ಸಿಂಗೀತಂ ಶ್ರೀನಿವಾಸ ರಾವ್ ನಿಧನ: ಶ್ರದ್ಧಾಂಜಲಿ ಅರ್ಪಿಸಿದ ಶಿವಣ್ಣ, ಕಮಲ್ ಹಾಸನ್

94ನೇ ವಯಸ್ಸಿನಲ್ಲಿ ಸಿಂಗೀತಂ ಶ್ರೀನಿವಾಸ ರಾವ್ ನಿಧನರಾಗಿದ್ದಾರೆ. ಶಿವರಾಜ್​ಕುಮಾರ್ ನಟನೆಯ ಮೊದಲ ಚಿತ್ರವಾದ ‘ಆನಂದ್’ ಸಿನಿಮಾಗೆ ಸಿಂಗೀತಂ ಶ್ರೀನಿವಾಸ ರಾವ್ ಅವರು ನಿರ್ದೇಶನ ಮಾಡಿದ್ದರು. ಅವರ ನಿಧನಕ್ಕೆ ಶಿವಣ್ಣ ಸಂತಾಪ ಸೂಚಿಸಿದ್ದಾರೆ. ಕಮಲ್ ಹಾಸನ್ ಅವರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಸಿಂಗೀತಂ ಶ್ರೀನಿವಾಸ ರಾವ್ ನಿಧನ: ಶ್ರದ್ಧಾಂಜಲಿ ಅರ್ಪಿಸಿದ ಶಿವಣ್ಣ, ಕಮಲ್ ಹಾಸನ್
Kamal Haasan, Singeetham Srinivasa Rao, Shiva Rajkumar

Updated on: Oct 04, 2026 | 12:42 PM

ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರ ನಿಧನಕ್ಕೆ ನಟರಾದ ಶಿವರಾಜ್​ಕುಮಾರ್, ಕಮಲ್ ಹಾಸನ್, ಜೂನಿಯರ್ ಎನ್‌ಟಿಆರ್, ನಿರ್ದೇಶಕ ಎಸ್.ಎಸ್. ರಾಜಮೌಳಿ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದ ಹಲವು ಪ್ರಮುಖ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಸಿಂಗೀತಂ ಶ್ರೀನಿವಾಸ ರಾವ್ ನೀಡಿದ ಕೊಡುಗೆಯನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಶಿವರಾಜ್​ಕುಮಾರ್ ನಟಿಸಿದ ಮೊದಲ ಸಿನಿಮಾ ‘ಆನಂದ್’ ಮೂಡಿಬಂದಿದ್ದು ಸಿಂಗೀತಂ ಶ್ರೀನಿವಾಸ ರಾವ್ ಅವರ ನಿರ್ದೇಶನದಲ್ಲಿ. ಆ ದಿನಗಳನ್ನು ಶಿವಣ್ಣ ಸ್ಮರಿಸಿಕೊಂಡಿದ್ದಾರೆ.

‘ಸಿಂಗೀತಂ ಶ್ರೀನಿವಾಸ ರಾವ್ ಸರ್, ‘ಆನಂದ್’ ಚಿತ್ರದ ಮೂಲಕ ನನಗೆ ಚಿತ್ರರಂಗದಲ್ಲಿ ಮೊದಲ ಅವಕಾಶ ನೀಡಿದವರು ನೀವು. ಚಿತ್ರರಂಗದಲ್ಲಿ ನನ್ನ ಈ 40 ವರ್ಷಗಳ ಪಯಣಕ್ಕೆ ನೀವೇ ಬುನಾದಿ. 94ನೇ ವಯಸ್ಸಿನಲ್ಲೂ ಸಿನಿಮಾ ನಿರ್ದೇಶಿಸುವ ಮೂಲಕ ನೀವು ಇಡೀ ಜಗತ್ತಿಗೇ ಸ್ಫೂರ್ತಿಯಾಗಿದ್ದೀರಿ. ‘ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ’ ಎಂಬುದಕ್ಕೆ ನೀವೇ ಅತ್ಯುತ್ತಮ ಉದಾಹರಣೆ’ ಎಂದು ಶಿವರಾಜ್​ಕುಮಾರ್ ಅವರು ಹೇಳಿದ್ದಾರೆ.

‘ನೀವು ಕಲೆಯ ಒಂದು ಭಾಗವಲ್ಲ, ನೀವೇ ಒಂದು ‘ಕಲೆ’. ‘ಸರ್ವೈವರ್’ ಕುರಿತು ನೀವು ಹೇಳಿದ ಕೊನೆಯ ಮಾತುಗಳು, ನಾವಿಬ್ಬರೂ ನಡೆಸಿದ ಅತ್ಯುತ್ತಮ ಸಂಭಾಷಣೆಗಳಲ್ಲಿ ಒಂದಾಗಿತ್ತು. ಅದನ್ನು ನಿಮಗಿಂತ ಚೆನ್ನಾಗಿ ಹೇಳಲು ಬೇರಾರಿಗೂ ಸಾಧ್ಯವಿಲ್ಲ. 94 ವರ್ಷಗಳ ಕಾಲ ಸಿನಿಮಾವನ್ನೇ ಉಸಿರಾಡುತ್ತಾ, ಕೊನೆಯ ಉಸಿರಿನವರೆಗೂ ಅದಕ್ಕಾಗಿ ಎಲ್ಲವನ್ನೂ ಧಾರೆಯೆರೆದಿದ್ದೀರಿ. ಮತ್ತೆ ಮರಳಿ ಬನ್ನಿ ಸರ್. ನೀವು ಎಂದಿಗೂ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕರಾಗಿರುತ್ತೀರಿ’ ಎಂದು ಶಿವಣ್ಣ ಪೋಸ್ಟ್ ಮಾಡಿದ್ದಾರೆ.

ಕಮಲ್ ಹಾಸನ್ ಅವರು ಸಿಂಗೀತಂ ಶ್ರೀನಿವಾಸ ರಾವ್ ಜೊತೆ ಆಪ್ತ ಒಡನಾಟ ಹೊಂದಿದ್ದರು. ತಮ್ಮ ನೆಚ್ಚಿನ ನಿರ್ದೇಶಕನ ನಿಧನಕ್ಕೆ ಕಮಲ್ ಹಾಸನ್ ಕಂಬನಿ ಮಿಡಿದಿದ್ದಾರೆ. ‘ಸಿಂಗೀತಂ ಅವರು ತಮ್ಮ ಇಷ್ಟದಂತೆಯೇ ಯೌವನದಲ್ಲಿ, ಅದೇ ತಾರುಣ್ಯದೊಂದಿಗೆ ಪ್ರಾಣ ಬಿಟ್ಟರು. ಅವರ ಆ ಯೌವನ ಎಲ್ಲರಿಗೂ ಒಲಿಯುವುದಿಲ್ಲ. ಆ ಗುಣ ನಮಗೂ ದಕ್ಕಲಿ ಎನ್ನುವ ಆಸೆಯಿಂದ ಅವರ ಕೈ ಹಿಡಿದು ನಡೆದ ಸ್ನೇಹಿತರಲ್ಲಿ, ಶಿಷ್ಯರಲ್ಲಿ ನಾನೂ ಒಬ್ಬ’ ಎಂದು ಕಮಲ್ ಹಾಸನ್ ಅವರು ಭಾವುಕವಾಗಿ ನುಡಿದಿದ್ದಾರೆ.

ಇದನ್ನೂ ಓದಿ: ಸಿಂಗೀತಂ ಶ್ರೀನಿವಾಸ ರಾವ್ ನಿಧನಕ್ಕೆ ಸಂತಾಪ ಸೂಚಿಸಿದ ಚಿರಂಜೀವಿ, ಎನ್​ಟಿಆರ್

‘ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುವುದು ದುರಂತವೇ ಆಗಬೇಕಿಲ್ಲ. ಅದೊಂದು ಅದ್ಭುತ ಅಥವಾ ಹೆಮ್ಮೆಯ ವಿಷಯವೂ ಆಗಿರಬಹುದು. ಅದಕ್ಕೆ ಸಿಂಗೀತಂ ಶ್ರೀನಿವಾಸರಾವ್ ಅವರೇ ಶ್ರೇಷ್ಠ ಉದಾಹರಣೆ. ಅವರನ್ನು ತಿಳಿದಂದಿನಿಂದಲೂ ನಾನು ಅವರನ್ನು ಆರಾಧಿಸುತ್ತಾ ಬಂದಿದ್ದೇನೆ. ಈಗ ಅವರಂತೆಯೇ ಬದುಕಲು ನಾನು ಬಯಸುತ್ತೇನೆ’ ಎಂದು ಕಮಲ್ ಹಾಸನ್ ಅವರು ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us