ಸಿನಿಮಾ ಮತ್ತು ರಾಜಕಾರಣದ ನಡುವೆ ಒಂದು ನಂಟು ಮೊದಲಿನಿಂದಲೂ ಇದೆ. ಅದೇನೇ ಇರಲಿ, ಶಾಸಕ ಜಮೀರ್ ಅಹ್ಮದ್ ಅವರ ಪುತ್ರ ಜೈದ್ ಖಾನ್ (Zaid Khan) ಅವರು ತಾನೊಬ್ಬ ರಾಜಕಾರಣಿಯ ಮಗ ಎಂಬುದನ್ನು ಮರೆತು ಮೊದಲ ಸಿನಿಮಾದಲ್ಲಿ ನಿರ್ದೇಶಕರಿಗೆ ಶರಣಾಗಿದ್ದಾರೆ. ಹೌದು, ಈ ಬಗ್ಗೆ ನಿರ್ದೇಶಕ ಜಯತೀರ್ಥ (Jayatheertha) ಮಾತನಾಡಿದ್ದಾರೆ. ‘ಬನಾರಸ್’ ಚಿತ್ರಕ್ಕೆ ಅವರು ನಿರ್ದೇಶನ ಮಾಡಿದ್ದು, ಈ ಸಿನಿಮಾ ಮೂಲಕ ಜೈದ್ ಖಾನ್ ಹೀರೋ ಆಗಿದ್ದಾರೆ. ಅವರಿಗೆ ಜೋಡಿಯಾಗಿ ಸೋನಲ್ ಮಾಂತೆರೋ ನಟಿಸಿದ್ದಾರೆ. ‘ಬನಾರಸ್’ (Banaras) ಸಿನಿಮಾದ ಮೊದಲ ಹಾಡು ‘ಮಾಯಾಗಂಗೆ’ ರಿಲೀಸ್ ಮಾಡಲಾಗಿದೆ. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ ಈ ಹಾಡಿಗೆ ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದಾರೆ. ತಿಲಕ್ ರಾಜ್ ಬಲ್ಲಾಳ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ‘ಬನಾರಸ್’ ಬಿಡುಗಡೆ ಆಗಲಿದೆ.
ಜೈದ್ ಖಾನ್ ಅವರ ಬದ್ಧತೆ ಬಗ್ಗೆ ಜಯತೀರ್ಥ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ‘ಜೈದ್ ಖಾನ್ ನನ್ನ ಬಳಿ ಬಂದು ನಿರ್ದೇಶನ ಮಾಡಿ ಎಂದು ಕೇಳಿಕೊಂಡಾಗ ‘ನೀವು ಹೆಸರಾಂತ ರಾಜಕಾರಣಿ ಮಗನಾದ್ದರಿಂದ ನಿಮಗೆ ನಾನು ನಟನೆ ಕಲಿಸಬೇಕಾದರೆ ಸ್ವಲ್ಪ ಕಷ್ಟವಾಗಬಹುದು’ ಅಂದಿದ್ದೆ. ಅದಕ್ಕೆ ಅವರು ಚಪ್ಪಲಿ ಬಿಟ್ಟು ಕೆಳಗೆ ಕುಳಿತು, ‘ನೀವು ಹೇಳಿ ಕೊಟ್ಟಿದ್ದನ್ನು ಮಾಡುತ್ತೇನೆ’ ಎಂದಿದ್ದರು. ಹಾಗೆಯೇ ಮಾಡಿದರು. ಅವರು ಈ ಕಥೆಯನ್ನು ಆಯ್ಕೆ ಮಾಡಿಕೊಂಡಾಗಲೇ ಗೆದ್ದರು. ಅದರ ಫಲಿತಾಂಶ ಈಗ ಗೊತ್ತಾಗುತ್ತಿದೆ’ ಎಂದಿದ್ದಾರೆ ಜಯತೀರ್ಥ.
ಜೈದ್ ಖಾನ್ ಅವರಿಗೆ ಇದು ಡ್ರೀಮ್ ಪ್ರಾಜೆಕ್ಟ್. ಅದಕ್ಕಾಗಿ ಅವರು ತುಂಬ ಶ್ರಮಪಟ್ಟಿದ್ದಾರೆ. ಮುಂಬೈಗೆ ಹೋಗಿ ನಟನೆ ಕಲಿತುಕೊಂಡು ಬಂದಿದ್ದಾರೆ. ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡುತ್ತಿರುವ ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಅವರಿಗೆ ಹಾಗೂ ಸಿನಿಮಾವನ್ನು ಅಚ್ಚುಕಟ್ಟಾಗಿ ನಿರ್ದೇಶಿಸಿದ ಜಯತೀರ್ಥ ಅವರಿಗೆ ಜೈದ್ ಖಾನ್ ಧನ್ಯವಾದ ಅರ್ಪಿಸಿದ್ದಾರೆ.
‘ಬನಾರಸ್’ ಚಿತ್ರಕ್ಕೆ ಸೆನ್ಸಾರ್ ಕೂಡ ಮುಗಿದಿದೆ. ಶೀಘ್ರದಲ್ಲೇ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ‘ಮಾಯಾಗಂಗೆ’ ಹಾಡು ಬಿಡುಗಡೆಗೆ ಶೈಲಜಾ ನಾಗ್, ಅಭಿಷೇಕ್ ಅಂಬರೀಷ್, ವಿನೋದ್ ಪ್ರಭಾಕರ್, ಯಶಸ್ ಸೂರ್ಯ, ಲಹರಿ ವೇಲು, ಚಂದ್ರು ಮುಂತಾದವರು ಬಂದು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: Maayagange Song: ‘ಬನಾರಸ್’ ಮೊದಲ ಗೀತೆ ‘ಮಾಯಾಗಂಗೆ’ ಬಗ್ಗೆ ನಾಗೇಂದ್ರ ಪ್ರಸಾದ್ ಮನದ ಮಾತು
ಶಾಸಕ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ದಾಖಲೆ; ಭಾರಿ ಮೊತ್ತಕ್ಕೆ ಲಹರಿ, ಟಿ ಸಿರೀಸ್ ಪಾಲಾಯ್ತು ‘ಬನಾರಸ್’ ಆಡಿಯೋ