತ್ತಿದ್ದಾರೆ. ಬುಧವಾರ (ಸೆಪ್ಟೆಂಬರ್ 3) ನಾಳೆ ಸಂಜೆ ನಾಲ್ಕು ಗಂಟೆಗೆ ವಿಚಾರಣೆ ಮುಂದೂಡಿಕೆ ಆಗಿದೆ.

ನಟ ದರ್ಶನ್ ಅವರು ಈಗ ಬೆಂಗಳೂರಿನ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿದ್ದಾರೆ. ಈ ಮೊದಲು ಜಾಮೀನು ಸಿಗುವುದಕ್ಕೂ ಮುನ್ನ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಈಗ ಮತ್ತೆ ಅವರನ್ನು ಅಲ್ಲಿಗೆ ಕಳಿಸಬೇಕು ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಾಡುತ್ತಿದ್ದಾರೆ. ಆದರೆ ದರ್ಶನ್ (Darshan) ಪರ ವಕೀಲರು ಬೇರೆಯದೇ ವಾದ ಮಂಡಿಸಿದ್ದಾರೆ. ಇಂದು (ಸೆಪ್ಟೆಂಬರ್ 2) ಈ ವಿಚಾರಣೆ ನಡೆದಿದೆ. ದರ್ಶನ್ ಪರವಾಗಿ ಸಂದೇಶ್ ಚೌಟ ವಾದ ಮಾಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ..
‘ಈ ಪ್ರಕರಣದಲ್ಲಿ 272 ಸಾಕ್ಷಿಗಳು ಇದ್ದಾರೆ. ಸುಪ್ರೀಂ ಕೋರ್ಟ್ ಕೂಡ ತ್ವರಿತ ವಿಚಾರಣೆಗೆ ಸೂಚಿಸಿದೆ. ವಿಡಿಯೋ ಕಾನ್ಫರೆನ್ಸ್ನಲ್ಲಿ ವಿಚಾರಣೆಗೆ ಹಾಜರಾಗುವುದು ಸೂಕ್ತ ಅಲ್ಲ. ತಮ್ಮ ವಕೀಲರಿಗೆ ಮಾತನಾಡುವ ಅಗತ್ಯ ಇರುತ್ತದೆ. ಅದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಲು ಸಾಧ್ಯವಿಲ್ಲ. ದರ್ಶನ್ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲು ಯಾವುದೇ ಕಾರಣ ಇಲ್ಲ. ಬೆಂಗಳೂರಿನಿಂದ ಬಳ್ಳಾರಿಗೆ 310 ಕಿಲೋ ಮೀಟರ್ ಇದೆ. ಪ್ರತಿ ದಿನ ಟ್ರಯಲ್ಸ್ ಸಮಯದಲ್ಲಿ ಬಳ್ಳಾರಿಯಿಂದ ಬಂದು ಮತ್ತೆ ಬಳ್ಳಾರಿಗೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಬಳ್ಳಾರಿಗೆ ಶಿಫ್ಟ್ ಮಾಡಬಾರದು’ ಎಂದು ಸಂದೇಶ್ ಚೌಟ ವಾದ ಮಾಡಿದ್ದಾರೆ.
‘ಜೈಲಿನ ಮ್ಯಾನುವಲ್ ಪ್ರಕಾರ ಜೈಲಿನಲ್ಲಿ ಸಿಗರೇಟ್ ಸೇದುವುದು ಅಪರಾಧವಲ್ಲ. ಆದರೆ ಅಲ್ಲಿ ಸ್ಮೋಕಿಂಗ್ ಜೋನ್ನಲ್ಲಿ ಮಾತ್ರ ಸ್ಮೋಕ್ ಮಾಡಬೇಕು. ಈ ಬಗ್ಗೆ ಹೈಕೋರ್ಟ್ನಲ್ಲಿ ಕೇಳಿದಾಗ ಜೈಲಿನಲ್ಲಿ ಸ್ಮೋಕಿಂಗ್ ಜೋನ್ ಇಲ್ಲ ಎಂಬ ಮಾಹಿತಿ ಬಂದಿತ್ತು. ಈ ಹಿಂದೆ ದರ್ಶನ್ ಸಿಗರೇಟ್ ಹಿಡಿದ ಫೋಟೋ ಬಯಲಾಯ್ತು ಎಂಬ ಕಾರಣಕ್ಕೆ ಶಿಫ್ಟ್ ಮಾಡಲಾಗಿತ್ತು. ಸ್ಮೋಕಿಂಗ್ಗೆ ಜೈಲಿನಲ್ಲಿ ಅನುಮತಿ ಇದೆ. ಇದೇ ಕಾರಣದಿಂದ ಬೇರೆ ಜೈಲಿಗೆ ಶಿಫ್ಟ್ ಮಾಡುವುದು ಸರಿಯಲ್ಲ’ ಎಂಬುದು ದರ್ಶನ್ ಪರ ವಕೀಲರ ವಾದ.
ಬೇರೆ ಹಾಸಿಗೆ, ಬೆಡ್ಶೀಟ್, ತಲೆದಿಂಬು ಬೇಕು ಅಂದು ದರ್ಶನ್ ಅವರು ಕೇಳುತ್ತಿದ್ದಾರೆ. ಆ ಕುರಿತಾಗಿಯೂ ವಿಚಾರಣೆ ನಡೆದಿದೆ. ‘ಕಾನೂನು ಪ್ರಕಾರ ಏನು ಕೊಡಬೇಕೋ ಅದನ್ನ ಕೊಡಿ. ವಿಚಾರಣಾಧೀನ ಕೈದಿಗೆ ಸೌಲಭ್ಯ ನೀಡುವಂತೆ ಕೇಳುತ್ತಿದ್ದೇವೆ. ಯಾವ ಕಾನೂನಿನ ಅಡಿ ಕೊಡಲಾಗುವುದಿಲ್ಲವೆಂದು ಸ್ಪಷ್ಟಪಡಿಸಲಿ. ಜೈಲು ಕಡೆಯವರು ಸ್ಪಷ್ಟನೆ ನೀಡಬೇಕು’ ಎಂದು ದರ್ಶನ್ ಪರ ವಕೀಲರು ವಾದಿಸಿದ್ದಾರೆ.
ಇದನ್ನೂ ಓದಿ: ದರ್ಶನ್ ತೋಟದಲ್ಲಿ ಬಲವಂತವಾಗಿ ನನ್ನನ್ನು ಕುದುರೆ ಹತ್ತಿಸಿದ್ದ: ಕಿಚ್ಚ ಸುದೀಪ್
ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಾಡಿದ್ದಾರೆ. ‘ದರ್ಶನ್ ಜೈಲು ಸೇರಿದ ಎರಡು ದಿನದಲ್ಲಿ ಅರ್ಜಿ ಹಾಕಲಾಗಿದೆ. ಕರ್ನಾಟಕ ಪ್ರಿಸನರ್ಸ್ ಕಾಯ್ದೆ ಅಡಿಯಲ್ಲಿ ಕಾರಣ ನೀಡಲಾಗಿದೆ. ಆದರೆ ಈ ಕಾಯ್ದೆ ಕೋರ್ಟ್ನಿಂದ ಕನ್ವಿಕ್ಟ್ ಆಗಿರುವ (ಅಪರಾಧಿಗಳಿಗೆ ಮಾತ್ರವೇ ಹೊರತು) ವಿಚಾರಣಾಧೀನ ಖೈದಿಗಳಿಗೆ ಅಲ್ಲ. ತಮ್ಮ ಖರ್ಚಿನಲ್ಲಿ ಹಾಸಿಗೆ ದಿಂಬು ಪಡೆಯಬಹುದು. ಆದರೆ ಕಾರಾಗೃಹ ಇನ್ಸ್ಪೆಕ್ಟರ್ ಜನರಲ್ ತೀರ್ಮಾನವಾಗಿರುತ್ತದೆ’ ಎಂದು ಎಸ್ಪಿಪಿ ವಾದ ಮಾಡಿದ್ದಾರೆ.
‘ಸ್ಮೋಕಿಂಗ್ ಮಾಡುವುದಕ್ಕೆ ಜೈಲುಕಾಯ್ದೆಯಲ್ಲಿ ಅನುಮತಿ ಇದೆ ಎಂದು ದರ್ಶನ್ ಪರ ವಕೀಲರು ಹೇಳಿತ್ತಾರೆ. ಆದರೆ ಅದೇ ಜೈಲು ಕಾಯ್ದೆ ಅನ್ವಯ ಬೇರೆ ಕಡೆಗೆ ಶಿಫ್ಟ್ ಮಾಡುತ್ತೇವೆ ಎಂದರೆ ಯಾಕೆ ಆಗುವುದಿಲ್ಲಾ? ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುವುದಕ್ಕೆ ವಿರೋಧ ಕೂಡ ಸರಿಯಿಲ್ಲ. ಈಗ ಕಾನೂನು ಅಡಿಯಲ್ಲಿ ವಿಡಿಯೋ ಕಾನ್ಫರೆನ್ಸ್ಗೆ ಅವಕಾಶ ಇದೆ. ಬೆಂಗಳೂರಿನಲ್ಲಿ ಇದ್ದ ಮಾತ್ರಕ್ಕೆ ಪ್ರತಿ ನಿತ್ಯ ವಿಚಾರಣೆಗೆ ಕರೆದುಕೊಂಡು ಬರಬೇಕು ಎಂಬುದೇನೂ ಇಲ್ಲ. ಕಾನೂನಿನ ಅಡಿಯಲ್ಲಿ ಟೆಕ್ನಾಲಜಿ ಬಳಸಿಕೊಂಡು ಕೆಲಸ ಮಾಡಲು ಅವಕಾಶ ಇದೆ’ ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ವಾದಿಸಿದ್ದಾರೆ. ಸೆ.3ರ ನಾಳೆ 4 ನಾಲ್ಕು ಗಂಟೆಗೆ ವಿಚಾರಣೆ ಮುಂದೂಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




