ನಿರ್ದೇಶಕ ರಾಜಮೌಳಿ (SS Rajamouli) ಅವರು ಮುಂದಿನ ಸಿನಿಮಾದ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಮಹೇಶ್ ಬಾಬು (Mahesh Babu) ಜೊತೆ ಅವರು ಹೊಸ ಸಿನಿಮಾ ಮಾಡುವುದು ಗೊತ್ತೇ ಇದೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಈಗ ಅವರು ಮರಾಠಿಯ ಖ್ಯಾತ ನಟ ದೇವದತ್ತ ನಾಗೆ ಜೊತೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಭೇಟಿಯ ಉದ್ದೇಶ ಏನು ಎಂಬ ಬಗ್ಗೆ ಅಭಿಮಾನಿಗಳಿಗೆ ಕೌತುಕ ಮೂಡಿದೆ. ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾದಲ್ಲಿ ದೇವದತ್ತ ನಾಗೆ (Devdatta Nage) ಅವರು ಆಂಜನೇಯನ ಮಾತ್ರ ಮಾಡಿದ್ದರು. ಆ ಪಾತ್ರದಿಂದ ಅವರ ಜನಪ್ರಿಯತೆ ಹೆಚ್ಚಾಯಿತು.
ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ‘ಎಸ್ಎಸ್ಎಂಬಿ 29’ ಎಂದು ತಾತ್ಕಾಲಿಕವಾಗಿ ಅದನ್ನು ಕರೆಯಲಾಗುತ್ತಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆ ಯಾರೆಲ್ಲ ನಟಿಸುತ್ತಾರೆ ಎಂಬುದು ಕೂಡ ಬಹಿರಂಗ ಆಗಿಲ್ಲ. ಸದ್ಯಕ್ಕೆ ರಾಜಮೌಳಿ ಅವರು ಪಾತ್ರವರ್ಗದ ಆಯ್ಕೆಯಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನೂ ಓದಿ: ರಾಜಮೌಳಿ ಹೊಸ ಸಿನಿಮಾ ಬಗೆಗಿನ ದೊಡ್ಡ ಗಾಸಿಪ್ಗೆ ಆರಂಭದಲ್ಲೇ ಅಂತ್ಯ ಹಾಡಿದ ನಿರ್ಮಾಪಕರು
ದೇವದತ್ತ ನಾಗೆ ಅವರು ಇನ್ಸ್ಟಾಗ್ರಾಮ್ನಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ನಿರ್ದೇಶಕ ರಾಜಮೌಳಿ ಅವರನ್ನು ಭೇಟಿಯಾದ ಈ ಕ್ಷಣ ತುಂಬ ವಿಶೇಷವಾದದ್ದು ಎಂದು ಅವರು ಬರೆದುಕೊಂಡಿದ್ದಾರೆ. ಈ ಭೇಟಿಗಾಗಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಕಾರಣ ಇಲ್ಲದೇ ಈ ಭೇಟಿ ನಡೆದಿರಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಸುದ್ದಿ ಹೊರಬರಲಿ ಎಂದು ಫ್ಯಾನ್ಸ್ ಕಾದಿದ್ದಾರೆ.
ಮರಾಠಿ ಕಿರುತೆರೆ ಮತ್ತು ಸಿನಿಮಾದಲ್ಲಿ ದೇವದತ್ತ ನಾಗೆ ಅವರು ಜನಪ್ರಿಯತೆ ಪಡೆದಿದ್ದಾರೆ. ಹಿಂದಿ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ನಟನೆ ಮಾತ್ರವಲ್ಲದೇ ಕಟ್ಟುಮಸ್ತಾದ ದೇಹದ ಕಾರಣದಿಂದಲೂ ಅವರು ಗಮನ ಸೆಳೆದಿದ್ದಾರೆ. ‘ಆದಿಪುರುಷ್’ ಸಿನಿಮಾದಲ್ಲಿ ಆಂಜನೇಯನ ಪಾತ್ರ ಸಿಕ್ಕಾಗ ಅವರ ಅಭಿಮಾನಿಗಳಿಗೆ ಖುಷಿ ಆಗಿತ್ತು. ಆದರೆ ಆ ಸಿನಿಮಾದಲ್ಲಿ ಅವರನ್ನು ಸರಿಯಾಗಿ ತೋರಿಸಿಲ್ಲ ಎಂದು ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದರು. ಅವರ ಪ್ರತಿಭೆಗೆ ತಕ್ಕಂತಹ ಪಾತ್ರವನ್ನು ರಾಜಮೌಳಿ ನೀಡಲಿ ಎಂದು ಅಭಿಮಾನಿಗಳು ಬಯಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.