ಹುಬ್ಬಳ್ಳಿ ದೇವಾಲಯಕ್ಕೆ ಭೇಟಿ ನೀಡಿದ ಬಾಲಿವುಡ್ ಬೆಡಗಿ ಸಾರಾ ಅಲಿ ಖಾನ್
Sara Ali Khan: ಬಾಲಿವುಡ್ ನಟ-ನಟಿಯರು ಇತ್ತೀಚೆಗೆ ಕರ್ನಾಟಕದ ದೇವಾಲಯಗಳಿಗೆ ಸಾಲು-ಸಾಲಾಗಿ ಬರುತ್ತಿದ್ದಾರೆ. ಬಂದವರೆಲ್ಲ ಬಹುತೇಕ ಕರ್ನಾಟಕದ ಕರಾವಳಿ ಭಾಗದ ದೇವಾಲಯಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಆದರೆ ಇದೀಗ ಬಾಲಿವುಡ್ನ ಯುವ ನಟಿ ಸಾರಾ ಅಲಿ ಖಾನ್, ಹುಬ್ಬಳ್ಳಿಯ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಇತ್ತೀಚೆಗೆ ಬಾಲಿವುಡ್ (Bollywood) ನಟ-ನಟಿಯರು ಕರ್ನಾಟಕದ ದೇವಾಲಯಗಳನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ, ನಟಿ ಕತ್ರಿನಾ ಕೈಫ್ (Katrina Kaif), ನೆರೆಯ ರಾಜ್ಯದ ಜೂ ಎನ್ಟಿಆರ್ (Jr NTR) ಇನ್ನೂ ಕೆಲವು ಪ್ರಮುಖ ನಟ-ನಟಿಯರು ಕರ್ನಾಟಕದ ಕರಾವಳಿ ಭಾಗದ ದೇವಾಲಯಗಳಿಗೆ ಇತ್ತೀಚೆಗೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿ ಆಗಿದ್ದರು. ಇದೀಗ ಬಾಲಿವುಡ್ನ ಇನ್ನೊಬ್ಬ ಯುವಟಿಯೊಬ್ಬರು ಕರ್ನಾಟಕದ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿದ್ದಾರೆ, ಇತರರಂತೆ ಕರಾವಳಿಯ ದೇವಾಲಯದ ಬದಲಿಗೆ ಹುಬ್ಬಳ್ಳಿಯ ಪ್ರಮುಖ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಬಾಲಿವುಡ್ನ ಸ್ಟಾರ್ ಯುವನಟಿ ಸಾರಾ ಅಲಿ ಖಾನ್ ಹುಬ್ಬಳ್ಳಿಯ ಉಣಕಲ್ನ ಚಂದ್ರಮೌಳೀಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸರಳವಾಗಿ ಸೆಲ್ವಾರ್ ಕಮೀಜ್ ತೊಟ್ಟು ದೇವಾಲಯಕ್ಕೆ ಬಂದಿದ್ದ ಸಾರಾ ಅಲಿ ಖಾನ್, ದೇವಾಲಯದ ಆವರಣದಲ್ಲಿ ಕೆಲ ಚಿತ್ರಗಳನ್ನು ತೆಗೆಸಿಕೊಂಡಿದ್ದು, ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಚಂದ್ರಮೌಳೇಶ್ವರ ದೇವಾಲಯ, ಉಣ್ಕಲ್ ಎಂದು ಲೊಕೇಶನ್ ಅನ್ನು ಪಿನ್ ಸಹ ಮಾಡಿದ್ದಾರೆ.
ನಟಿ ಸಾರಾ ಅಲಿ ಖಾನ್ ತಂದೆ ಸೈಫ್ ಅಲಿ ಖಾನ್ ಕೆಲ ವಾರಗಳ ಹಿಂದಷ್ಟೆ ಅಗಂತುಕನೊಬ್ಬನಿಂದ ಚಾಕು ಇರಿತಕ್ಕೆ ಒಳಗಾಗಿದ್ದರು. ಆ ಸಮಯದಲ್ಲಿ ಹೊತ್ತಿದ್ದ ಹರಕೆ ತೀರಿಸಲು ಸಾರಾ ಅಲಿ ಖಾನ್ ಇಷ್ಟು ದೂರ ಚಂದ್ರಮೌಳೇಶ್ವರ ದೇವಾಲಯಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಖಾತ್ರಿ ಇಲ್ಲ. ಸಾರಾ ಅಲಿ ಖಾನ್, ಹುಬ್ಬಳ್ಳಿಯ ದೇವಾಲಯಕ್ಕೆ ಬಂದ ಚಿತ್ರಗಳನ್ನು ಅವರ ಅಭಿಮಾನಿಗಳು, ಸ್ಥಳೀಯ ನೆಟ್ಟಿಗರು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಅವಕಾಶಗಳು ಕಡಿಮೆಯಾದ ಸಾರಾ ಅಲಿ ಖಾನ್ರ ಕೈ ಹಿಡಿದ ಗಾಡ್ ಫಾದರ್
ಸಾರಾ ಅಲಿ ಖಾನ್ ಭೇಟಿ ನೀಡಿರುವ ಚಂದ್ರಮೌಳೀಶ್ವರ ದೇವಾಲಯ ಸುಮಾರು 900 ವರ್ಷಗಳಷ್ಟು ಪುರಾತನ ದೇವಾಲಯ ಎನ್ನಲಾಗುತ್ತದೆ. ಇದು ಬಾದಾಮಿ, ಚಾಲುಕ್ಯರ ಕಾಲದ ದೇವಾಲಯವಾಗಿದೆ. ಈ ದೇವಾಲಯದ ಚತುರ್ಮುಖ ಲಿಂಗ ಪ್ರಸಿದ್ಧವಾಗಿದೆ. ದೇವಾಲಯದ ಸುತ್ತಲೂ ಸುಂದರವಾದ ಕೆತ್ತನೆಗಳಿವೆ. ಈ ದೇವಾಲಯದ ಮಧ್ಯ ಭಾಗದಲ್ಲಿ ಗರ್ಭ ಗುಡಿ ಇದ್ದು, ಗುಡಿಗೆ ನಾಲ್ಕು ಬಾಗಿಲುಗಳು ಇವೆ.ರಾಷ್ಟ್ರೀಯ ಪ್ರಾಮುಖ್ಯ ಹೊಂದಿರುವ ದೇವಾಲಯ ಆಗಿದೆ.
ಸಾರಾ ಅಲಿ ಖಾನ್, ಮುಸ್ಲಿಂ ತಂದೆ, ಹಿಂದೂ ತಾಯಿಯನ್ನು ಹೊಂದಿದ್ದು ಎರಡೂ ಧರ್ಮವನ್ನು ಪಾಲಿಸುತ್ತಾರೆ. ಹಿಂದೂ ಧರ್ಮ ಹಾಗೂ ದೇವಾಲಯಗಳ ಬಗ್ಗೆ ವಿಶೇಷ ಗೌರವ ಮತ್ತು ನಂಬಿಕೆಯನ್ನು ಸಾರಾ ಅಲಿ ಖಾನ್ ಹೊಂದಿದ್ದು, ನಿಯಮಿತವಾಗಿ ಅವರು ದೇಶದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಶಿವ ಭಕ್ತೆಯಾಗಿರುವ ಸಾರಾ ಅಲಿ ಖಾನ್, ಕೇದಾರ್ನಾಥ್, ಕಾಶಿ ಸೇರಿದಂತೆ ಉತ್ತರ ಭಾರತದ ಹಲವು ಪ್ರಮುಖ ಶಿವ ದೇವಾಲಯಗಳ ದರ್ಶನ ಮಾಡಿದ್ದಾರೆ. ಅವುಗಳ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ಸಾರಾ ಅಲಿ ಖಾನ್ ಪ್ರಸ್ತುತ ಬಾಲಿವುಡ್ನ ಬ್ಯುಸಿ ಯುವನಟಿ ಆಗಿದ್ದು, ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಸಾರಾ ಅಲಿ ಖಾನ್ ಪ್ರಸ್ತುತ ‘ಮೆಟ್ರೊ ಇನ್ ದಿನೋ’ ಹಾಗೂ ಇನ್ನೂ ಹೆಸರಿಡದ ಒಂದು ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಾರಾ ಅಲಿ ಖಾನ್ ಶೀಘ್ರವೇ ದಕ್ಷಿಣ ಭಾರತದ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಅದಿನ್ನೂ ಖಾತ್ರಿ ಆಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ