ಸಿನಿಮಾ ಹಿನ್ನೆಲೆ ಗಾಯಕಿ ಹರಿಣಿ ಅವರ ತಂದೆ ಎ.ಕೆ. ರಾವ್ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆಯ ಜಾಲವನ್ನು ಪೊಲೀಸರು ಭೇದಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್ ವಿಚಾರಗಳು ಹೊರಬರುತ್ತಿವೆ. ಯಲಹಂಕ ಬಳಿ ರೈಲ್ವೆ ಹಳಿ ಮೇಲೆ ಎ.ಕೆ. ರಾವ್ ಶವ ಪತ್ತೆ ಆಗಿತ್ತು. ಅಚ್ಚರಿ ಏನೆಂದರೆ, ಈ ಸಾವಿಗೆ ಬರೋಬ್ಬರಿ 390 ಕೋಟಿ ರೂಪಾಯಿ ಸಾಲದ ನಂಟು ಇದೆ ಎಂಬುದು ಈಗ ಬಯಲಾಗಿದೆ. ಉದ್ಯಮಿ ಗಿರೀಶ್ ಸೇರಿದಂತೆ ಇನ್ನೂ ಇಬ್ಬರಿಗೆ ಸಾಲ ಕೊಡಿಸಲು ಎ.ಕೆ. ರಾವ್ ಮುಂದಾಗಿದ್ದರು ಎಂದು ತಿಳಿದುಬಂದಿದೆ. ಉದ್ಯಮಿ ಗಿರೀಶ್‌ಗೆ 150 ಕೋಟಿ ರೂಪಾಯಿ ಹಾಗೂ ಪಣಿತರನ್‌ಗೆ 240 ಕೋಟಿ ರೂಪಾಯಿ ಸಾಲ ಕೊಡಿಸಲು ಎ.ಕೆ. ರಾವ್ ಮುಂದಾಗಿದ್ದರು. ಡ್ಯಾನಿಯಲ್ ಆರ್ಮ್ ಸ್ಟ್ರಾಂಗ್‌ನಿಂದ ಸಾಲ ಕೊಡಿಸಲು ಪ್ರಯತ್ನ ಮಾಡಲಾಗಿತ್ತು.
ಡ್ಯಾನಿಯಲ್ ಮುಂಗಡವಾಗಿ 5 ಕೋಟಿ 80 ಲಕ್ಷ ಬಡ್ಡಿ ಪಡೆದುಕೊಂಡಿದ್ದ. ಬಡ್ಡಿ ಹಣ ಸಿಗುತ್ತಿದ್ದಂತೆಯೇ ಡ್ಯಾನಿಯಲ್ ನಾಪತ್ತೆಯಾಗಿದ್ದ. ಹೀಗಾಗಿ ಗಿರೀಶ್, ಪಣಿತರನ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಡ್ಯಾನಿಯಲ್, ವಿವೇಕಾನಂದ, ರಾಘವ ವಿರುದ್ಧ ವಂಚನೆ ಕೇಸ್ ದಾಖಲು ಮಾಡಲಾಗಿತ್ತು. ಆ ದೂರಿನ ಹಿನ್ನೆಲೆಯಲ್ಲಿ ಎ.ಕೆ. ರಾವ್ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು. ವಿಚಾರಣೆಗೆ ಹಾಜರಾದ ಮರುದಿನವೇ ಅವರು ಶವವಾಗಿ ಪತ್ತೆಯಾಗಿದ್ದು, ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಯಲಹಂಕ ಬಳಿ ರೈಲ್ವೆ ಹಳಿ ಮೇಲೆ ಎ.ಕೆ. ರಾವ್ ಶವ ಪತ್ತೆ ಆಗಾದ ಆಧಾರ್ ಕಾರ್ಡ್ ಸಿಕ್ಕಿತ್ತು. ಅಲ್ಲದೇ, ದೂರು ನೀಡಲು ಸಿದ್ಧಪಡಿಸಿರುವ ಪತ್ರ ಹಾಗೂ ಕೆಲವು ಡಾಕ್ಯುಮೆಂಟ್ಗಳು ಸಹ ಪತ್ತೆ ಆಗಿದ್ದವು. ತಂದೆಯ ಸಾವು ಅನುಮಾನಾಸ್ಪದ ಆಗಿದೆ ಎಂದು ಎ.ಕೆ. ರಾವ್ ಪುತ್ರಿ ಶಾಲಿನಿ ಅವರು ಪೊಲೀಸರಿಗೆ ದೂರು ನೀಡಿದ್ದರು. ‘ನಮ್ಮ ತಂದೆ ಕೊಲೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ’ ಎಂದು ದೂರಿನಲ್ಲಿ ಹೇಳಲಾಗಿತ್ತು.
ಮೃತದೇಹದಲ್ಲಿ ಎಡಗೈ ನರ ಕಟ್ ಆಗಿತ್ತು. ಕುತ್ತಿಗೆಗೆ ಚಾಕುವಿನಿಂದ ಇರಿದಿರುವುದು ತಿಳಿದುಬಂದಿತ್ತು. ಮೃತದೇಹದ ಬಳಿಯಲ್ಲಿ ಚಾಕು ಸಹ ಸಿಕ್ಕಿತ್ತು. ಪ್ರಾಥಮಿಕ ತನಿಖೆ ವೇಳೆ ಇದು ಆತ್ಮಹತ್ಯೆ ಎಂದು ವೈದ್ಯರು ಹೇಳಿದ್ದರು. ಸದ್ಯ ತನಿಖೆ ಮುಂದುವರಿದಿದ್ದು ಹೊಸ ಹೊಸ ಶಾಕಿಂಗ್ ವಿಚಾರಗಳು ಬೆಳಕಿಗೆ ಬರುತ್ತಿವೆ.
ಇದನ್ನೂ ಓದಿ:
‘ಜಿಮ್ಗೆ ಹೋಗೋದ್ರಿಂದ ಸಾವು ಸಂಭವಿಸುತ್ತೆ ಅನ್ನೋದು ತಪ್ಪು’: ನಟ ನೆನಪಿರಲಿ ಪ್ರೇಮ್
Puneeth Rajkumar: ‘ಪುನೀತ್ ಅತಿಯಾಗಿ ಜಿಮ್ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ