ಫ್ಯಾಷನ್, ಕಿರುತೆರೆ​ ಲೋಕದ ಪ್ರತಿಭಾವಂತ ಕನ್ನಡತಿ ಡಾ. ಪೂಜಾ ರಮೇಶ್​ಗೆ ಗೋವಾದಲ್ಲಿ ​ಸನ್ಮಾನ

ಗೋವಾ ಕಲಾ ಉತ್ಸವದಲ್ಲಿ ನಟಿ/ಮಾಡೆಲ್​ ಡಾ. ಪೂಜಾ ರಮೇಶ್​ ಅವರಿಗೆ ‘ಭಾರತ ಗೌರವ ಪ್ರಶಸ್ತಿ’ ನೀಡಲಾಯಿತು. ಇದು ಅವರ ಉತ್ಸಾಹವನ್ನು ಹೆಚ್ಚಿಸಿದೆ.

ಫ್ಯಾಷನ್, ಕಿರುತೆರೆ​ ಲೋಕದ ಪ್ರತಿಭಾವಂತ ಕನ್ನಡತಿ ಡಾ. ಪೂಜಾ ರಮೇಶ್​ಗೆ ಗೋವಾದಲ್ಲಿ ​ಸನ್ಮಾನ
ಡಾ. ಪೂಜಾ ರಮೇಶ್​ಗೆ ಗೋವಾದಲ್ಲಿ ​ಸನ್ಮಾನ
Follow us
TV9 Web
| Updated By: ಮದನ್​ ಕುಮಾರ್​

Updated on: Mar 30, 2022 | 8:29 PM

ಕನ್ನಡದ ಪ್ರತಿಭೆಗಳು ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಫ್ಯಾಷನ್​, ಸಿನಿಮಾ, ಕಿರುತೆರೆಯಲ್ಲಿ ಖ್ಯಾತಿ ಪಡೆದ ಸೆಲೆಬ್ರಿಟಿಗಳು ಸಾಮಾಜಿಕ ಕಳಕಳಿ ತೋರಿಸಿದರೆ ಜನರಿಂದ ಸಿಗುವ ಗೌರವ ಹೆಚ್ಚುತ್ತದೆ. ಅಂಥ ಗೌರವಕ್ಕೆ ಪಾತ್ರರಾದವರಲ್ಲಿ ಕನ್ನಡತಿ ಡಾ. ಪೂಜಾ ರಮೇಶ್​ (Dr Pooja Ramesh) ಕೂಡ ಒಬ್ಬರು. ಅವರ ಸಾಧನೆಯನ್ನು ಗುರುತಿಸಿ ಹೊರ ರಾಜ್ಯಗಳಲ್ಲಿ ಸನ್ಮಾನ ಮಾಡಲಾಗಿದೆ. ಸಿನಿಮಾ, ಸೀರಿಯಲ್​, ಸಾಮಾಜಿಕ ಕಳಕಳಿ, ಮಾಡೆಲಿಂಗ್​ (Modelling) ಸೇರಿದಂತೆ ಹಲವು ಕ್ಷೇತ್ರದಲ್ಲಿ ಪೂಜಾ ರಮೇಶ್​ ಅವರು ತಮ್ಮನ್ನು ತೊಡಗಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಕಾರಣಾಂತರಗಳಿಂದ ಅವರು ನಟನೆಯಿಂದ ಒಂದಷ್ಟು ವರ್ಷಗಳ ಕಾಲ ಅಂತರ ಕಾಯ್ದುಕೊಂಡಿದ್ದರು. ಈಗ ಮತ್ತೆ ಕಮ್​ಬ್ಯಾಕ್​ ಮಾಡುತ್ತಿದ್ದಾರೆ. ಪೂಜಾ ರಮೇಶ್​ ಅವರ ಕಾರ್ಯಗಳನ್ನು ಗುರುತಿಸಿ ಏಷ್ಯಾ ವೇದಿಕ್​ ಕಲ್ಚರ್​ ಅಕಾಡೆಮಿಯಿಂದ ಗೌರವ ಡಾಕ್ಟರೇಟ್​ ನೀಡಲಾಗಿತ್ತು. ಈಗ ಅಖಿಲ ಗೋವಾ ಕನ್ನಡಿಗರ ಮಹಾಸಂಘ ಮತ್ತು ಸ್ನೇಹ ಯುವ ಸಾಂಸ್ಕೃತಿಕ ಸಂಘ ಸೇರಿ ಗೋವಾ (Goa) ಕಲಾ ಉತ್ಸವದಲ್ಲಿ ಡಾ. ಪೂಜಾ ರಮೇಶ್​ ಅವರಿಗೆ ‘ಭಾರತ ಗೌರವ ಪ್ರಶಸ್ತಿ’ ನೀಡಲಾಗಿದೆ. ಇದು ಅವರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ. ಮಾಡಿದ ಕೆಲಸಗಳಿಗೆ ಮನ್ನಣೆ ಸಿಕ್ಕಿರುವುದು ಅವರಿಗೆ ಖುಷಿ ನೀಡಿದೆ.

ಫ್ಯಾಷನ್​ ಡಿಸೈನರ್​ ಆಗಿ ಕೆಲಸ ಮಾಡಬೇಕು ಎಂಬುದು ಪೂಜಾ ರಮೇಶ್​ ಅವರ ಉದ್ದೇಶ ಆಗಿತ್ತು. ವಿದ್ಯಾಭ್ಯಾಸಕ್ಕಾಗಿ ಅವರು 2007ರಲ್ಲಿ ಬೆಂಗಳೂರಿಗೆ ಬಂದರು. 2008ರಲ್ಲಿ ಆ್ಯಂಕರ್​ ಆಗಿ ವಾಹಿನಿಯೊಂದರಲ್ಲಿ ಕೆಲಸ ಆರಂಭಿಸಿದರು. ಅದಾಗಿ ಕೆಲವೇ ತಿಂಗಳು ಕಳೆಯುವುದರಲ್ಲಿ ಅವರಿಗೆ ಚಿತ್ರರಂಗದಿಂದ ಅವಕಾಶಗಳು ಬರಲು ಆರಂಭಿಸಿದವು. ನಿರುದ್ಯೋಗಿ, ಪೇಪರ್ ದೋಣಿ, ಲಹರಿ, ತಾಂಡವ, ಮಹಾಕಾಳಿ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದರು.

ಮೊದಲ ಸಿನಿಮಾದಲ್ಲಿ ನಟಿಸುತ್ತಿರುವಾಗಲೇ ಪೂಜಾ ರಮೇಶ್​ ಅವರನ್ನು ಧಾರಾವಾಹಿ ಲೋಕವೂ ಕೈಬೀಸಿ ಕರೆಯಿತು. ಉದಯ ವಾಹಿನಿಯ ‘ಕಾಮಧೇನು’ ಸೀರಿಯಲ್​ನಲ್ಲಿ ಅವರು ಪ್ರಮುಖ ಪಾತ್ರ ಮಾಡಿದರು. ಎರಡು ವರ್ಷ ಸತತವಾಗಿ ಅವರು ಅದರಲ್ಲಿ ತೊಡಗಿಕೊಂಡರು. ನಂತರ ಧಾರಾವಾಹಿಗಳಲ್ಲೇ ಪೂಜಾ ರಮೇಶ್​ ಹೆಚ್ಚು ಬ್ಯುಸಿ ಆದರು. ಕಾಮಧೇನು, ಜಾನವಿ, ಸಂಭವಾಮಿ ಯುಗೇಯುಗೇ, ಗ್ರಹಣ, ಎಲ್ಲಿ ಜಾರಿತೋ ಮನವು, ಪಾಂಡು ರಂಗ ವಿಠ್ಠಲ, ಪಾರ್ವತಿ, ಎಸೆಸೆಲ್ಸಿ ನನ್ ಮಕ್ಕಳು, ಪರಮೇಶ್ವರ, ಅಶ್ವಿನಿ ನಕ್ಷತ್ರ ಮತ್ತು ತೆಲುಗಿನ 2 ಧಾರಾವಾಹಿಗಳಲ್ಲಿ ಪೂಜಾ ರಮೇಶ್​ ಅಭಿನಯಿಸಿದರು.

ಈ ಎಲ್ಲ ಕಾರ್ಯಗಳ ಜೊತೆಗೆ ಪೂಜಾ ಅವರು ಮಾಡೆಲಿಂಗ್​ನಲ್ಲಿಯೂ ಸಕ್ರಿಯರಾಗಿದ್ದರು. ಹಲವು ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡರು. 2015ರ ಬಳಿಕ ಅವರು ಬ್ರೇಕ್​ ತೆಗೆದುಕೊಂಡರು. ‘2015ರೊಳಗೆ ನನ್ನ ದೇಹದ ತೂಕ ಸ್ವಲ್ಪ ಜಾಸ್ತಿ ಆಯಿತು. ಮತ್ತೆ ನಾನು ಫಿಟ್​ ಆಗಿ ಇಂಡಸ್ಟ್ರಿಗೆ ಕಮ್​ಬ್ಯಾಕ್​ ಮಾಡಬೇಕು ಎನಿಸಿತು. 69 ಕೆಜಿ ಇಂದ 52 ಕೆಜಿಗೆ ತೂಕ ಇಳಿಸಿಕೊಂಡಿದ್ದೇನೆ. ಇಷ್ಟು ವರ್ಷ ಬ್ರೇಕ್ ತೆಗೆದುಕೊಂಡರೂ ಕೂಡ ಬಣ್ಣದ ಲೋಕ ನನ್ನನ್ನು ಮರೆತಿಲ್ಲ.   ಮತ್ತೆ ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಿಂದ ಅವಕಾಶಗಳು ಬರುತ್ತಿವೆ’ ಎಂದಿದ್ದಾರೆ ಪೂಜಾ ರಮೇಶ್​.

ಕೊವಿಡ್​ ಸಂದರ್ಭದಲ್ಲಿ ಅನೇಕ ಹಿರಿಯ ಕಲಾವಿದರಿಗೆ ಪೂಜಾ ರಮೇಶ್​ ಅವರು ಸಹಾಯ ಹಸ್ತ ಚಾಚಿದರು. ಇಂಥ ಕಾರ್ಯಕ್ಕಾಗಿ ಅವರಿಗೆ ಜನ್ಮಭೂಮಿ ಫೌಂಡೇಶನ್​ನಿಂದ ಮಹಿಳಾ ಸಾಧಕಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೊಡಗಿನ ಕಾಫಿ ತೋಟದ ಕೂಲಿ ಕಾರ್ಮಿಕರ ಮಕ್ಕಳಿಗೆ ಕೈಲಾದ ಸಹಾಯ ಮಾಡಿ, ಸಮವಸ್ತ್ರವನ್ನೂ ಪೂಜಾ ರಮೇಶ್​ ವಿತರಿಸಿದರು. ಅದಕ್ಕಾಗಿ ಅವರಿಗೆ ‘ಕಾವೇರಿ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸೌಂದರ್ಯ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ಮಿಸ್​ ಇಂಡಿಯಾ, ಬೆಸ್ಟ್​ ಬ್ಯೂಟಿಫುಲ್​ ಹೇರ್​ ಟೈಟಲ್​ ಗೆದ್ದರು.

ಇದನ್ನೂ ಓದಿ:

‘ಅವಕಾಶ ಇದ್ದಿದ್ರೆ ನಾನು ಒಂದು ಝೂ ಮಾಡ್ತಿದ್ದೆ’; ‘ಕನ್ನಡತಿ’ ನಟ ಕಿರಣ್​ ರಾಜ್​

‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್​ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ