
ಚಿತ್ರರಂಗದ ಅನೇಕರು ತಮಗೆ ಚಿತ್ರರಂಗದಲ್ಲಿ ಆದ ಕರಾಳ ಅನುಭವಗಳನ್ನು ಬಿಚ್ಚಿಡುತ್ತಾರೆ. ಈ ರೀತಿ ಕೆಟ್ಟ ಅನುಭವ ಹೊಂದಿದವರಲ್ಲಿ ಸುರ್ವೀನ್ ಛಾವ್ಲಾ ಕೂಡ ಒಬ್ಬರು. ಶಿವರಾಜ್ಕುಮಾರ್ (Shivarajkumar) ನಟನೆಯ ‘ಪರಮೇಶ ಪಾನ್ವಾಲಾ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸುರ್ವೀನ್ ಆ ಬಳಿಕ ಹಿಂದಿ, ಪಂಜಾಬಿ, ತಮಿಳು ರಂಗದಲ್ಲಿ ಮಿಂಚಿದರು. ಅವರು ಚಿತ್ರರಂಗದಲ್ಲಿ ಅನುಭವಿಸಿದ ಕೆಟ್ಟ ಅನುಭವದ ಬಗ್ಗೆ ಹೇಳಿದ್ದಾರೆ. ಆದರೆ, ಅದು ಯಾವ ಚಿತ್ರರಂಗ ಎಂಬುದನ್ನು ವಿವರಿಸಿಲ್ಲ. ಅವರು ಮುಂಬೈ ಎಂದು ಉಲ್ಲೇಖ ಮಾಡಿದ್ದರಿಂದ ಬಾಲಿವುಡ್ ನಿರ್ದೇಶಕನ ಕೆಲಸ ಇದು ಎಂದು ಊಹಿಸಲಾಗಿದೆ.
‘ಮುಂಬೈನ ವೀರ ದೇಸಾಯಿ ರಸ್ತೆಯಲ್ಲಿ ನಡೆದ ಘಟನೆಯ ಬಗ್ಗೆ ಮಾತ್ರ ನಾನು ನಿಮಗೆ ಹೇಳುತ್ತೇನೆ. ಆಫೀಸ್ ಕ್ಯಾಬಿನ್‌ನಲ್ಲಿ ನಡೆದ ಸಭೆಯ ನಂತರ ನಿರ್ದೇಶಕರು ನನ್ನನ್ನು ಗೇಟ್‌ನಲ್ಲಿ ಬಿಡಲು ಬಂದರು. ಈ ಘಟನೆ ನಡೆದಿದ್ದು ನನ್ನ ಮದುವೆಯ ನಂತರ. ವಿಚಿತ್ರವೆಂದರೆ ನಾವು ಸಭೆಯಲ್ಲಿ ನನ್ನ ಮದುವೆಯ ಬಗ್ಗೆಯೂ ಮಾತನಾಡಿದ್ದೆವು’ ಎಂದು ಸುರ್ವೀನ್ ಹೇಳಿದ್ದಾರೆ.
‘ಮದುವೆಯ ನಂತರ ನನ್ನ ಜೀವನ ಹೇಗೆ ನಡೆಯುತ್ತಿದೆ, ನನ್ನ ಪತಿ ಏನು ಮಾಡುತ್ತಿದ್ದಾರೆ ಮುಂತಾದ ಪ್ರಶ್ನೆಗಳನ್ನು ಅವರು ನನಗೆ ಕೇಳಿದರು. ಸಭೆಯ ನಂತರ, ಅವರು ನನ್ನನ್ನು ಗೇಟ್‌ನಲ್ಲಿ ಬಿಡಲು ಅವರು ಬಂದರು. ಆ ಕ್ಷಣದಲ್ಲಿ ಅವರು ನನ್ನನ್ನು ಚುಂಬಿಸಲು ಮುಂದಕ್ಕೆ ಬಾಗಿದರು. ಬಹುತೇಕ ಅವರು ಚುಂಬಿಸಿಯೇ ಬಿಟ್ಟಿದ್ದರು. ನಾನು ಆ ನಿರ್ದೇಶಕನ ಹಿಂದಕ್ಕೆ ತಳ್ಳಿದೆ. ನನಗೆ ಆಘಾತವಾಯಿತು. ನೀವು ಏನು ಮಾಡುತ್ತಿದ್ದೀರಿ ಎಂದು ನಾನು ಅವರನ್ನು ಕೇಳಿದೆ ಮತ್ತು ಅಲ್ಲಿಂದ ಹೊರಟೆ’ ಎಂದು ಸುರ್ವೀನ್ ಹೇಳಿದ್ದಾರೆ.
ಈ ಹಿಂದಿನ ಸಂದರ್ಶನವೊಂದರಲ್ಲಿ ಸುರ್ವೀನ್ ಅವರು ದಕ್ಷಿಣ ಸಿನಿಮಾ ರಂಗದಲ್ಲಿ ತಮಗಾದ ಅನುಭವದ ಬಗ್ಗೆ ಮಾತನಾಡಿದ್ದರು. ಒಬ್ಬ ನಿರ್ದೇಶಕರು ಅವಳೊಂದಿಗೆ ರಾತ್ರಿ ಕಳೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದರಂತೆ. ಆ ನಿರ್ದೇಶಕನಿಗೆ ಹಿಂದಿ ಅಥವಾ ಇಂಗ್ಲಿಷ್ ಸರಿಯಾಗಿ ಬರದ ಕಾರಣ, ಅವರು ಮೂರನೇ ವ್ಯಕ್ತಿಯ ಮೂಲಕ ಸುರ್ವೀನ್‌ಗೆ ಈ ಆಶಯವನ್ನು ತಿಳಿಸಿದ್ದರು.
ಇದನ್ನೂ ಓದಿ: ಸೌತ್ ಬಳಿಕ ಬಾಲಿವುಡ್ನಲ್ಲೂ ಶ್ರೀಲೀಲಾಗೆ ಸಿಗುತ್ತಿದೆ ಸ್ಟಾರ್ ನಟಿ ಪಟ್ಟ
ಸುರ್ವೀನ್ 2003 ರಲ್ಲಿ ‘ಕಹಿನ್ ತೋ ಹೋಗಾ’ ಧಾರಾವಾಹಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಇದಲ್ಲದೆ, ಅವರು ‘ಕಸೌತಿ ಜಿಂದಗಿ ಕಿ’, ‘ಕಾಜಲ್’ ಮತ್ತು ’24’ ನಂತಹ ಧಾರಾವಾಹಿಗಳಲ್ಲಿಯೂ ಪಾತ್ರಗಳನ್ನು ನಿರ್ವಹಿಸಿದ್ದಾರೆ. 2008ರ ಬಳಿಕ ಸಿನಿಮಾದಲ್ಲಿ ಬ್ಯುಸಿ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.