‘ಜನ ನಾಯಗನ್’ ಯಾಕೆ ವಿಳಂಬ ಆಗಿದೆ ಅಂತ ಕೇಳಿದ್ದಕ್ಕೆ ಸೈಲೆಂಟ್ ಆದ ರಜನಿಕಾಂತ್

ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ಸಿನಿಮಾಗಳ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ಕಮಲ್ ಹಾಸನ್ ಜೊತೆಗಿನ ಸಿನಿಮಾ ಶೂಟಿಂಗ್ ಯಾವಾಗ ಆರಂಭ ಎಂಬುದನ್ನೂ ತಿಳಿಸಿದ್ದಾರೆ. ಆದರೆ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಗ್ಗೆ ಕೇಳಿದ್ದಕ್ಕೆ ಮೌನ ತಾಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

‘ಜನ ನಾಯಗನ್’ ಯಾಕೆ ವಿಳಂಬ ಆಗಿದೆ ಅಂತ ಕೇಳಿದ್ದಕ್ಕೆ ಸೈಲೆಂಟ್ ಆದ ರಜನಿಕಾಂತ್
Thalapathy Vijay, Rajinikanth

Updated on: Apr 08, 2026 | 7:05 PM

ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರು ಸದ್ಯ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ (Jailer 2) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚಿತ್ರದ ಶೂಟಿಂಗ್ ಹೇಗೆ ನಡೆಯುತ್ತಿದೆ ಹಾಗೂ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ದಳಪತಿ ವಿಜಯ್ ನಟನೆಯ ‘ಜಗ ನಾಯಗನ್’ (Jana Nayagan) ಸಿನಿಮಾದ ವಿಳಂಬದ ಬಗ್ಗೆ ಅವರಿಗೆ ಪ್ರಶ್ನೆ ಎದುರಾಯಿತು.

ಸಿನಿಮಾ ಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿರುವ ‘ಜೈಲರ್ 2’ ಬಗ್ಗೆ ಮಾತನಾಡಿದ ರಜನಿಕಾಂತ್, ‘ಜೈಲರ್ 2 ಚಿತ್ರದ ಚಿತ್ರೀಕರಣಕ್ಕೆ ಇನ್ನು ಕೇವಲ 2ರಿಂದ 3 ದಿನಗಳ ಕೆಲಸ ಮಾತ್ರ ಬಾಕಿ ಇದೆ. ಶೀಘ್ರದಲ್ಲೇ ಶೂಟಿಂಗ್ ಮುಕ್ತಾಯವಾಗಲಿದೆ’ ಎಂದು ತಿಳಿಸಿದರು. ಈ ಚಿತ್ರದಲ್ಲಿ ಅವರು ಮತ್ತೆ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಹಳ ವರ್ಷಗಳ ನಂತರ ರಜನಿಕಾಂತ್ ಮತ್ತು ಕಮಲ್ ಹಾಸನ್ ಒಂದೇ ಸಿನಿಮಾದಲ್ಲಿ (KHxRK) ಕಾಣಿಸಿಕೊಳ್ಳುತ್ತಿದ್ದು, ಆ ಚಿತ್ರದ ಬಗ್ಗೆಯೂ ತಲೈವಾ ಮಾತನಾಡಿದ್ದಾರೆ. ಚಿತ್ರದ ಕಥೆ ಈಗಾಗಲೇ ಫೈನಲ್ ಆಗಿದೆ. ಆಗಸ್ಟ್ ತಿಂಗಳಿಂದ ಶೂಟಿಂಗ್ ಆರಂಭವಾಗಲಿದೆ. ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ನಿರ್ಮಾಣ ಸಂಸ್ಥೆಗಳೇ ಅಧಿಕೃತವಾಗಿ ತಿಳಿಸಲಿವೆ ಎಂದು ಅವರು ಹೇಳಿದ್ದಾರೆ.

ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಿದ ರಜನಿಕಾಂತ್ ಅವರು ‘ಜನ ನಾಯಗನ್’ ಬಗ್ಗೆ ಮೌನ ತಾಳಿದರು. ಈ ಸಿನಿಮಾ ವಿಳಂಬ ಆಗುತ್ತಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ತುಸು ಗಂಭೀರವಾಗಿಯೇ ಅವರು ಪ್ರತಿಕ್ರಿಯಿಸಿದರು. ‘ಕ್ಷಮಿಸಿ, ಈ ಪ್ರಶ್ನೆಗೆ ಉತ್ತರಿಸಲು ನಾನು ಇಷ್ಟಪಡುವುದಿಲ್ಲ’ ಎಂದು ಹೇಳಿ ಅಲ್ಲಿಂದ ಹೊರಟುಹೋದರು. ಹಾಗಾಗಿ ಅವರ ನಿಲುವು ಏನು ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ‘ಜನ ನಾಯಗನ್’ ಸಿನಿಮಾ ತಡ ಆಗಿದ್ದಕ್ಕೆ ನನಗೆ ನ್ಯಾಯ ಬೇಕು: ಗುಡುಗಿದ ವಿಜಯ್

ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರವು ಈ ವರ್ಷದ ಜನವರಿ 9ರಂದು ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಗದ ಕಾರಣ ಸಿನಿಮಾ ಬಿಡುಗಡೆ ವಿಳಂಬವಾಗಿದೆ. ಸದ್ಯ ಈ ಚಿತ್ರವು ಜೂನ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿಳಂಬ ಆಗಿದ್ದರ ಹಿಂದೆ ರಾಜಕೀಯ ಪಿತೂರಿ ಇದೆ ಎಂಬ ಆರೋಪ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us