Moggina Manasu: ಯಶ್, ರಾಧಿಕಾ ಪಂಡಿತ್ಗೆ ಲೈಫ್ ನೀಡಿದ ‘ಮೊಗ್ಗಿನ ಮನಸು’ ಸಿನಿಮಾಗೆ ಈಗ 15 ವರ್ಷ
Rocking Star Yash: ‘ಮೊಗ್ಗಿನ ಮನಸು’ ಸಿನಿಮಾದ ಯಶಸ್ಸಿನಿಂದ ಶಶಾಂಕ್ ಅವರು ಸ್ಯಾಂಡಲ್ವುಡ್ನಲ್ಲಿ ಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡರು. ಯಶ್, ರಾಧಿಕಾ ಪಂಡಿತ್, ಶುಭಾ ಪೂಂಜಾ ಅವರು ಸ್ಟಾರ್ ಪಟ್ಟ ಪಡೆದುಕೊಂಡರು.
ನಟ ಯಶ್ (Yash) ಅವರು ಇಂದು ‘ರಾಕಿಂಗ್ ಸ್ಟಾರ್’ ಆಗಿ ಮಿಂಚುತ್ತಿದ್ದಾರೆ. ನಟಿ ರಾಧಿಕಾ ಪಂಡಿತ್ ಕೂಡ ಚಿತ್ರದಲ್ಲಿ ಸಾಧನೆ ಮಾಡಿದ್ದಾರೆ. ಅದಕ್ಕೆಲ್ಲ ನಾಂದಿ ಹಾಡಿದ್ದು ‘ಮೊಗ್ಗಿನ ಮನಸು’ ಸಿನಿಮಾ. ಹದಿಹರೆಯದ ಹೃದಯಗಳನ್ನು ತನ್ನತ್ತ ಸೆಳೆದುಕೊಂಡಿದ್ದ ಆ ಸಿನಿಮಾ ಬಿಡುಗಡೆ ಆಗಿದ್ದು 2008ರ ಜುಲೈ 18ರಂದು. ನಿರ್ದೇಶಕ ಶಶಾಂಕ್ (Director Shashank) ಅವರು ತೆರೆಗೆ ತಂದ ಸುಂದರ ಪ್ರೇಮಕಥೆಗೆ ಈಗ 15 ವರ್ಷ ತುಂಬಿದೆ. ‘ಮೊಗ್ಗಿನ ಮನಸು’ ಸಿನಿಮಾ ತೆರೆಕಂಡು ಒಂದೂವರೆ ದಶಕ ಕಳೆದಿದೆ. ಇಂದಿಗೂ ಕೂಡ ಪ್ರೇಕ್ಷಕರ ಫೇವರಿಟ್ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರಕ್ಕೆ ಸ್ಥಾನವಿದೆ. ಈ ದಿನವನ್ನು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಸಿನಿಪ್ರಿಯರು ‘ಮೊಗ್ಗಿನ ಮನಸು’ (Moggina Manasu) ಬಗೆಗಿನ ನೆನಪುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮೆಲುಕು ಹಾಕುತ್ತಿದ್ದಾರೆ.
ಸೂಕ್ಷ್ಮವಾದ ಕಥೆಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ನಿರ್ದೇಶಕ ಶಶಾಂಕ್ ಅವರು ಫೇಮಸ್. ಅವರ ನಿರ್ದೇಶನದಲ್ಲಿ ‘ಮೊಗ್ಗಿನ ಮನಸು’ ಮೂಡಿಬಂದ ಪರಿಗೆ ಸಿನಿಪ್ರಿಯರು ಫಿದಾ ಆಗಿದ್ದರು. ಹಾಡುಗಳಂತೂ ಸೂಪರ್ ಹಿಟ್ ಆಗಿದ್ದವು. ಮನೋಮೂರ್ತಿ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾದ ಎಲ್ಲ ಗೀತೆಗಳು ಎವರ್ಗ್ರೀನ್ ಆಗಿ ಉಳಿದುಕೊಂಡಿವೆ. ಈ ಸಿನಿಮಾದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಮಾತ್ರವಲ್ಲದೇ ನಟಿ ಶುಭಾ ಪೂಂಜಾ ಕೂಡ ಸಖತ್ ಜನಪ್ರಿಯತೆ ಪಡೆದುಕೊಂಡರು.
ಇದನ್ನೂ ಓದಿ: Yash: ಯಶ್ ನಟನೆಯ ಸಿನಿಮಾಗಳನ್ನು ನೋಡಿ ‘ಜವಾನ್’ ಚಿತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದ ಶಾರುಖ್ ಖಾನ್
ಅಂದು ‘ಮೊಗ್ಗಿನ ಮನಸು’ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಯಶ್ ಈಗ ಮಾಸ್ ಹೀರೋ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಮಿಂಚುತ್ತಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ತೆರೆಕಂಡ ಬಳಿಕ ಅವರ ಹವಾ ಹೆಚ್ಚಿತು. ಭಾರತದಲ್ಲಿ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿ ಅವರಿಗೆ ಅಭಿಮಾನಿಗಳು ಇದ್ದಾರೆ. ಅಷ್ಟರಮಟ್ಟಿಗೆ ಯಶ್ ಜನಪ್ರಿಯತೆ ಗಳಿಸಿದ್ದಾರೆ. ಅವರ ಮುಂದಿನ ಸಿನಿಮಾದ ಘೋಷಣೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ #Yash19 ಹ್ಯಾಶ್ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಇದನ್ನೂ ಓದಿ: ಹೊಸ ಆರಂಭಗಳಿಗೆ ನಾಂದಿ ಹಾಡಿದ ಫೋಟೋಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್
‘ಮೊಗ್ಗಿನ ಮನಸು’ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ ಯಶ್ ಮತ್ತು ರಾಧಿಕಾ ಪಂಡಿತ್ ಅವರು ರಿಯಲ್ ಲೈಫ್ನಲ್ಲಿಯೂ ಒಂದಾದರು. 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಇಬ್ಬರು ಮಕ್ಕಳು ಇದ್ದಾರೆ. ಮದುವೆ ಬಳಿಕ ರಾಧಿಕಾ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದೆ. ಕುಟುಂಬ ಮತ್ತು ಮಕ್ಕಳ ಕಡೆಗೆ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಒಳ್ಳೆಯ ಪಾತ್ರ ಮತ್ತು ಸಿನಿಮಾದ ಮೂಲಕ ಅವರು ಕಮ್ಬ್ಯಾಕ್ ಮಾಡಲಿ ಎಂಬುದು ಅಭಿಮಾನಿಗಳ ಆಸೆ.
ಇದನ್ನೂ ಓದಿ: ಈ ವ್ಯಕ್ತಿ ಕೆಟ್ಟ ಸಿನಿಮಾ ಮಾಡಲು ಸಾಧ್ಯವೇ ಇಲ್ಲ: ನಿರ್ದೇಶಕನ ಹೊಗಳಿದ ಸುದೀಪ್
‘ಮೊಗ್ಗಿನ ಮನಸು’ ಚಿತ್ರದಿಂದ ಸಿಕ್ಕ ಯಶಸ್ಸಿನಿಂದ ನಿರ್ದೇಶಕ ಶಶಾಂಕ್ ಅವರು ಸ್ಯಾಂಡಲ್ವುಡ್ನಲ್ಲಿ ಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡರು. ಆ ಬಳಿಕ ಅವರು ಸುದೀಪ್, ದುನಿಯಾ ವಿಜಯ್, ಕೃಷ್ಣ ಅಜಯ್ ರಾವ್, ಗಣೇಶ್ ಮುಂತಾದ ನಟರಿಗೆ ಆ್ಯಕ್ಷನ್-ಕಟ್ ಹೇಳಿ ಸೈ ಎನಿಸಿಕೊಂಡರು. ಈಗ ಅವರು ನಿರ್ದೇಶನ ಮಾಡಿರುವ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಬೃಂದಾ ಆಚಾರ್ಯ, ಮಿಲನಾ ನಾಗರಾಜ್ ಮುಂತಾದವರು ನಟಿಸಿದ್ದು, ಜುಲೈ 28ರಂದು ರಿಲೀಸ್ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.