Sign In

By signing in or creating an account, you agree with Associated Broadcasting Company's Terms & Conditions and Privacy Policy.

Sonu Nigam: ಆಸ್ಪತ್ರೆ ಸೇರಿದ ಸೋನು ನಿಗಮ್; ಕಾನ್ಸರ್ಟ್ ನಡೆಯುವಾಗ ಆಗಿದ್ದೇನು?

ಪ್ರಸಿದ್ಧ ಗಾಯಕ ಸೋನು ನಿಗಮ್ ಅವರಿಗೆ ಲೈವ್ ಪರ್ಫಾರ್ಮೆನ್ಸ್ ಸಮಯದಲ್ಲಿ ತೀವ್ರ ಬೆನ್ನು ನೋವು ಕಾಣಿಸಿಕೊಂಡಿದೆ. ನೋವಿನ ಹೊರತಾಗಿಯೂ ಅವರು ಪ್ರದರ್ಶನ ಮುಂದುವರಿಸಿ, ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ತಮ್ಮ ಅನುಭವವನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಅವರ ಬೇಗನೆ ಚೇತರಿಸಿಕೊಳ್ಳುವಂತೆ ಆಶಿಸಿದ್ದಾರೆ.

Sonu Nigam: ಆಸ್ಪತ್ರೆ ಸೇರಿದ ಸೋನು ನಿಗಮ್; ಕಾನ್ಸರ್ಟ್ ನಡೆಯುವಾಗ ಆಗಿದ್ದೇನು?
ಸೋನು ನಿಗಮ್
Follow us
ರಾಜೇಶ್ ದುಗ್ಗುಮನೆ
|

Updated on: Feb 03, 2025 | 7:04 AM

ಭಾರತದ ಖ್ಯಾತ ಗಾಯಕರಲ್ಲಿ ಸೋನು ನಿಗಮ್ ಕೂಡ ಹೌದು. ಅವರು ಕನ್ನಡದ ಮಗ ಎನಿಸಿಕೊಂಡಿದ್ದಾರೆ. ‘ಕಳೆದ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಎಂಬ ಭಾವನೆ ನನ್ನದು’ ಎಂದು ಕೂಡ ಅವರು ಹೇಳಿಕೊಂಡಿದ್ದು ಇದೆ. ಈಗ ಸೋನು ನಿಗಮ್ ಅವರಿಗೆ ತೀವ್ರ ಬೆನ್ನು ನೋವು ಕಾಣಿಸಿದೆ. ಲೈವ್ ಪರ್ಫಾರ್ಮೆನ್ಸ್ ವೇಳೆ ಈ ನೋವು ಹೆಚ್ಚಾಗಿದೆ. ಆದಾಗ್ಯೂ ಅದನ್ನು ತಡೆದಿಟ್ಟುಕೊಂಡು ಪರ್ಫಾರ್ಮೆನ್ಸ್ ಮುಂದುವರಿಸಿದ್ದಾರೆ. ಆ ಬಳಿಕ ಅವರು ಆಸ್ಪತ್ರೆ ಸೇರಿದ್ದಾರೆ. ಈ ಸಂದರ್ಭದ ವಿಡಿಯೋ ಹಂಚಿಕೊಂಡಿದ್ದಾರೆ.

ಸೋನು ನಿಗಮ್ ಅವರು ಸಾಕಷ್ಟು ಸೂಪರ್ ಹಿಟ್ ಗೀತೆಗಳನ್ನು ನೀಡಿದವರು. ತಮ್ಮದೇ ಬ್ಯಾಂಡ್ ಹೊಂದಿರೋ ಅವರು ಕಾನ್ಸರ್ಟ್​​ಗಳನ್ನು ನೀಡುತ್ತಾ ಇರುತ್ತಾರೆ. ಇತ್ತೀಚೆಗೆ ಪರ್ಫಾರ್ಮೆನ್ಸ್ ನೀಡುವಾಗ ಅವರಿಗೆ ಸಮಸ್ಯೆ ಆಗಿದೆ. ಆದರೆ, ಅದನ್ನು ಅದಮಿಟ್ಟುಕೊಂಡು ಹಾಡು ಹೇಳಿ ಜನರನ್ನು ರಂಜಿಸಿದ್ದಾರೆ. ಆ ಬಳಿಕ ಏನಾಯಿತು ಎಂಬುದನ್ನು ಅವರು ವಿಡಿಯೋ ಮೂಲಕ ವಿವರಿಸಿದ್ದಾರೆ.

ಸೋನು ನಿಗಮ್ ಅವರು ಆಸ್ಪತ್ರೆಯಲ್ಲಿ ಮಲಗಿದ್ದು, ಏನಾಯಿತು ಎಂಬುದನ್ನು ವಿವರಿಸಿದ್ದಾರೆ. ‘ನನ್ನ ಜೀವನದ ಅತ್ಯಂತ ಕಷ್ಟದ ದಿನ. ನಾನು ಹಾಡು ಹೇಳುತ್ತಾ, ವೇದಿಕೆ ಮೇಲೆಲ್ಲ ಓಡಾಡುತ್ತಾ ಇದ್ದೆ. ಆಗ ನೋವು ಕಾಣಿಸಿಕೊಂಡಿತು. ಆದರೆ, ಹೇಗೋ ಮ್ಯಾನೇಜ್ ಮಾಡಿದೆ. ಜನರು ನನ್ನಿಂದ ಎಷ್ಟನ್ನು ನಿರೀಕ್ಷಿಸುತ್ತಾರೋ ಅದಕ್ಕಿಂತ ಕಡಿಮೆ ಕೊಡಲು ನನಗೆ ಇಷ್ಟ ಇಲ್ಲ’ ಎಂದು ಅವರು ಹೇಳಿದ್ದಾರೆ.

‘ಅತಿಯಾದ ನೋವು ಕಾಣಿಸಿತ್ತು. ನನ್ನ ಬೆನ್ನು ಹುರಿಗೆ ಯಾರೋ ಇಂಜೆಕ್ಷನ್ ಸೂಜಿ ಇಟ್ಟಿದ್ದಾರೆ ಅನಿಸುತ್ತಿತ್ತು. ಸ್ವಲ್ಪ ಅಲ್ಲಾಡಿದರೂ ನೋವು ಕಿತ್ತು ಬರುತ್ತಿತ್ತು’ ಎಂದು ಅವರು ಹೇಳಿರೋ ಅವರು ವಿಡಿಯೋ ಕ್ಯಾಪ್ಶನ್​ನಲ್ಲಿ ‘ರಾತ್ರಿ ಸರಸ್ವತಿ ನನ್ನ ಕೈ ಹಿಡಿದರು’ ಎಂದಿದ್ದಾರೆ.

ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಸರಸ್ವತಿ ತಮ್ಮ ನೆಚ್ಚಿನ ಮಗುವ ಕೈ ಹಿಡಿಯಲೇಬೇಕಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಬೇಗ ಚೇತರಿಸಿಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ. ನಿಮ್ಮ ನೋವನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ಅರಿಜಿತ್​ಗೆ ಪದ್ಮಶ್ರೀ, ಸೋನು ನಿಗಮ್​ಗೆ ಹೊಟ್ಟೆ ಉರಿ? ವಿಡಿಯೋದಲ್ಲೇನಿದೆ?

ಸೋನು ನಿಗಮ್ ಕನ್ನಡದಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ. ಅವರಿಗೆ ಕನ್ನಡದ ಬಗ್ಗೆ ವಿಶೇಷ ಒಲವು ಇದೆ. ಕನ್ನಡದ ಹಾಡುಗಳನ್ನು ಹಾಡೋದು ಸುಲಭ ಎಂದು ಹೇಳಿದ್ದರು. ಈಗ ಅವರು ಬೆನ್ನು ನೋವಿಗೆ ಆಪರೇಷನ್ ಮಾಡಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.