2023ರಲ್ಲಿ ಕನ್ನಡ ಚಿತ್ರರಂಗ ಕಂಡ ವಿವಾದಗಳಿವು: ನೆನಪಿವೆಯೇ?

| Updated By: Digi Tech Desk

Updated on: Dec 22, 2023 | 4:22 PM

Year Ender 2023: ಈ ವರ್ಷ ಕನ್ನಡ ಚಿತ್ರರಂಗವನ್ನು ಸುತ್ತುವರೆದ ಕೆಲವು ವಿವಾದಗಳ ಪಟ್ಟಿ ಇಲ್ಲಿದೆ. ಈ ವಿವಾದಗಳು ನಿಮಗೆ ನೆನಪಿದೆಯೇ?

2023ರಲ್ಲಿ ಕನ್ನಡ ಚಿತ್ರರಂಗ ಕಂಡ ವಿವಾದಗಳಿವು: ನೆನಪಿವೆಯೇ?
2023ರ ಸ್ಯಾಂಡಲ್​ವುಡ್ ವಿವಾದಗಳು
Follow us on

ಇತರೆ ಚಿತ್ರರಂಗಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ (Sandalwood) ವಿವಾದಗಳು ತುಸು ಕಡಿಮೆಯೇ. ಇಲ್ಲಿನ ಸ್ಟಾರ್ ನಟರು, ಫಿಲ್ಮ್​ ಚೇಂಬರ್ ಹೆಚ್ಚು ಗಟ್ಟಿಯಾಗಿರುವ ಕಾರಣ ಮಾತ್ರವೇ ಅಲ್ಲದೆ, ನಟ-ನಟಿಯರ ನಡುವೆಯೂ ಆತ್ಮೀಯತೆ, ಕುಟುಂಬ ಭಾವ ಗಾಢವಾಗಿರುವ ಕಾರಣದಿಂದ ವಿವಾದಗಳಿಗೆ ಆಸ್ಪದ ಕೊಡುವುದು ಕಡಿಮೆಯೇ. ಹಾಗಿದ್ದರೂ ಸಹ ವರ್ಷಕ್ಕೆ ಕೆಲವು ವಿವಾದಗಳು ಒಲ್ಲೆ ಎಂದರೂ ಸುತ್ತಿಕೊಳ್ಳುತ್ತವೆ. ಅಂತಹುವೇ ಈ ವರ್ಷ ಸ್ಯಾಂಡಲ್​ವುಡ್​ನಲ್ಲಿ ಹೆಚ್ಚು ಗಮನ ಸೆಳೆದ ವಿವಾದಗಳ ಪಟ್ಟಿ ಇಲ್ಲಿದೆ.

ಸಾನ್ಯಾ ಐಯ್ಯರ್​ ಮೇಲೆ ದೌರ್ಜನ್ಯ

ಬಿಗ್​ಬಾಸ್ ಕನ್ನಡ ಒಟಿಟಿ ಮಾಜಿ ಸ್ಪರ್ಧಿ ಮತ್ತು ನಟಿ ಸಾನ್ಯಾ ಐಯ್ಯರ್ ಜನವರಿ ಅಂತ್ಯದಲ್ಲಿ ಪುತ್ತೂರಿನಲ್ಲಿ ನಡೆದ ಕಂಬಳ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗಿಯಾಗಿದ್ದರು. ವೇದಿಕೆಯಲ್ಲಿ ಸಾನ್ಯಾ ಮಾತನಾಡುವಾಗಲೇ ಯುವಕನೊಬ್ಬ ಕುಡಿದು ಅತಿಯಾಗಿ ವರ್ತಿಸಿದ್ದ. ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ರೂಂಗೆ ಹೋಗಿ ಗೆಳತಿಯೊಟ್ಟಿಗೆ ಕಂಬಳ ನೋಡಲು ಸಾನ್ಯಾ ಮರಳಿ ಬಂದಾಗ ಅದೇ ಯುವಕ ಸಾನ್ಯಾ ಐಯ್ಯರ್ ಜೊತೆ ಕೆಟ್ಟದಾಗಿ ವರ್ತಿಸಿದ್ದು, ಸಾನ್ಯಾರ ಕೈ, ಕೂದಲು ಹಿಡಿದು ಎಳೆದಾಡಿದ್ದ. ಇದಕ್ಕೆ ಸಾನ್ಯಾ ಹಾಗೂ ಅವರ ಗೆಳತಿ ಆಕ್ರೋಶ ವ್ಯಕ್ತಪಡಿಸಿದ್ದರು. ಆಯೋಜಕರ ಮೇಲೂ ದೂರುಗಳು ಕೇಳಿ ಬಂದಿದ್ದವು. ಕೊನೆಗೆ ಆಯೋಜಕರು ದೈವದ ಮೊರೆ ಹೋಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ನಮಸಿದರು.

ವಾಲ್ಮೀಕಿ ಜಾತ್ರೆಗೆ ಸುದೀಪ್ ಗೈರು

ಫೆಬ್ರವರಿ ತಿಂಗಳಲ್ಲಿ ದಾವಣಗೆರೆಯ ರಾಜನಹಳ್ಳಿಯಲ್ಲಿ ಅದ್ಧೂರಿಯಾಗಿ ವಾಲ್ಮೀಕಿ ಜಾತ್ರೆ ಮಾಡಲಾಗಿತ್ತು. ಹಲವು ರಾಜಕೀಯ ಗಣ್ಯರು ಈ ಜಾತ್ರೆಗೆ ಆಗಮಿಸಿದ್ದರು. ಫೆಬ್ರವರಿ 9ರಂದು ಈ ಜಾತ್ರೆಗೆ ನಟ ಸುದೀಪ್ ಆಗಮಿಸುತ್ತಾರೆ ಎಂದಾಗಿತ್ತು. ಆದರೆ ಸುದೀಪ್ ಜಾತ್ರೆಗೆ ಹೋಗಿರಲಿಲ್ಲ. ಇದರಿಂದ ಕೋಪಗೊಂಡ ಅಭಿಮಾನಿಗಳು ಗಲಾಟೆ ಎಬ್ಬಿಸಿ, ಕುರ್ಚಿಗಳನ್ನು ಮುರಿದಿದ್ದರು. ಬಳಿಕ ಟ್ವೀಟ್ ಮಾಡಿದ್ದ ಸುದೀಪ್, ಕರೆದಿದ್ದರೆ ಖಂಡಿತ ಹೋಗಿರುತ್ತಿದ್ದೆ ಎಂದರು. ಅಭಿಮಾನಿಗಳ ಸಿಟ್ಟು ಆಯೋಜಕರ ಮೇಲೆ ತಿರುಗಿತು. ಬಳಿಕ ಆಯೋಜಕರು, ಸುದೀಪ್​ರ ತಂದೆಯವರಿಗೆ ಆಹ್ವಾನ ಪತ್ರಿಕೆ ನೀಡಿರುವ ಚಿತ್ರವನ್ನು ಬಿಡುಗಡೆ ಮಾಡಿದರು. ಬಳಿಕ ವಿವಾದ ತಣ್ಣಗಾಯಿತು.

ಇದನ್ನೂ ಓದಿ: Year Ender 2023: ಈ ವರ್ಷ ದುಬಾರಿ ಕಾರು ಖರೀದಿಸಿದ ಭಾರತದ ಸೆಲೆಬ್ರಿಟಿಗಳು..

ವನ್ಯ ಪಕ್ಷಿಗಳು ವಶ

ನಟ ದರ್ಶನ್ ಅವರ ಮೈಸೂರಿನ ಫಾರಂ ಹೌಸ್​ ಮೇಲೆ ದಾಳಿ ಮಾಡಿದ್ದ ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ದರ್ಶನ್ ಸಾಕಿದ್ದ ಕೆಲವು ಪಕ್ಷಿಗಳನ್ನು ವಶಪಡಿಸಿಕೊಂಡಿದ್ದರು. ಮಾಹಿತಿ ಕೊರತೆಯಿಂದ ಫಾರಂ ಹೌಸ್​ನಲ್ಲಿ ಅಥವಾ ಮನೆಯಲ್ಲಿ ಸಾಕಬಾರದಾಗಿದ್ದ ಕೆಲವು ಪಕ್ಷಿಗಳನ್ನು ದರ್ಶನ್ ಸಾಕಿದ್ದರು ಎನ್ನಲಾಗಿತ್ತು. ದರ್ಶನ್ ಅವರು ಯೂಟ್ಯೂಬರ್ ಒಬ್ಬರಿಗೆ ಸಂದರ್ಶನ ನೀಡಿದ ಬಳಿಕ ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ಫಾರಂ ಹೌಸ್​ಗೆ ಭೇಟಿ ನೀಡಿದ್ದರು.

’ಕೆಜಿಎಫ್’ ಬಗ್ಗೆ ನಿರ್ದೇಶಕ ಟೀಕೆ

ತೆಲುಗಿನ ನಿರ್ದೇಶಕ ಮಹಾ ವೆಂಕಟೇಶ್, ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ‘ಕೆಜಿಎಫ್’ ಬಗ್ಗೆ ಸಂದರ್ಶನವೊಂದರಲ್ಲಿ ನಾಲಗೆ ಹರಿಬಿಟ್ಟಿದ್ದ, ‘ಕೆಜಿಎಫ್’ ಸಿನಿಮಾವನ್ನು ಕೆಟ್ಟ ಪದಗಳನ್ನು ಬಳಸಿ ವಿಮರ್ಶೆ ಮಾಡಿದ್ದ ಮಹಾ ವೆಂಕಟೇಶ್, ಕಂತ್ರಿ ನಾಯಿ ಕತೆಯನ್ನು ಸಿನಿಮಾ ಮಾಡಿದ್ದಾರೆ ಎಂದಿದ್ದ. ಆತನ ಹೇಳಿಕೆಯನ್ನು ಕೆಲ ತೆಲುಗು ನಟರೇ ಖಂಡಿಸಿದ್ದರು. ಇತ್ತೀಚೆಗೆ ಪ್ರಭಾಸ್ ಅಭಿಮಾನಿಗಳ ಸಿಟ್ಟಿಗೆ ಕಾರಣವಾದ ಮಹಾ ವೆಂಕಟೇಶ್ ತಮ್ಮ ಟ್ವಿಟ್ಟರ್ ಖಾತೆ ಡಿಲೀಟ್ ಮಾಡಿದ್ದಾರೆ.

ಉರಿಗೌಡ-ನಂಜೇಗೌಡ

ರಾಜಕೀಯ ಹಾಗೂ ಚಿತ್ರರಂಗ ಎರಡರಲ್ಲೂ ವಿವಾದ ಸೃಷ್ಟಿಸಿದ್ದು ‘ಉರಿಗೌಡ-ನಂಜೇಗೌಡ’. ಟಿಪ್ಪುವನ್ನು ಕೊಂದಿದ್ದು ‘ಉರಿಗೌಡ-ನಂಜೇಗೌಡ’ ಎಂದು ಬಿಜೆಪಿ ಪ್ರಚಾರ ಮಾಡಿತ್ತು. ಇದನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು. ಈ ವಿವಾದ ಜೋರಾಗಿ ಹೊಗೆ ಆಡುತ್ತಿರುವಾಗೇ ನಿರ್ಮಾಪಕ ಮುನಿರತ್ನ ‘ಉರಿಗೌಡ-ನಂಜೇಗೌಡ’ ಹೆಸರನ್ನು ರಿಜಿಸ್ಟರ್ ಮಾಡಿಸಿ ಸಿನಿಮಾ ಮಾಡುವುದಾಗಿ ಘೋಷಿಸಿದರು. ಬಳಿಕ ನಂಜಾವಧೂತ ಸ್ವಾಮಿಗಳವರ ಸಂಧಾನದ ಬಳಿಕ ಸಿನಿಮಾ ನಿರ್ಮಾಣ ಕೈಬಿಟ್ಟರು.

ಇದನ್ನೂ ಓದಿ:Year Ender 2023: ಹೀನಾಯವಾಗಿ ಮುಗ್ಗರಿಸಿದ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳು..  

ನ್ಯೂಡ್ ಸಿನಿಮಾಗಳಲ್ಲಿ ನಟಿಸ್ತೀರಾ?

ಈಗ ಬಿಗ್​ಬಾಸ್​ನಲ್ಲಿರುವ ತನಿಷಾ ಕುಪ್ಪಂಡ, ‘ಪೆಂಟಗಾನ್’ ಹೆಸರಿನ ಅಂಥಾಲಜಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಅವರ ದೃಶ್ಯಗಳು ತುಸು ಬೋಲ್ಡ್ ಆಗಿದ್ದಾವೆಂಬುದು ಟ್ರೈಲರ್​ನಿಂದ ತಿಳಿದು ಬರುತ್ತಿತ್ತು. ಸಿನಿಮಾದ ಪ್ರಚಾರದ ವೇಳೆ ಯೂಟ್ಯೂಬ್ ಸಂದರ್ಶಕನೊಬ್ಬ ‘ನೀವು ಪೋರ್ನ್ ಸಿನಿಮಾಗಳಲ್ಲಿ ನಟಿಸಲು ತಯಾರಿದ್ದೀರಾ?’ ಎಂದು ನಟಿಯನ್ನು ಕೇಳಿದ್ದ. ಅವನ ಪ್ರಶ್ನೆ ಕೇಳಿ ಸಿಟ್ಟಾದ ನಟಿ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದಿದ್ದರು. ಬಳಿಕ ಆ ಯೂಟ್ಯೂಬರ್ ವಿರುದ್ಧ ದೂರು ಸಹ ದಾಖಲಿಸಲಾಯ್ತು. ಆತನನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸಿದರು.

ಕಡ್ಡಿಪುಡಿ ಚಂದ್ರು ವಿರುದ್ಧ ವಂಚನೆ ಆರೋಪ

ನಟ, ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿರುದ್ಧ ನಿರ್ದೇಶಕ ಪಿಸಿ ಶೇಖರ್ ವಂಚನೆ ಆರೋಪ ಮಾಡಿದ್ದರು. ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ನಟಿಸಿದ್ದ ‘ಲವ್ ಬರ್ಡ್ಸ್’ ಸಿನಿಮಾವನ್ನು ಕಡ್ಡಿಪುಡಿ ಚಂದ್ರು ನಿರ್ಮಿಸಿ, ಪಿಸಿ ಶೇಖರ್ ನಿರ್ದೇಶನ ಮಾಡಿದ್ದರು. ಆದರೆ ಚಂದ್ರು ಅವರು ಮೊದಲು ಒಪ್ಪಿಕೊಂಡ 25 ಲಕ್ಷ ಹಣಕ್ಕೆ ಬದಲಿಗೆ ಕೇವಲ 6.50 ಲಕ್ಷ ಹಣವನ್ನಷ್ಟೆ ನೀಡಿದ್ದಾರೆಂದು ಅವರು ಆರೋಪಿಸಿದ್ದರು.

ಸುದೀಪ್ ವಿರುದ್ಧ ನಿರ್ಮಾಪಕ ಕುಮಾರ್ ಆರೋಪ

ನಟ ಸುದೀಪ್ ವಿರುದ್ಧ ನಿರ್ಮಾಪಕ ಕುಮಾರ್ ಗಂಭೀರ ಆರೋಪವನ್ನು ಮಾಡಿದ್ದರು. ಸುದೀಪ್ ಮುಂಗಡ ಹಣ ಪಡೆದು ಕಾಲ್​ಶೀಟ್ ನೀಡುತ್ತಿಲ್ಲ. ಸುದೀಪ್ ಅವರು ಎಂಟು ವರ್ಷಗಳ ಹಿಂದೆಯೇ ನಮ್ಮಿಂದ ಮುಂಗಡ ಹಣ ಪಡೆದಿದ್ದಾರೆ. ಆದರೆ ಈ ವರೆಗೆ ಕಾಲ್​ಶೀಟ್ ಕೊಟ್ಟಿಲ್ಲ ಮಾತ್ರವಲ್ಲದೆ ಹಣವನ್ನೂ ಹಿಂತಿರುಗಿಸಿಲ್ಲ ಎಂದಿದ್ದರು. ಕುಮಾರ್ ಅವರು ಫಿಲ್ಮ್​ಚೇಂಬರ್ ಎದುರು ಧರಣಿ ಸಹ ಕೂತರು, ಶಿವರಾಜ್ ಕುಮಾರ್, ರವಿಚಂದ್ರನ್ ಅವರನ್ನು ಭೇಟಿಯಾಗಿ ನ್ಯಾಯ ಕೊಡಿಸುವಂತೆ ಆಗ್ರಹಿಸಿದರು. ರವಿಚಂದ್ರನ್, ರಾಕ್​ಲೈನ್ ಅವರು ಸಂಧಾನದ ಪ್ರಯತ್ನ ಮಾಡಿದರಾದರೂ ಅದು ವಿಫಲವಾಯ್ತು. ಕೊನೆಗೆ ಸುದೀಪ್, ಕುಮಾರ್, ಸುರೇಶ್ ಹಾಗೂ ರೆಹಮಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಪ್ರಕರಣ ಚಾಲ್ತಿಯಲ್ಲಿದೆ.

ಇದನ್ನೂ ಓದಿ:ನೆಟ್​ಫ್ಲಿಕ್ಸ್​ ಅರ್ಧ ವಾರ್ಷಿಕ ‘ಟಾಪ್’ ಪಟ್ಟಿ ಬಿಡುಗಡೆ: ಭಾರತದ ಕಂಟೆಂಟ್​ಗಳಿಗೆ ಎಷ್ಟನೇ ಸ್ಥಾನ

ಹಾಸ್ಟೆಲ್ ಹುಡುಗರಿಗೆ ರಮ್ಯಾ ಶಾಕ್

ನಟಿ ರಮ್ಯಾ ‘ಹಾಸ್ಟೆಲ್ ಹುಡುಗರು’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದನ್ನು ಪ್ರಮುಖ ಪ್ರಚಾರ ಸರಕಾಗಿ ಚಿತ್ರತಂಡ ಬಳಸಿಕೊಂಡಿತ್ತು. ಆದರೆ ಸಿನಿಮಾ ಇನ್ನೇನು ಬಿಡುಗಡೆ ಆಗಲು ಕೆಲವೇ ದಿನಗಳಿರುವಾಗ ರಮ್ಯಾ, ಚಿತ್ರತಂಡಕ್ಕೆ ನೊಟೀಸ್ ಕಳಿಸಿ ತಮ್ಮ ನಟನೆಯ ದೃಶ್ಯಗಳನ್ನು ಕೈಬಿಡುವಂತೆ ಹೇಳಿದರು. ಆದರೆ ಚಿತ್ರತಂಡ ಇದಕ್ಕೆ ಒಪ್ಪಲಿಲ್ಲ, ನ್ಯಾಯಾಲಯದಲ್ಲಿ ಪ್ರಕರಣ ಎದುರಿಸಿ ರಮ್ಯಾರ ದೃಶ್ಯಗಳ ಸಹಿತವಾಗಿಯೇ ಸಿನಿಮಾವನ್ನು ಬಿಡುಗಡೆ ಮಾಡಿ, ಸೂಪರ್ ಹಿಟ್ ಮಾಡಿಕೊಂಡರು.

‘ಟೋಬಿ’ ಚೆನ್ನಾಗಿಲ್ಲ ಎಂದ ಮಹಿಳೆ

ರಾಜ್ ಬಿ ಶೆಟ್ಟಿ ನಟನೆಯ ‘ಟೋಬಿ’ ಸಿನಿಮಾ ಬಿಡುಗಡೆ ಆದಾಗ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಆ ಸಮಯದಲ್ಲಿ ವಿಡಿಯೋ ಒಂದು ವೈರಲ್ ಆಗಿ ವಿವಾದ ಎಬ್ಬಿಸಿತ್ತು. ‘ಟೋಬಿ’ ಸಿನಿಮಾ ನೋಡಿಬಂದ ಮಹಿಳೆಯೊಬ್ಬರು ಸಿನಿಮಾ ಚೆನ್ನಾಗಿಲ್ಲ ಯಾರೂ ಹೋಗಬೇಡಿ ಎಂದು ಕ್ಯಾಮೆರಾ ಮುಂದೆ ಹೇಳಿದರು. ಇದನ್ನು ಖಂಡಿಸಿದ ಯುವಕನೊಬ್ಬ ಆ ಮಹಿಳೆಯಗೆ ಅವಾಚ್ಯ ಶಬ್ದಗಳಲ್ಲಿ ಬೈದ. ಆ ಯುವಕ ‘ಟೋಬಿ’ ಸಿನಿಮಾ ತಂಡದವನೇ ಎಂದು ಸುದ್ದಿ ಹರಡಿ ವಿವಾದವಾಯ್ತು. ಬಳಿಕ ವಿಡಿಯೋ ಒಂದರಲ್ಲಿ ರಾಜ್ ಬಿ ಶೆಟ್ಟಿ, ಆ ಯುವಕ ನಮ್ಮ ತಂಡದವನಲ್ಲ ಎಂದರು. ಆ ಮಹಿಳೆಗೆ ಆದ ಸಮಸ್ಯೆಗೆ ಕ್ಷಮೆ ಸಹ ಕೇಳಿದರು.

ಉಪೇಂದ್ರ ವಿರುದ್ಧ ಜಾತಿ ನಿಂದನೆ ಪ್ರಕರಣ

ಆಗಸ್ಟ್ ತಿಂಗಳಲ್ಲಿ ನಟ ಉಪೇಂದ್ರ ಪ್ರಜಾಕೀಯ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋನಲ್ಲಿ ಮಾತನಾಡುತ್ತಾ ಆಡಿದ ಪದವೊಂದು ವಿವಾದಕ್ಕೆ ಕಾರಣವಾಯ್ತು. ಉಪೇಂದ್ರ ವಿರುದ್ಧ ದಲಿತಪರ ಸಂಘಟನೆಗಳು ಹಲವು ದೂರುಗಳನ್ನು ದಾಖಲಿಸಿದರು. ಉಪೇಂದ್ರ ವಿರುದ್ಧ ಎಫ್​ಐಆರ್ ಸಹ ಆಯಿತು. ತಾವು ಬಳಸಿದ ಪದ ಅಚಾತುರ್ಯದಿಂದ ಬಳಸಿದ್ದೆಂದು ಉಪೇಂದ್ರ ಸ್ಪಷ್ಟನೆ ನೀಡಿದರು. ಫಿಲ್ಮ್​ ಚೇಂಬರ್​ನಲ್ಲಿಯೂ ಉಪೇಂದ್ರ ವಿರುದ್ಧ ದೂರು ನೀಡಲಾಯ್ತು. ಬಳಿಕ ವಿವಾದ ತಣ್ಣಗಾಯ್ತು.

ಹುಲಿ ಉಗುರು ತಂದ ಸಂಕಷ್ಟ

ಬಿಗ್​ಬಾಸ್​ನಿಂದ ಆರಂಭವಾದ ಹುಲಿ ಉಗುರು ಸಂಕಷ್ಟ ಸ್ಯಾಂಡಲ್​ವುಡ್​ಗೂ ವ್ಯಾಪಿಸಿತು. ಬಿಗ್​ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ್ದಕ್ಕೆ ಅವರನ್ನು ಬಂಧಿಸಲಾಯ್ತು. ಬಳಿಕ ನಟ ದರ್ಶನ್, ಜಗ್ಗೇಶ್ ಸೇರಿದಂತೆ ಹುಲಿ ಉಗುರು ಹೊಂದಿದ್ದ ಹಲವರಿಗೆ ನೊಟೀಸ್ ನೀಡಲಾಯ್ತು. ವರ್ತೂರು ಸಂತೋಷ್ ಹೊರತುಪಡಿಸಿ ಯಾವುದೇ ಸೆಲೆಬ್ರಿಟಿಗಳನ್ನು ಈ ಪ್ರಕರಣದಲ್ಲಿ ಬಂಧಿಸಲಾಗಲಿಲ್ಲ.

ದರ್ಶನ್ ಮನೆ ನಾಯಿ ಕಡಿತ

ನಟ ದರ್ಶನ್ ಮನೆಯ ನಾಯಿ, ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಕಚ್ಚಿದ ಪ್ರಕರಣ ನವೆಂಬರ್ ತಿಂಗಳಲ್ಲಿ ಸದ್ದು ಮಾಡಿತು. ಜಿಂದಾಲ್​ ಉದ್ಯೋಗಿ ಮಹಿಳೆಯೊಬ್ಬರಿಗೆ ದರ್ಶನ್ ಮನೆಯ ಸಾಕು ನಾಯಿ ಕಡಿದಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಮಹಿಳೆ ದರ್ಶನ್ ಅವರನ್ನೂ ಆರೋಪಿಯನ್ನಾಗಿಸಿದ್ದರು. ವಿಚಾರಣೆ ನಡೆಸಿದ ಪೊಲೀಸರು ಬಳಿಕ ದರ್ಶನ್ ಹೆಸರನ್ನು ಕೈಬಿಟ್ಟರು.

ಇದನ್ನೂ ಓದಿ:ನಾಯಿ ಕಚ್ಚಿದ ಪ್ರಕರಣದಲ್ಲಿ ದರ್ಶನ್​ಗೆ ರಿಲೀಫ್​; ಚಾರ್ಜ್​ಶೀಟ್​ನಲ್ಲಿ ಇರಲ್ಲ ನಟನ ಹೆಸರು 

ವಿಷ್ಣುವರ್ಧನ್ ಸ್ಮಾರಕ ವಿವಾದ

ವಿಷ್ಣುವರ್ಧನ್ ಸ್ಮಾರಕವನ್ನು ಅಭಿಮಾನ್ ಸ್ಟುಡಿಯೋನಲ್ಲಿಯೇ ಮಾಡಬೇಕು ಎಂದು ವಿಷ್ಣುವರ್ಧನ್ ಅಭಿಮಾನಿಗಳು ಆಗ್ರಹಿಸಿ ಇತ್ತೀಚೆಗಷ್ಟೆ ಫಿಲ್ಮ್​ ಚೇಂಬರ್​ಗೆ ಮುತ್ತಿಗೆ ಹಾಕುವ ಪ್ರಯತ್ನವನ್ನು ಮಾಡಿದರು. ನಟ ಸುದೀಪ್ ಹಾಗೂ ನಟ ಡಾಲಿ ಧನಂಜಯ್ ಸಹ ವಿಷ್ಣುವರ್ಧನ್​ ಅಭಿಮಾನಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇತರೆ ಕೆಲವು ವಿವಾದಗಳು

ವರ್ಷದ ಆರಂಭದಲ್ಲಿ ನಟಿ ರಚಿತಾ ರಾಮ್, ಗಣರಾಜ್ಯೋತ್ಸವ ಮರೆಯಿರಿ, ‘ಕ್ರಾಂತಿ’ ಸಿನಿಮಾ ನೋಡಿರಿ ಎಂದಿದ್ದು ವಿವಾದಕ್ಕೆ ಕಾರಣವಾಗಿತ್ತು. ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಗಾಯಕಿ ಮಂಗ್ಲಿ ತೆಲುಗು ಹಾಡುಗಳನ್ನು ಹಾಡಿದ್ದು ಸಹ ವಿವಾದ ಸೃಷ್ಟಿಸಿತ್ತು. ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂಬ ಸುದ್ದಿಯೂ ಹರಿದಾಡಿತು. ಇನ್ನು ನಟ ಚೇತನ್ ಅಹಿಂಸ ವರ್ಷ ಪೂರ್ತಿ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇದ್ದರು. ಧರ್ಮ, ಅಂಬೇಡ್ಕರ್, ಟಿಪ್ಪು, ಮಹಾತ್ಮಾ ಗಾಂಧಿ ಇನ್ನೂ ಹಲವು ವಿಷಯಗಳ ಬಗ್ಗೆ ಚೇತನ್ ಹೇಳಿಕೆಗಳು ವಿವಾದಾತ್ಮಕ ಸ್ವರೂಪ ಪಡೆದವು. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲೇರಿದರು. ಸಿನಿಮಾದ ಹೆಸರು ಬಳಸದಂತೆ ಆಗ್ರಹಿಸಿದರು. ಆದರೆ ಪ್ರಕರಣವು ರಮ್ಯಾ ಪರ ಆಯಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Fri, 22 December 23