ಏಪ್ರಿಲ್ 16ಕ್ಕೆ ಏನಾಗಲಿದೆ? ಗುಟ್ಟು ಬಿಟ್ಟುಕೊಟ್ಟ ಕಿಚ್ಚ ಸುದೀಪ್
Sudeep: ಕಿಚ್ಚ ಸುದೀಪ್ ಇತ್ತೀಚೆಗೆ ತಮ್ಮ ಕೆಲ ಚಿತ್ರಗಳನ್ನು ಹಂಚಿಕೊಂಡು ‘ಏಪ್ರಿಲ್ 16’ ಎಂದು ಟ್ವೀಟ್ ಮಾಡಿದ್ದರು. ಇದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಕೆರಳಿಸಿತ್ತು. ಏಪ್ರಿಲ್ 16ಕ್ಕೆ ಏನಾಗಲಿದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಏಪ್ರಿಲ್ 16ಕ್ಕೆ ಇನ್ನೂ ಕೆಲ ದಿನ ಇರುವಾಗಲೇ ಸುದೀಪ್, ಏಪ್ರಿಲ್ 16ರ ಗುಟ್ಟು ರಟ್ಟು ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ಕಿಚ್ಚ ಸುದೀಪ್ (Kichcha Sudeep) ಚಿತ್ರವೊಂದನ್ನು ಹಂಚಿಕೊಂಡಿದ್ದರು. ಚಿತ್ರದಲ್ಲಿ ತಮ್ಮ ಹುರಿಗಟ್ಟಿದ ತೋಳುಗಳನ್ನು ಪ್ರದರ್ಶಿಸಿದ್ದ ಸುದೀಪ್, ಏಪ್ರಿಲ್ 16 ಎಂದಷ್ಟೆ ಬರೆದುಕೊಂಡಿದ್ದರು. ಇದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿತ್ತು. ಏಪ್ರಿಲ್ 16 ರಂದು ಏನಾಗಲಿದೆ? ಎಂದು ಹಲವು ಪ್ರಶ್ನೆ ಮಾಡಿದ್ದರು. ಆದರೆ ಏಪ್ರಿಲ್ 16ಕ್ಕೆ ಇನ್ನೂ ಕೆಲ ದಿನ ಬಾಕಿ ಇರುವಾಗಲೇ ಸುದೀಪ್ ಗುಟ್ಟು ರಟ್ಟು ಮಾಡಿದ್ದಾರೆ. ಏಪ್ರಿಲ್ 16ಕ್ಕೆ ಏನಾಗಲಿದೆ ಎಂಬುದನ್ನು ಈಗಲೇ ಹೇಳಿಬಿಟ್ಟಿದ್ದಾರೆ.
ನಿನ್ನೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ‘ಏಪ್ರಿಲ್ 16ಕ್ಕೆ ಏನಾಗಲಿದೆ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದೀರ, ಆ ದಿನ ನನ್ನ ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಸೆಟ್ಟೇರಲಿದೆ, ಸಿನಿಮಾದ ಸೆಟ್ಟು, ಇತರೆ ಪಾತ್ರವರ್ಗ ಇನ್ನೂ ಹಲವು ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳಲಿದೆ’ ಎಂದಿದ್ದಾರೆ. ಆ ಮೂಲಕ ತಾವೇ ಸೃಷ್ಟಿಸಿದ್ದ ಕುತೂಹಲವನ್ನು ಅಂತ್ಯ ಮಾಡಿದ್ದಾರೆ ಕಿಚ್ಚ ಸುದೀಪ್.
ಬಿಆರ್ಬಿ (ಬಿಲ್ಲಾ ರಂಗ ಭಾಷಾ) ಸಿನಿಮಾ ಅನ್ನು ಸುದೀಪ್ ಅವರ ನೆಚ್ಚಿನ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಅವರು ಸುದೀಪ್ಗಾಗಿ ‘ವಿಕ್ರಾಂತ್ ರೋಣ’ ಸಿನಿಮಾ ನಿರ್ದೇಶನ ಮಾಡಿದ್ದರು. ಇದೀಗ ಈ ಜೋಡಿ ಎರಡನೇ ಬಾರಿ ಮತ್ತೆ ಒಂದಾಗುತ್ತಿದೆ. ಸಿನಿಮಾಕ್ಕಾಗಿ ದೇಹವನ್ನು ಅದ್ಭುತವಾಗಿ ಹುರಿಗಟ್ಟಿಸಿಕೊಂಡಿದ್ದಾರೆ ಸುದೀಪ್. ಸತತ ಜಿಮ್ ಟ್ರೈನಿಂಗ್ ಮಾಡಿ ಈಗಂತೂ ಬಾಡಿ ಬಿಲ್ಡರ್ ರೀತಿ ಕಾಣುತ್ತಿದ್ದಾರೆ ಸುದೀಪ್. ಈ ಹಿಂದೆ ‘ಪೈಲ್ವಾನ’ ಸಿನಿಮಾಕ್ಕೂ ಸಹ ಇದೇ ರೀತಿ ತಯಾರಾಗಿದ್ದರು ಕಿಚ್ಚ. ಆ ಸಿನಿಮಾ ಸಹ ಸೂಪರ್ ಹಿಟ್ ಆಗಿತ್ತು.
ಇದನ್ನೂ ಓದಿ:ಹೊಸ ಚಿತ್ರದ ಅಪ್ಡೇಟ್ ಕೊಟ್ಟ ಸುದೀಪ್; ಕಿಚ್ಚನ ಕಟ್ಟು ಮಸ್ತಾದ ಬಾಡಿ ನೋಡಿ ಫ್ಯಾನ್ಸ್ ಖುಷ್
ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಇದರ ನಡುವೆ ಕಾರ್ತಿಕ್ ಗೌಡ, ಯೋಗಿ ಗೌಡ ನಿರ್ಮಾಣ ಮಾಡುತ್ತಿರುವ ಆಕ್ಷನ್ ಸಿನಿಮಾದಲ್ಲಿಯೂ ಸುದೀಪ್ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಆ ಸಿನಿಮಾದ ಹೊಸ ಅಪ್ಡೇಟ್ಗಳು ಈ ವರೆಗೆ ಹೊರಬಿದ್ದಿಲ್ಲ. ಇದರ ನಡುವೆ ಇದೀಗ ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಸೆಟ್ಟೇರುತ್ತಿದೆ. ಅನುಪ್ ಭಂಡಾರಿ ಜೊತೆಗೆ ‘ದ್ರೋಣ’ ಸಿನಿಮಾ ಅನ್ನು ಸುದೀಪ ಮಾಡುತ್ತಾರೆ ಎನ್ನಲಾಗಿತ್ತು, ಆದರೆ ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಮೊದಲು ಸೆಟ್ಟೇರುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ