ನಟಿ ಸಂಜನಾ ಗಲ್ರಾನಿ (Sanjjanaa Galrani) ಬಾಳಲ್ಲಿ ಸಾಕಷ್ಟು ಒಳ್ಳೆಯ ವಿಚಾರಗಳು ನಡೆಯುತ್ತಿವೆ. ಇತ್ತೀಚೆಗೆ ಅವರು ಗಂಡು ಮಗುವಿಗೆ ತಾಯಿ ಆದರು. ಮಗುವಿನ ಫೋಟೋ ಹಾಗೂ ವಿಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಳ್ಳುತ್ತಿರುತ್ತಾರೆ. ಈಗ ಸಂಜನಾ ಗಲ್ರಾನಿ ಅವರು ಹೊಸ ರೀಲ್ಸ್ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಮಗುವನ್ನು ಎತ್ತಾಡಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ತಾಯಿ ಹಾಗೂ ಮಗುವಿನ ಆರೋಗ್ಯವನ್ನು ಫ್ಯಾನ್ಸ್ ವಿಚಾರಿಸುತ್ತಿದ್ದಾರೆ.
ಸಂಜನಾ ಗಲ್ರಾನಿ ಅವರು ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿದ್ದಾರೆ. ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಈಗ ಮಗು ಜನಿಸಿದ ನಂತರದಲ್ಲಿ ಅವರು ನಟನೆಯಿಂದ ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಸಂಪೂರ್ಣ ಸಮಯವನ್ನು ಅವರು ಮಗುವಿನ ಆರೈಕೆಗಾಗಿ ಮುಡಿಪಿಟ್ಟಿದ್ದಾರೆ. ಮಗುವಿನ ಜತೆ ಸಮಯ ಕಳೆಯುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಿದ್ದಾರೆ.
‘ತಾಯ್ತನವನ್ನು ಅಳವಡಿಸಿಕೊಳ್ಳುವುದು ನಿಜಕ್ಕೂ ಒಂದು ಸಂತಸದ ಪ್ರಯಾಣ. ನಟಿಯರ ತಲೆಯಲ್ಲಿ ಹಲವು ಸುಳ್ಳುಗಳನ್ನು ತುಂಬಲಾಗುತ್ತದೆ. ತಾಯಿ ಆದರೆ ಕೆಲಸ ಇರುವುದಿಲ್ಲ, ನಿಮ್ಮ ದೇಹದ ತೂಕ ಹೆಚ್ಚುತ್ತದೆ, ಗ್ಲಾಮರ್ ಹೋಗುತ್ತದೆ, ನೀವು ಎಲ್ಲರಿಂದಲೂ ನಿರ್ಲಕ್ಷಿಸಲ್ಪಡುತ್ತೀರಿ, ಕೊನೆಗೆ ನಿಮ್ಮ ವೃತ್ತಿಜೀವನ ಮುಗಿಯುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ನನಗೆ ಆ ರೀತಿ ಇಲ್ಲ. ನಾನು ಹಿಂದೆಂದಿಗಿಂತಲೂ ಹೆಚ್ಚು ಬ್ಯುಸಿ ಆಗಿದ್ದೇನೆ’ ಎಂದಿದ್ದಾರೆ ಸಂಜನಾ.
ಇದನ್ನೂ ಓದಿ: ಸಿಸೇರಿಯನ್ ಹೆರಿಗೆಯ ವಿಡಿಯೋ ಹಂಚಿಕೊಂಡ ನಟಿ ಸಂಜನಾ ಗಲ್ರಾನಿ
ಅನೇಕ ಸೆಲೆಬ್ರಿಟಿಗಳು ಮಗು ಹುಟ್ಟುತ್ತಿದ್ದಂತೆ ಮಕ್ಕಳ ಹೆಸರಲ್ಲಿ ಒಂದು ಇನ್ಸ್ಟಾಗ್ರಾಮ್ ಖಾತೆ ತೆಗೆಯುತ್ತಾರೆ. ಅನೇಕ ಸೆಲೆಬ್ರಿಟಿಗಳು ಈ ರೀತಿ ಮಾಡಿದ್ದಿದೆ. ಈಗ ಸಂಜನಾ ಕೂಡ ತಮ್ಮ ಮಗನ ಹೆಸರಲ್ಲಿ ಒಂದು ಇನ್ಸ್ಟಾಗ್ರಾಮ್ ಖಾತೆ ಆರಂಭಿಸಿದ್ದಾರೆ. ಸಂಜನಾ ಮಗುವಿಗೆ ಅಲರಿಕ್ ಎಂದು ಹೆಸರು ಇಡಲಾಗಿದೆ ಎನ್ನಲಾಗಿದೆ. ಈ ಕಾರಣಕ್ಕೆ ಇನ್ಸ್ಟಾಗ್ರಾಮ್ ಖಾತೆಗೆ ‘ಪ್ರಿನ್ಸ್ ಅಲರಿಕ್’ ಎಂದು ಹೆಸರು ಇಡಲಾಗಿದೆ. ಈ ಖಾತೆಯನ್ನು ಎರಡು ಸಾವಿರಕ್ಕೂ ಅಧಿಕ ಮಂದಿ ಹಿಂಬಾಲಿಸುತ್ತಿದ್ದಾರೆ. ಈ ಖಾತೆಯನ್ನು ಸಂಜನಾ ಅವರೇ ನೋಡಿಕೊಳ್ಳುತ್ತಿದ್ದಾರೆ.