ಬಡ ಮಕ್ಕಳಿಗೆ ‘ಚಿಂದಿ ಸ್ಟಾರ್ಸ್’ ಕಾರ್ಯಕ್ರಮದ ಮೂಲಕ ವೇದಿಕೆ ಕಲ್ಪಿಸಿದ ನಟಿ ಡಾ. ಪೂಜಾ ರಮೇಶ್
ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆ ಆಗಬೇಕು ಎಂಬುದು ಡಾ. ಪೂಜಾ ರಮೇಶ್ ಅವರ ಆಶಯ. ಚಿಂದಿ ಆಯುವ ಮಕ್ಕಳು ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ‘ಚಿಂದಿ ಸ್ಟಾರ್ಸ್’ ಕಾರ್ಯಕ್ರಮ ಮಾಡಲಾಗಿದೆ.
ನಟಿ ಡಾ. ಪೂಜಾ ರಮೇಶ್ (Dr Pooja Ramesh) ಅವರು ಅಭಿನಯ ಮತ್ತು ಮಾಡೆಲಿಂಗ್ ಜೊತೆಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನೂ ಮಾಡುತ್ತಿದ್ದಾರೆ. ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಹಾಡು, ಡ್ಯಾನ್ಸ್ ಎಂದರೆ ಅದು ಕೆಲವರಿಗೆ ಮಾತ್ರ ಸೀಮಿತ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಸಾಮಾನ್ಯವಾಗಿ ಬಡಮಕ್ಕಳು ಪ್ರತಿ ದಿನವೂ ತಮ್ಮ ಕಷ್ಟದಲ್ಲೇ ಮುಳುಗಿ ಹೋಗಿರುತ್ತಾರೆ. ಅವರಿಗೆ ಹಾಡುತ್ತ, ಕುಣಿಯುತ್ತ ನಲಿಯಲು ಅವಕಾಶವೇ ಸಿಗುವುದಿಲ್ಲ. ಅಂಥ (Underprivileged Children) ಮಕ್ಕಳಿಗಾಗಿ ‘ಚಿಂದಿ ಸ್ಟಾರ್ಸ್’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಪೂಜಾ ರಮೇಶ್. ರಾಯಚೂರಿನಲ್ಲಿ (Raichur) ಇತ್ತೀಚೆಗೆ ನಡೆದ ಈ ಕಾರ್ಯಕ್ರಮದಲ್ಲಿ 80ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಝಗಮಗಿಸುವ ವೇದಿಕೆಯಲ್ಲಿ ಬಡಮಕ್ಕಳು ತಮ್ಮ ಕಲೆ ಪ್ರದರ್ಶಿಸಿದ್ದಾರೆ. ಆ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಲಾಗಿದೆ. ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮಕ್ಕೆ ರಾಯಚೂರು ಜನತೆಯ ಜೊತೆಗೆ ಶಾಸಕ ಡಾ. ಶಿವರಾಜ್ ಪಾಟೀಲ್ ಕೂಡ ಸಾಕ್ಷಿ ಆದರು.
ಶ್ರೀಮಂತರ ಮಕ್ಕಳಿಗೆ ಸುಲಭವಾಗಿ ವೇದಿಕೆ ಸಿಗುತ್ತದೆ. ಮಧ್ಯಮ ವರ್ಗದ ಮಕ್ಕಳು ಕೂಡ ಹೇಗೋ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದರೆ ತೀರಾ ಕಡುಬಡತನದಲ್ಲಿ ಇರುವ ಮಕ್ಕಳು ಒಂದು ಸೂಕ್ತ ವೇದಿಕೆಗಾಗಿ ಕನಸು ಕಾಣುತ್ತಾರೆ. ಅಂಥ ಮಕ್ಕಳ ಕನಸನ್ನು ‘ಚಿಂದಿ ಸ್ಟಾರ್ಸ್’ ಕಾರ್ಯಕ್ರಮ ನನಸಾಗಿಸಿದೆ.
‘ಕಲಾ ಸಂಕುಲ’ ಸಂಸ್ಥೆ ಹಾಗೂ ‘ವಸಂತಲಕ್ಷ್ಮೀ ಫೌಂಡೇಶನ್’ ಸಹಯೋಗದಲ್ಲಿ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇದಿಕೆಯಲ್ಲಿ ಯಾವುದೇ ಪೈಪೋಟಿ ಇರಲಿಲ್ಲ. ಭಾಗವಹಿಸಿದ ಎಲ್ಲ ಮಕ್ಕಳಿಗೂ ಬಹುಮಾನ ಮತ್ತು ಸರ್ಟಿಫಿಕೇಟ್ ನೀಡಿ, ಬೆನ್ನು ತಟ್ಟಲಾಗಿದೆ. ನಟಿ ಪೂಜಾ ರಮೇಶ್ ಅವರು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಕಲಿಕಾ ಉಪಕರಣಗಳನ್ನು ವಿತರಿಸಿದ್ದಾರೆ.
2021ರಲ್ಲಿ ‘ಇನ್ಫ್ಯಾಂಟ್ ಸ್ಕೂಲ್ ಆಫ್ ಫ್ಯಾಷನ್ ಸಂಸ್ಥೆ’ ಆಯೋಜಿಸಿದ್ದ ಶೋನಲ್ಲಿ ಮಿಸ್ ಇಂಡಿಯಾ ಟೈಟಲ್ ಗೆದ್ದವರು ನಟಿ ಡಾ. ಪೂಜಾ ರಮೇಶ್. ಈ ಟೈಟಲ್ ಗೆದ್ದಾಗ ಅವರನ್ನು ರಾಯಚೂರಿನ ಜನರು ಸನ್ಮಾನಿಸಿದ್ದರು. ಅದಕ್ಕಾಗಿ ರಾಯಚೂರಿಗೆ ಧನ್ಯವಾದ ಅರ್ಪಿಸಬೇಕು, ಕೈಲಾದ ಸೇವೆ ಸಲ್ಲಿಸಬೇಕು ಎಂಬ ಕಾರಣಕ್ಕಾಗಿ ಅವರು ‘ಚಿಂದಿ ಸ್ಟಾರ್ಸ್’ ಕಾರ್ಯಕ್ರಮ ಮಾಡಿದ್ದಾರೆ. ಈ ವೇದಿಕೆಯಲ್ಲಿ ಅವರು ಜಿಲ್ಲೆಯ ಜನರ ಪ್ರೀತಿಯ ಬಗ್ಗೆ ಮನಸಾರೆ ಮಾತನಾಡಿದರು.
ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆ ಆಗಬೇಕು ಎಂಬುದು ಪೂಜಾ ರಮೇಶ್ ಅವರ ಆಶಯ. ಚಿಂದಿ ಆಯುವ ಮಕ್ಕಳು ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಅವರಲ್ಲಿ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಈ ವೇದಿಕೆಯಲ್ಲಿ ಪೂಜಾ ರಮೇಶ್ ಮತ್ತು ಅವರ ಪೋಷಕರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ಫ್ಯಾಷನ್, ಕಿರುತೆರೆ ಲೋಕದ ಪ್ರತಿಭಾವಂತ ಕನ್ನಡತಿ ಡಾ. ಪೂಜಾ ರಮೇಶ್ಗೆ ಗೋವಾದಲ್ಲಿ ಸನ್ಮಾನ
‘ಆನ್‌ಲೈನ್ ಕ್ಲಾಸ್‌ನಿಂದ ಶ್ರೀಮಂತರ ಮಕ್ಕಳು ಕಲಿಯುತ್ತಾರೆ, ಬಡವರ ಮಕ್ಕಳು ಕಲಿಕೆಯಿಂದ ದೂರ ಉಳಿಯುತ್ತಾರೆ’
Published On - 9:49 am, Wed, 29 June 22