‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್​ ಜೊತೆ ನಟಿಸ್ತಾರಾ ನಯನತಾರಾ?

‘ಟಾಕ್ಸಿಕ್​’ ಸಿನಿಮಾಗೆ ಸಂಬಂಧಿಸಿದಂತೆ ಇಷ್ಟು ದಿನ ನಟಿ ಕರೀನಾ ಕಪೂರ್ ಖಾನ್​ ಹೆಸರು ಕೇಳಿಬರುತ್ತಿತ್ತು. ಆದರೆ ಈಗ ನಯನತಾರಾ ಬಗ್ಗೆ ಹೊಸ ಗಾಸಿಪ್​ ಹಬ್ಬಿದೆ. ‘ಟಾಕ್ಸಿಕ್​’ ಚಿತ್ರದಲ್ಲಿ ಯಶ್​ ಜೊತೆ ನಟಿಸಲು ನಯನತಾರಾ ಆಸಕ್ತಿ ತೋರಿಸಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಆಗಿದೆ. ಆದರೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್​ ಜೊತೆ ನಟಿಸ್ತಾರಾ ನಯನತಾರಾ?
ಯಶ್​, ನಯನತಾರಾ

Updated on: May 06, 2024 | 9:42 PM

ಬಹುನಿರೀಕ್ಷಿತ ‘ಟಾಕ್ಸಿಕ್​’ (Toxic) ಸಿನಿಮಾದ ಬಗ್ಗೆ ಕೇಳಿಬರುತ್ತಿರುವ ಅಂತೆ-ಕಂತೆಗಳು ಒಂದೆರಡಲ್ಲ. ನಟ ಯಶ್​ ಅವರು ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಯಶ್​ (Yash) ಜೊತೆ ಬೇರೆ ಯಾರೆಲ್ಲ ನಟಿಸುತ್ತಾರೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆದರೂ ಕೂಡ ಕೆಲವು ನಟಿಯರ ಹೆಸರಗಳು ಪದೇ ಪದೇ ಕೇಳಿಬರುತ್ತಿವೆ. ಇಷ್ಟು ದಿನ ಕರೀನಾ ಕಪೂರ್​ ಖಾನ್​ ಬಗ್ಗೆ ಸುದ್ದಿ ಆಗುತ್ತಿತ್ತು. ಈಗ ನಯನತಾರಾ (Nayanthara) ಬಗ್ಗೆ ಗುಸುಗುಸು ಕೇಳಿಬರಲು ಆರಂಭಿಸಿದೆ. ಈ ಕುರಿತು ಇಲ್ಲಿದೆ ಮಾಹಿತಿ..

ಮಲಯಾಳಂ ನಟಿ ಗೀತು ಮೋಹನ್​ದಾಸ್​ ಅವರು ‘ಟಾಕ್ಸಿಕ್​’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅವರ ಜೊತೆ ಯಶ್​ ಕೈ ಜೋಡಿಸಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಸಿನಿಮಾದಲ್ಲಿ ಕಥಾನಾಯಕನ ಸಹೋದರಿ ಪಾತ್ರ ಕೂಡ ತುಂಬ ಪ್ರಮುಖವಾಗಿ ಇರಲಿದ್ದು, ಆ ಪಾತ್ರಕ್ಕೆ ನಟಿಯ ಆಯ್ಕೆ ಪ್ರಕ್ರಿಯೆ ಜಾಲ್ತಿಯಲ್ಲಿದೆ. ನಯನತಾರಾ ಅವರಿಗೆ ಆಫರ್​ ನೀಡಲಾಗಿದೆ ಎಂಬ ಗಾಸಿಪ್​ ಹಬ್ಬಿದೆ.

ಕರೀನಾ ಕಪೂರ್​ ಅವರಿಗೆ ‘ಟಾಕ್ಸಿಕ್​’ ಸಿನಿಮಾದಲ್ಲಿ ನಟಿಸುವ ಆಸಕ್ತಿ ಇತ್ತು. ಆದರೆ ಡೇಟ್ಸ್​ ಸಮಸ್ಯೆಯಿಂದ ಅವರು ಈ ಚಿತ್ರದ ಭಾಗವಾಗಲು ಸಾಧ್ಯವಾಗಿಲ್ಲವಂತೆ. ಹಾಗಾಗಿ ಅವರು ಚಿತ್ರತಂಡದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಕರೀನಾ ಕಪೂರ್​ ಅವರ ಬದಲಿಗೆ ಈಗ ನಯನತಾರಾ ಅವರಿಗೆ ಮಣೆ ಹಾಕಲಾಗುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಯಶ್​ ನಟನೆಯ ‘ಟಾಕ್ಸಿಕ್​’ ಚಿತ್ರದ ನಾಯಕಿಯರ ಬಗ್ಗೆ ಮುಂದುವರಿದಿದೆ ಗೊಂದಲ

‘ಕೆವಿಎನ್ ಪ್ರೊಡಕ್ಷನ್ಸ್​’ ಮೂಲಕ ‘ಟಾಕ್ಸಿಕ್​’ ಸಿನಿಮಾ ನಿರ್ಮಾಣ ಆಗುತ್ತಿದೆ. ‘ಕೆಜಿಎಫ್​ 2’ ಬಳಿಕ ಯಶ್​ ಒಪ್ಪಿಕೊಂಡ ಸಿನಿಮಾ ಆದ್ದರಿಂದ ಜನರ ನಿರೀಕ್ಷೆ ಜೋರಾಗಿದೆ. ಸಾಕಷ್ಟು ಸಮಯ ತೆಗೆದುಕೊಂಡು ಈ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಈವರೆಗೂ ಬಂದಿರುವುದು ಟೈಟಲ್​ ಟೀಸರ್​ ಮಾತ್ರ. ಹಾಗಿದ್ದರೂ ಕೂಡ ಪ್ರತಿ ದಿನ ಈ ಸಿನಿಮಾ ಬಗ್ಗೆ ಒಂದಲ್ಲಾ ಒಂದು ಸುದ್ದಿ ಕೇಳಿಬರುತ್ತಲೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us