Shruti Haasan: ಶೃತಿ ಹಾಸನ್ ಕೇವಲ ಅಭಿನೇತ್ರಿಯಲ್ಲ, ಮತ್ತೆ? ಅಪರೂಪದ ಪ್ರತಿಭೆ ಕುರಿತ ಅಚ್ಚರಿಯ ವಿಚಾರ ಇಲ್ಲಿದೆ
Kamal Haasan: ಬಹುಭಾಷಾ ನಟಿ ಶೃತಿ ಹಾಸನ್ ಅಚ್ಚರಿಯ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಇದರಿಂದ ಅವರ ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ. ಅಲ್ಲದೇ ನಟಿ ತಮ್ಮ ತಂದೆಯ ಆರೋಗ್ಯದ ಕುರಿತೂ ಮಾತನಾಡಿದ್ದಾರೆ.
ಬಹುಭಾಷಾ ನಟಿ ಶೃತಿ ಹಾಸನ್ (Shruti Haasan) ಕಳೆದ ಎರಡು ವರ್ಷಗಳಿಂದ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್- ಪ್ರಭಾಸ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಸಲಾರ್’ಗೂ ಶೃತಿ ನಾಯಕಿ. ಚಿತ್ರೀಕರಣದ ಸಂದರ್ಭದಲ್ಲಿ ಸೆಟ್ನಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಿದ್ದರು. ಇದೀಗ ನಟಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ಇದುವರೆಗೆ ಅವರ ಬಗ್ಗೆ ಯಾರಿಗೂ ತಿಳಿಯದ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೇ ಕೊರೊನಾ, ತಂದೆ ಕಮಲ್ ಹಾಸನ್ ಆರೋಗ್ಯ ಮೊದಲಾದವುಗಳ ಕುರಿತೂ ಅವರು ಮಾತನಾಡಿದ್ದಾರೆ. ಪ್ರಸ್ತುತ ಚಿತ್ರೀಕರಣದ ಸೆಟ್ಗಳಲ್ಲಿ ಒಮಿಕ್ರಾನ್ ಕುರಿತು ಬಹಳ ಎಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ದೇಶಾದ್ಯಂತ ವ್ಯಾಕ್ಸಿನೇಷನ್ ವೇಗವಾಗಿ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಸೋಂಕಿನ ಪರಿಣಾಮ ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ, ಕೊರೊನಾದಿಂದ ಅವರ ಸ್ನೇಹಿತರೊಬ್ಬರು ಸಾವಿಗೀಡಾದ ಘಟನೆಯನ್ನೂ ಅವರು ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಅಮೇರಿಕಾಕ್ಕೆ ಭೇಟಿ ನೀಡಿ ಮರಳಿದ್ದ ಶೃತಿ ತಂದೆ ಕಮಲ್ ಹಾಸನ್ಗೆ ಕೊರೊನಾ ಆವರಿಸಿತ್ತು. ಕೆಲವು ಸಮಯಗಳವರೆಗೆ ಅವರು ಆಸ್ಪತ್ರೆಯಲ್ಲಿದ್ದರು. ಇದರಿಂದ ಅವರ ಅಭಿಮಾನಿಗಳು ಚಿಂತಿತರಾಗಿದ್ದರು. ಕಮಲ್ಗೆ ಕೊರೊನಾ ಬಂದಿದ್ದರೂ ಅದು ಸೌಮ್ಯ ಲಕ್ಷಣಗಳನ್ನು ಹೊಂದಿತ್ತು. ಕೆಲವೇ ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಪ್ರಸ್ತುತ ಕಮಲ್ ಆರೋಗ್ಯದ ಕುರಿತು ಮಾತನಾಡಿದ ಶೃತಿ ಹಾಸನ್, ತಂದೆ ಈಗ ಆರಾಮವಾಗಿದ್ದಾರೆ ಎಂದಿದ್ದಾರೆ.
‘‘ತಂದೆಯವರು ಬಹಳ ಎಚ್ಚರಿಕಾ ಕ್ರಮ ಕೈಗೊಂಡಿದ್ದರೂ ಸೋಂಕು ಆವರಿಸಿತು. ಇದೀಗ ಅವರು 100 ಪ್ರತಿಶತ ಚೇತರಿಸಿಕೊಂಡಿದ್ದು, ಚಿತ್ರೀಕರಣಕ್ಕೆ ಮರಳಿದ್ದಾರೆ’’ ಎಂದು ಶೃತಿ ನುಡಿದಿದ್ದಾರೆ. ತಂದೆಯವರ ಚೇತರಿಕೆಗೆ ಕಾರಣರಾದ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಶೃತಿ ಧನ್ಯವಾದ ಸಲ್ಲಿಸಿದ್ದಾರೆ.
ತಮ್ಮ ಕುರಿತು ಅಚ್ಚರಿಯ ವಿಚಾರವೊಂದನ್ನು ಹೇಳಿಕೊಂಡ ಶೃತಿ: ಚಿತ್ರೀಕರಣದಲ್ಲಿ ಇಷ್ಟೆಲ್ಲಾ ಬ್ಯುಸಿಯಿದ್ದರೂ ಶೃತಿ ತಮ್ಮ ಆಸಕ್ತಿಯ ವಿಚಾರಗಳಿಗೆ ಸದಾ ಸಮಯ ಮೀಸಲಿಟ್ಟಿದ್ದಾರೆ. ಶೃತಿ ಹಾಸನ್ ಕೇವಲ ಅಭಿನೇತ್ರಿಯಲ್ಲ, ಕವಯಿತ್ರಿಯೂ ಹೌದೆಂಬ ವಿಚಾರ ಬಹಳಷ್ಟು ಜನರಿಗೆ ತಿಳಿದಿಲ್ಲ. ಅಲ್ಲದೇ ಈ ಕುರಿತು ಮತ್ತೊಂದು ಸರ್ಪ್ರೈಸ್ ನೀಡಿರುವ ಅವರು, ಸದ್ಯದಲ್ಲೇ ಅವರು ಬರೆದ ಕವನ ಸಂಕಲನವನ್ನು ಬಿಡುಗಡೆ ಮಾಡುತ್ತಾರಂತೆ. ಇದಕ್ಕೆಲ್ಲಾ ತಯಾರಿ ಆಗುತ್ತಿದೆ. ಬರೆದು, ಸಂಕಲನ ಮಾಡಿದ ಪುಸ್ತಕ ಸದ್ಯದಲ್ಲೇ ಓದುಗರ ಕೈ ಸೇರಲಿದೆ ಎಂದು ಅವರು ಹೇಳಿದ್ದಾರೆ.
ಮೊದಲೆಲ್ಲಾ ಶೃತಿ ಬರೆದ ಕವನಗಳನ್ನು ಸ್ನೇಹಿತರು, ಕುಟುಂಬದವರೊಂದಿಗೆ ಮಾತ್ರ ಹಂಚಿಕೊಳ್ಳುತ್ತಿದ್ದರಂತೆ. ಇದೀಗ ಕವಿತೆಗಳ ಸಂಕಲನ ತಯಾರಾಗಿದ್ದು, ಎಲ್ಲರೊಂದಿಗೂ ಹಂಚಿಕೊಳ್ಳುವ ಸಮಯ ಬಂದಿದೆ ಎಂದು ಶೃತಿ ನುಡಿದಿದ್ದಾರೆ. ತಮ್ಮ ಕುರಿತು ಮತ್ತಷ್ಟು ಅಚ್ಚರಿಯ ವಿಚಾರ ತೆರೆದಿಟ್ಟಿರುವ ಶೃತಿ, 13ನೇ ವಯಸ್ಸಿನಿಂದಲೇ ಲೇಖನಿ ಹಿಡಿದು ಕವನ ಬರೆಯಲು ಪ್ರಾರಂಭಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಬರವಣಿಗೆಯ ಹವ್ಯಾಸದಿಂದ ತಮ್ಮೊಳಗೆ ಸಂವಹನ ನಡೆಸಲು ಹಾಗೂ ಬೇರೆಯವರೊಮದಿಗೆ ಸಾಮಾನ್ಯ ಎಳೆಯನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಕಾವ್ಯ ತಮಗೆ ಯಾವಾಗಲೂ ಪ್ರೇರಕ ಶಕ್ತಿ ಎಂದು ಶೃತಿ ಹೇಳಿದ್ದಾರೆ.
ಸಾಹಿತ್ಯ ರಚನೆ, ಬರವಣಿಗೆ ಎನ್ನುವುದನ್ನು ತಾನು ರೂಡಿಸಿಕೊಳ್ಳಬೇಕಾಗಿರಲಿಲ್ಲ. ಅದು ತಮ್ಮೊಳಗೇ ಸಹಜವಾಗಿ ಬಂದಿತ್ತು ಎಂದು ಶೃತಿ ಹೇಳಿಕೊಂಡಿದ್ದಾರೆ. ಅಲ್ಲದೇ ಅವರಿಗೆ ಮೊದಲ ಬಾರಿಗೆ ಬರೆಯಲು ಪ್ರೇರಣೆ ನೀಡಿದ್ದು, ಅವರ ಸಂಗೀತ ಶಾಲೆಯ ಗುರುಗಳಂತೆ. ಅಲ್ಲದೇ ಪದ್ಯಗಳನ್ನು, ಸಾಹಿತ್ಯವನ್ನು ಓದೋದರಲ್ಲಿ ತಮಗೆ ಬಹಳ ಆಸಕ್ತಿ ಎಂದೂ ಅವರು ಹೇಳಿಕೊಂಡಿದ್ದಾರೆ. ಇದಲ್ಲದೇ ನಟಿಗೆ ಹಿಪ್ಹಾಪ್ ಹಾಗೂ rap ಹಾಡುಗಳು ಬಹಳ ಇಷ್ಟವಂತೆ. ಎಷ್ಟು ಚಂದದ ಸಾಹಿತ್ಯವಿರುತ್ತದೆ ಅದರಲ್ಲಿ ಎಂದು ಅವರು ಬೆರಗಿನಿಂದ ಹೇಳಿ ಮಾತು ಮುಕ್ತಾಯ ಮಾಡಿದ್ದಾರೆ.
ಅದೇನೇ ಇರಲಿ, ಅಭಿಮಾನಿಗಳು ನೆಚ್ಚಿನ ನಟಿಯ ಹೊಸ ಪ್ರತಿಭೆ ತಿಳಿದು ಖುಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಿದ್ದು, ಪುಸ್ತಕಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟಿ ತಮನ್ನಾ ಕೂಡ ಬರವಣಿಗೆ ಕ್ಷೇತ್ರಕ್ಕೆ ಕಾಲಿಟ್ಟಿದ್ದನ್ನು ಸ್ಮರಿಸಬಹುದು. ಪ್ರಸ್ತುತ ಶೃತಿ ಹಾಸನ್ 13ನೇ ವಯಸ್ಸಿನಿಂದ ಪ್ರಾರಂಭಿಸಿದ್ದ ನೆಚ್ಚಿನ ಹವ್ಯಾಸವನ್ನು ಓದುಗರ ಕೈಗಿಡಲು ಇದೀಗ ಮನಸ್ಸುಮಾಡಿದ್ದಾರೆ.
ಇದನ್ನೂ ಓದಿ:
Relationship Tips: ನಿಮ್ಮ ಸಂಗಾತಿಯೊಂದಿಗೆ ಆಗಾಗ ಮನಸ್ತಾಪವಾಗುತ್ತಿದೆಯೇ? ಇಲ್ಲಿದೆ ಅದಕ್ಕೆ ಪರಿಹಾರ
Published On - 8:44 am, Thu, 23 December 21