ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಚಿತ್ರ ಈಗ ಬಾಕ್ಸಾಫೀಸ್ನಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಗಳಿಸಿರುವ ದಾಖಲೆ ಬರೆದಿರುವುದಲ್ಲದೇ, ಉಳಿದ ಚಿತ್ರರಂಗಗಳಲ್ಲೂ ಭರ್ಜರಿ ಕಮಾಯಿ ಮಾಡಿದೆ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ. ಪರಿಣಾಮವಾಗಿ ತೆಲುಗಿನಲ್ಲಿ ಈ ವಾರ ತೆರೆಕಾಣಬೇಕಿದ್ದ ಎರಡು ಚಿತ್ರಗಳನ್ನು ಮುಂದೂಡಲಾಗಿದೆ. ‘ಕೆಜಿಎಫ್ 2’ಗೆ ಸ್ಪರ್ಧೆ ಒಡ್ಡಬಹುದು ಎಂದು ನಿರೀಕ್ಷಿಸಲಾಗಿದ್ದ ‘ಬೀಸ್ಟ್’ ಕೂಡ ಪೈಪೋಟಿಯಿಂದ ಹಿಂದೆ ಸರಿದಿದೆ. ತಮಿಳುನಾಡಿನಲ್ಲೂ ಪ್ರೇಕ್ಷಕರು ವಿಜಯ್ ನಟನೆಯ ಚಿತ್ರಕ್ಕಿಂತ ಯಶ್ ನಟನೆಯ ಚಿತ್ರಕ್ಕೆ ಪ್ರಾಶಸ್ತ್ಯ ಕೊಡುತ್ತಿದ್ದಾರೆ. ಹೀಗಾಗಿ ಅಲ್ಲಿಯೂ ಬಾಕ್ಸಾಫೀಸ್ ಗಳಿಗೆ ಏರುತ್ತಲೇ ಸಾಗಿದೆ. ಹಿಂದಿ ಚಿತ್ರರಂಗದಲ್ಲಂತೂ ಕೆಜಿಎಫ್ ಹವಾ ಭರ್ಜರಿಯಾಗಿದೆ. ಕೊರೊನಾ ನಂತರದಲ್ಲಿ ಯಾವ ಹಿಂದಿ ಚಿತ್ರಗಳೂ ಗಳಿಸದಷ್ಟನ್ನು ಕೆಜಿಎಫ್ 2 ಹಿಂದಿ ಅವತರಣಿಗೆ ಗಳಿಸುತ್ತಿದೆ.
ಬುಧವಾರ ಅಂದರೆ ಇಂದು ‘ಕೆಜಿಎಫ್ ಚಾಪ್ಟರ್ 2’ ಹಿಂದಿ ಅವತರಣಿಕೆಯ ಗಳಿಗೆ 250 ಕೋಟಿ ರೂ ದಾಟಲಿದೆ. ಈ ಮೂಲಕ ತೆರೆಕಂಡ ಮೊದಲ ವಾರದಲ್ಲಿಯೇ 300 ಕೋಟಿ ಕ್ಲಬ್ ಸನಿಹ ‘ಕೆಜಿಎಫ್ 2’ ತಲುಪಬಹುದು ಎಂಬ ನಿರೀಕ್ಷೆಗಳಿವೆ. ಸಾಮಾನ್ಯವಾಗಿ ವಾರಾಂತ್ಯ ಕಳೆದ ನಂತರ ಚಿತ್ರಗಳ ಗಳಿಕೆ ತೀವ್ರವಾಗಿ ಕುಸಿತವಾಗುತ್ತದೆ. ಆದರೆ ಈ ಚಿತ್ರದ ವಿಷಯದಲ್ಲಿ ಹಾಗಾಗಿಲ್ಲ. ಸೋಮವಾರ ಹಿಂದಿ ಮಾರುಕಟ್ಟೆಯಲ್ಲಿ ಚಿತ್ರವು ಸುಮಾರು 20 ಕೋಟಿ ಆಸುಪಾಸಿನಲ್ಲಿ ಕಲೆಕ್ಷನ್ ಮಾಡಿತ್ತು.
ಒಟ್ಟಾರೆ ಚಿತ್ರದ ಕಲೆಕ್ಷನ್ 600 ಕೋಟಿ ದಾಟಿದೆ ಎಂದು ವರದಿಗಳು ಹೇಳಿವೆ. ಅಧಿಕೃತ ಲೆಕ್ಕಾಚಾರ ಇನ್ನಷ್ಟೇ ಲಭ್ಯವಾಗಬೇಕಿದೆ. ಈ ನಡುವೆ ‘ಕೆಜಿಎಫ್ ಚಾಪ್ಟರ್ 2’ ಚಿತ್ರ ಕೇವಲ ಬಾಕ್ಸಾಫೀಸ್ನಲ್ಲಿ ಮಾತ್ರವಲ್ಲ, ರೇಟಿಂಗ್ನಲ್ಲೂ ದಾಖಲೆ ಬರೆದಿದೆ.
ಐಎಂಡಿಬಿಯಲ್ಲಿ ‘ಕೆಜಿಎಫ್ ಚಾಪ್ಟರ್ 2’ ರೇಟಿಂಗ್ ಎಷ್ಟು?
ಚಿತ್ರಗಳಿಗೆ ರೇಟಿಂಗ್ ನೀಡುವ ವೇದಿಕೆ ಐಎಂಡಿಬಿಯಲ್ಲಿ ‘ಕೆಜಿಎಫ್ ಚಾಪ್ಟರ್ 2’ ಭರ್ಜರಿ ರೇಟಿಂಗ್ ಪಡೆದಿದೆ. ಸುಮಾರು 65,000 ಜನರು ಇದುವರೆಗೆ ವೋಟ್ ಮಾಡಿದ್ದು, ಚಿತ್ರದ ರೇಟಿಂಗ್ 9.6 ಇದೆ. ಕಮರ್ಷಿಯಲ್ ಚಿತ್ರವಾದ ‘ಕೆಜಿಎಫ್ 2’ ಇಷ್ಟು ದೀರ್ಘ ಕಾಲದ ನಂತರವೂ ಅತ್ಯುತ್ತಮ ರೇಟಿಂಗ್ ಉಳಿಸಿಕೊಂಡಿರುವುದು ವಿಶೇಷ. ಜನರು ವೋಟ್ ಮಾಡುವ ವಿಧಾನ ಹಾಗೂ ಕಾಲ ಕಳೆದ ನಂತರ ರೇಟಿಂಗ್ಗಳನ್ನು ಗಮನಿಸಿ ಅಂತಿಮವಾಗಿ ರೇಟಿಂಗ್ ಬದಲಾಗಬಹುದು. ಕಾರಣ, ಪುನೀತ್ ನಟನೆಯ ‘ಜೇಮ್ಸ್’ ಮೊದಲಿಗೆ 9.9 ರೇಟಿಂಗ್ ಪಡೆದುಕೊಂಡಿತ್ತು. ಪ್ರಸ್ತುತ 9.2 ರೇಟಿಂಗ್ ಹೊಂದಿದೆ. ‘ಕೆಜಿಎಫ್ ಚಾಪ್ಟರ್2 ’ ಅಂತಿಮವಾಗಿ ಎಷ್ಟು ರೇಟಿಂಗ್ ಪಡೆಯಬಹುದು ಎನ್ನುವುದು ಸದ್ಯದ ಕುತೂಹಲವಾಗಿದೆ. ಹಲವು ಭಾರತೀಯ ಚಿತ್ರಗಳು ಅತ್ಯುತ್ತಮ ರೇಟಿಂಗ್ ಪಡೆದಿವೆ. ಇತ್ತೀಚಿನ ‘ಜೈ ಭೀಮ್’ 9.4 ರೇಟಿಂಗ್ ಹೊಂದಿದೆ.
ಐಎಂಡಿಬಿ ರೇಟಿಂಗ್ ನೀಡುವುದು ಹೇಗೆ?
ಐಎಂಡಿಬಿ ತನ್ನ ರೇಟಿಂಗ್ ಬಗ್ಗೆ ತಿಳಿಸಿರುವಂತೆ ಅದು ಜನರು ವೋಟ್ ಮಾಡಿರುವುದನ್ನು ನೇರವಾಗಿ ತೆಗೆದುಕೊಳ್ಳುವುದಿಲ್ಲ. ಬದಲಾಗಿ ಪ್ರತಿ ವೋಟ್ಗಳಿಗೆ ಅದರದ್ದೇ ಆದ ತೂಕವಿರುತ್ತದೆ. ಅರ್ಥಾತ್ ಪ್ರತಿ ವೋಟ್ನ ಪ್ರಾಮುಖ್ಯತೆ ಬದಲಾಗಬಹುದು. ಇದನ್ನು ಐಎಂಡಿಬಿ ವ್ಯಾಖ್ಯಾನಿಸುವುದು ಹೀಗೆ. ‘‘ನಾವು ಎಲ್ಲರ ವೋಟ್ಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಅಂತಿಮ ರೇಟಿಂಗ್ ನೀಡುವಾಗ ಎಲ್ಲರ ವೋಟ್ಗಳು ಸಮಾನ ಪರಿಣಾಮವನ್ನು ಹೊಂದಿರುವುದಿಲ್ಲ’’ ಎಂದಿದೆ. ಒಂದು ವೇಳೆ ರೇಟಿಂಗ್ ನೀಡುತ್ತಿರುವ ಬಗ್ಗೆ ಅನುಮಾನ ಬಂದರೆ ಆಗ ಬೇರೊಂದು ವಿಧಾನದ ಮೂಲಕ ರೇಟಿಂಗ್ ನೀಡುತ್ತೇವೆ ಎಂದು ಸಂಸ್ಥೆ ಹೇಳಿಕೊಂಡಿದೆ. ಆದರೆ ಆ ವಿಧಾನದ ಬಗ್ಗೆ ಅದು ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ.
ಇದನ್ನೂ ಓದಿ: Beast: ‘ಬೀಸ್ಟ್’ ಸೋಲಿಗೆ ನೇರವಾಗಿ ನಿರ್ದೇಶಕರನ್ನೇ ಹೊಣೆ ಮಾಡಿದ ವಿಜಯ್ ತಂದೆ; ಪುತ್ರನ ಚಿತ್ರದ ಬಗ್ಗೆ ಹೇಳಿದ್ದೇನು?