10 ತಲೆ ಹೊತ್ತು ಬಂದ ‘ನ್ಯಾನೋ ನಾರಾಯಣಪ್ಪ’; ಹೀರೋ ಆದ ‘ಕೆಜಿಎಫ್’ ತಾತನ ಫಸ್ಟ್ ಲುಕ್ ಇಲ್ಲಿದೆ
Nano Narayanappa: ಹತ್ತು ತಲೆಯ ರಾವಣನ ರೀತಿಯಲ್ಲಿ ಈ ಸಿನಿಮಾದ ಪೋಸ್ಟರ್ ವಿನ್ಯಾಸ ಮಾಡಲಾಗಿದೆ. ನ್ಯಾನೋ ಕಾರು ಕೂಡ ಗಮನ ಸೆಳೆಯುತ್ತಿದೆ.
ಬಣ್ಣದ ಲೋಕದಲ್ಲಿ ಯಾರಿಗೆ ಯಾವಾಗ ಬೇಕಾದರೂ ಅದೃಷ್ಟ ಖುಲಾಯಿಸಬಹುದು. ಒಂದೇ ಒಂದು ಪಾತ್ರ ಹಿಟ್ ಆದರೆ ಸಾಕು, ಅದರಿಂದ ಇನ್ನಷ್ಟು ಅವಕಾಶಗಳು ಹರಿದುಬರುತ್ತವೆ. ಯಾವ ವಯಸ್ಸಿನಲ್ಲಿ ಬೇಕಾದರೂ ಮಿಂಚುವ ಚಾನ್ಸ್ ಸಿಗುತ್ತದೆ. ‘ಕೆಜಿಎಫ್: ಚಾಪ್ಟರ್ 1’ ಮತ್ತು ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಚಿತ್ರದಲ್ಲಿ ನಟಿಸಿದ ಕೃಷ್ಣ ಜಿ. ರಾವ್ ಅವರಿಗೆ ಈಗ ಅಂಥದ್ದೇ ಆಫರ್ ಸಿಕ್ಕಿದೆ. ಕೃಷ್ಣ ಜಿ. ರಾವ್ (Krishna G Rao) ಅಂದರೆ ತಕ್ಷಣಕ್ಕೆ ಗೊತ್ತಾಗದೇ ಇರಬಹುದು. ‘ನಿಮಗೆ ಒಂದು ಸಲಹೆ ಕೊಡ್ತೀನಿ.. ನೀವು ಮಾತ್ರ ಅವನಿಗೆ ಅಡ್ಡ ನಿಲ್ಲೋಕೆ ಹೋಗ್ಬೇಡಿ ಸಾರ್..’ ಎಂಬ ಡೈಲಾಗ್ ಹೊಡೆದ ತಾತ ಎಂದರೆ ತಕ್ಷಣಕ್ಕೆ ಆ ಪಾತ್ರ ಕಣ್ಣ ಮುಂದೆ ಬರುತ್ತದೆ. ಹೌದು, ಆ ಪಾತ್ರ ಮಾಡಿ ಫೇಮಸ್ ಆದವರೇ ಕೃಷ್ಣ ಜಿ. ರಾವ್. ಅವರು ಈಗ ‘ನ್ಯಾನೋ ನಾರಾಯಣಪ್ಪ’ (Nano Narayanappa) ಚಿತ್ರದಲ್ಲಿ ಹೀರೋ ಆಗಿದ್ದಾರೆ. ಆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ.
ಹತ್ತು ತಲೆಯ ರಾವಣನ ರೀತಿಯಲ್ಲಿ ಈ ಸಿನಿಮಾದ ಪೋಸ್ಟರ್ ವಿನ್ಯಾಸ ಮಾಡಲಾಗಿದೆ. ನ್ಯಾನೋ ಕಾರು ಕೂಡ ಗಮನ ಸೆಳೆಯುತ್ತಿದೆ. ಆ ಮೂಲಕ ‘ನ್ಯಾನೋ ನಾರಾಯಣಪ್ಪ’ ಚಿತ್ರದ ಕಥೆ ಏನು ಎಂಬ ಕೌತುಕ ಮೂಡಿದೆ. ‘ಕೆಮಿಸ್ಟ್ರೀ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾ ಮಾಡಿ ಸೈ ಎನಿಸಿಕೊಂಡ ನಿರ್ದೇಶಕ ಕುಮಾರ್ ಅವರು ‘ನ್ಯಾನೋ ನಾರಾಯಣಪ್ಪ’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ.
ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಅನಂತು, ಅಪೂರ್ವಾ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಕುಮಾರ್ ಅವರೇ ನಿಭಾಯಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾಗೆ ಶೂಟಿಂಗ್ ಮುಗಿದಿದೆ. ‘ಇದೊಂದು ಕಾಮಿಡಿ ಕಥಾಹಂದರದ ಎಮೋಷನಲ್ ಡ್ರಾಮಾ. ಈ ಸಿನಿಮಾದಲ್ಲಿ ತುಂಬ ಕಾಡುವಂತಹ ಕಥೆ ಇದೆ. ಮನೆ ಮಂದಿಯಲ್ಲಾ ಕುಳಿತು ನೋಡುವ ಸಿನಿಮಾ ಇದು’ ಎಂದಿದ್ದಾರೆ ಕುಮಾರ್.
ಆಗಸ್ಟ್ನಲ್ಲಿ ‘ನ್ಯಾನೋ ನಾರಾಯಣಪ್ಪ’ ಚಿತ್ರವನ್ನು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ರಾಜ ಶಿವಶಂಕರ್ ಅವರು ಛಾಯಾಗ್ರಾಹಣ ಮಾಡಿದ್ದಾರೆ. ಆಕಾಶ್ ಪರ್ವ ಸಂಗೀತ ನಿರ್ದೇಶನ ಹಾಗೂ ಸಿದ್ದು ಅವರ ಸಂಕಲನದೊಂದಿಗೆ ಈ ಸಿನಿಮಾ ಮೂಡಿಬರುತ್ತಿದೆ.
ಇದನ್ನೂ ಓದಿ: ‘ನಾವು ‘ಕೆಜಿಎಫ್’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್ ಜೋಹರ್ ಆರೋಪ
‘ಕೆಜಿಎಫ್’ ಆದ್ಮೇಲೆ 30 ಸಿನಿಮಾದಲ್ಲಿ ನಟಿಸಿದ ಕೃಷ್ಣ ರಾವ್; ‘ಮುದುಕನ ಲವ್ಸ್ಟೋರಿ’ ಚಿತ್ರದಲ್ಲಿ ಹೀರೋ ಪಾತ್ರ