‘ಟಾಕ್ಸಿಕ್’ ಸಿನಿಮಾ ವಿಮರ್ಶೆ ಮಾಡಿದ ಯೂಟ್ಯೂಬರ್‌ಗೆ ಲೀಗಲ್ ನೋಟಿಸ್ ನೀಡಿದ ಚಿತ್ರತಂಡ

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಲವರಿಗೆ ಈ ಸಿನಿಮಾ ಇಷ್ಟ ಆಗಿದ್ದರೆ, ಇನ್ನು ಕೆಲವರಿಗೆ ಇಷ್ಟ ಆಗಿಲ್ಲ. ಸಿನಿಮಾದ ವಿಮರ್ಶೆ ಮಾಡಿದ ಯೂಟ್ಯೂಬ್ ಚಾನೆಲ್​ವೊಂದಕ್ಕೆ ಟಾಕ್ಸಿಕ್ ಚಿತ್ರತಂಡದ ಕಡೆಯಿಂದ ಲೀಗಲ್ ನೋಟಿಸ್ ಕಳಿಸಿರುವುದು ತಿಳಿದುಬಂದಿದೆ.

‘ಟಾಕ್ಸಿಕ್’ ಸಿನಿಮಾ ವಿಮರ್ಶೆ ಮಾಡಿದ ಯೂಟ್ಯೂಬರ್‌ಗೆ ಲೀಗಲ್ ನೋಟಿಸ್ ನೀಡಿದ ಚಿತ್ರತಂಡ
Yash

Updated on: Aug 27, 2026 | 8:46 PM

‘ರಾಕಿಂಗ್ ಸ್ಟಾರ್’ ಯಶ್ (Yash) ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ವಿವಾದವೊಂದು ಮುನ್ನೆಲೆಗೆ ಬಂದಿದೆ. ಚಿತ್ರದ ಬಗ್ಗೆ ಸುಳ್ಳು ಹಾಗೂ ನಿಂದನಾತ್ಮಕ ವಿಷಯಗಳನ್ನು ಹಂಚಿಕೊಳ್ಳಬಾರದು ಎಂದು ಬಿಡುಗಡೆಗೂ ಮುನ್ನವೇ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ತರಲಾಗಿತ್ತು. ಇದೀಗ ಸಿನಿಮಾ ಬಿಡುಗಡೆಯಾದ ಮರುದಿನವೇ, ತಮ್ಮ ವಿಮರ್ಶೆಯ (Toxic Review) ವೀಡಿಯೊಗೆ ಸಂಬಂಧಿಸಿದಂತೆ ಚಿತ್ರತಂಡದಿಂದ ಲೀಗಲ್ ನೋಟಿಸ್ (Legal Notice) ಬಂದಿದೆ ಎಂದು ಯೂಟ್ಯೂಬರ್‌ ಒಬ್ಬರು ತಿಳಿಸಿದ್ದಾರೆ.

ಯೂಟ್ಯೂಬರ್ ಸೂರಜ್ ಕುಮಾರ್ ಎಂಬುವವರು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ತಮಗೆ ಬಂದಿರುವ ಲೀಗಲ್ ನೋಟಿಸ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಬೆಂಗಳೂರು ಮೂಲದ ‘ಐಪ್ಲೆಕ್ಸ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು ‘ಟಾಕ್ಸಿಕ್’ ಚಿತ್ರದ ನಿರ್ಮಾಪಕರಾದ ‘ಕೆವಿಎನ್’ ಹಾಗೂ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಪರವಾಗಿ ಈ ನೋಟಿಸ್ ನೀಡಿದೆ.

‘ನಮ್ಮ ಕಕ್ಷಿದಾರರ ಹಕ್ಕುಸ್ವಾಮ್ಯ ಹೊಂದಿರುವ ಟಾಕ್ಸಿಕ್ ಸಿನಿಮಾಗೆ ಸಂಬಂಧಿಸಿದಂತೆ ನೀವು ಡಿಜಿಟಲ್ ಹಾಗೂ ಆನ್‌ಲೈನ್ ಮಾಧ್ಯಮಗಳಲ್ಲಿ ಕಂಟೆಂಟ್ ಹಂಚಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಜುಲೈ 13ರಿಂದ ಸೆಪ್ಟೆಂಬರ್ 26ರವರೆಗೆ ಕಾಪಿರೈಟ್ ಉಲ್ಲಂಘನೆ, ಸುಳ್ಳು ಹಾಗೂ ನಿಂದನಾತ್ಮಕ ಕಂಟೆಂಟ್ ವಿರುದ್ಧ ಕಾನೂನು ಕ್ರಮ ಜರುಗಿಸಲು, ಆನ್‌ಲೈನ್‌ನಿಂದ ವೀಡಿಯೊ ತೆಗೆದುಹಾಕಲು ಮತ್ತು ಡಿ-ಇಂಡೆಕ್ಸಿಂಗ್ ಮಾಡಲು ಐಪ್ಲೆಕ್ಸ್ ಸಂಸ್ಥೆಗೆ ನಿರ್ಮಾಪಕರು ಸಂಪೂರ್ಣ ಅಧಿಕಾರ ನೀಡಿದ್ದಾರೆ ಎನ್ನಲಾಗಿದೆ.

ಈ ನೋಟಿಸ್‌ನ ಸ್ಕ್ರೀನ್‌ಶಾಟ್ ಪೋಸ್ಟ್ ಮಾಡಿರುವ ಸೂರಜ್ ಕುಮಾರ್, ‘ನನ್ನ ರಿವ್ಯೂಗೆ ಲೀಗಲ್ ನೋಟಿಸ್ ನೀಡಿದ್ದಕ್ಕಾಗಿ ಟಾಕ್ಸಿಕ್ ಚಿತ್ರತಂಡಕ್ಕೆ ಧನ್ಯವಾದಗಳು’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಆಗಸ್ಟ್ 26ರಂದು ‘ಟಾಕ್ಸಿಕ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಯಿತು. ಈ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಮೊದಲ ದಿನದ ಗಳಿಕೆ 150 ಕೋಟಿ ರೂಪಾಯಿ; ಚಿತ್ರತಂಡದ ಅಧಿಕೃತ ಮಾಹಿತಿ

ಸಿನಿಮಾ ವಿಮರ್ಶಕರ ಮೇಲೆ ಚಿತ್ರತಂಡಗಳು ಬೇರೆ ಸಂಸ್ಥೆಯ ಮೂಲಕ ಲೀಗಲ್ ನೋಟಿಸ್ ಅಥವಾ ಕಾಪಿರೈಟ್ ಸ್ಟ್ರೈಕ್ ನೀಡುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಕೆಲವು ಯೂಟ್ಯೂಬ್ ಚಾನೆಲ್​ಗಳಿಗೆ ಇದೇ ರೀತಿಯ ಲೀಗಲ್ ನೋಟಿಸ್ ಕಳಿಸಿದ್ದು ವರದಿ ಆಗಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us