‘ಕಂಗುವ’ ಟ್ರೈಲರ್ ಬಿಡುಗಡೆ: ಭೀಕರ ಯುದ್ಧದಲ್ಲಿ ಅಷ್ಟೇ ಭೀಕರ ಸೂರ್ಯ, ಬಾಬಿ ಡಿಯೋಲ್
Kanguva: ‘ಕಂಗುವ’ ಸಿನಿಮಾ ಮೂಲಕ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಲಿದ್ದಾರೆ ನಟ ಸೂರ್ಯ. ಭಾರಿ ಬಜೆಟ್ನ ‘ಕಂಗುವ’ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಹೇಗಿದೆ ಟ್ರೈಲರ್?
ದಕ್ಷಿಣ ಭಾರತದ ಹಲವು ಸ್ಟಾರ್ ನಟರು ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ಗಳಾಗಿ ಗುರುತಿಸಿಕೊಂಡಿದ್ದಾರೆ. ಆದರೆ ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ಇನ್ನೂ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿಲ್ಲ. ತನ್ನ ವಾರಗೆಯ ಸ್ಟಾರ್ ನಟರಂತೆ ಕೇವಲ ಮಾಸ್ ಸಿನಿಮಾಗಳಿಗೆ ಜೋತು ಬೀಳದೆ ‘ಜೈ ಭೀಮ್’ ರೀತಿಯ ದಲಿತ ಹೋರಾಟ ಸಿನಿಮಾಗಳಲ್ಲಿ, ‘ಸೂರರೈ ಪೋಟ್ರು’ ರೀತಿಯ ಬ್ರಿಜ್ ಮಾದರಿಯ ಸಿನಿಮಾಗಳಲ್ಲಿಯೂ ನಟಿಸುತ್ತಾ ಬಂದಿದ್ದಾರೆ. ಆದರೆ ಈಗ ಕೊನೆಗೂ ಸೂರ್ಯ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಳ್ಳುವ ಸಮಯ ಬಂದಿದೆ ‘ಕನಗುವ’ ಸಿನಿಮಾ ಮೂಲಕ. ‘ಕಂಗುವ’ ಸೂರ್ಯ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.
‘ಕಂಗುವ’ ಸಿನಿಮಾ ಶಿಲಾಯುಗ ಕಾಲದ ಮನುಷ್ಯರ ಕತೆ ಒಳಗೊಂಡಂತಿದೆ. ಮನುಷ್ಯರ, ಪ್ರಾಣಿಗಳ ತಲೆ ಬುರುಡೆಗಳನ್ನು, ಮೂಳೆಗಳನ್ನು ಅಲಂಕಾರಕ್ಕೆ ಮೈಮೇಲೆ ಹಾಕಿಕೊಳ್ಳುವ, ಭೀಕರವಾಗಿ ಕಾಣುವ ಜನರು, ಅವರ ನಡುವೆ ದ್ವೇಷ, ಯುದ್ಧದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎಂಬುದನ್ನು ಸಿನಿಮಾದ ಟ್ರೈಲರ್ ಹೇಳುತ್ತಿದೆ. ಸಿನಿಮಾದ ನಾಯಕ-ವಿಲನ್ ಇಬ್ಬರೂ ಸಹ ಭೀಕರವಾಗಿ ಕಾಣಿಸಿಕೊಂಡಿದ್ದು, ಇಬ್ಬರ ನಡುವೆ ನಡೆಯುವ ಯುದ್ಧದ ಕತೆಯನ್ನು ಈ ಸಿನಿಮಾ ಒಳಗೊಂಡಂತಿದೆ.
ಟ್ರೈಲರ್ನಲ್ಲಿ ಸಿನಿಮಾದ ಮೇಕಿಂಗ್, ಅದ್ಧೂರಿ ಸೆಟ್ಗಳು, ಆಕ್ಷನ್ ದೃಶ್ಯಗಳು, ಭಾರಿ ಆಕ್ಷನ್ ದೃಶ್ಯಗಳು ಗಮನ ಸೆಳೆಯುತ್ತಿವೆ. ಸಿನಿಮಾದ ಪೋಸ್ಟರ್ನಲ್ಲಿ ಆಧುನಿಕ ಬಂದೂಕು ಹಿಡಿದುಕೊಂಡಿರುವ ಸೂರ್ಯ ಚಿತ್ರವೂ ಸಹ ಇದೆ. ಆದರೆ ಸಿನಿಮಾದ ಟ್ರೈಲರ್ನಲ್ಲಿ ಆಧುನಿಕ ಕಾಲದ ಕತೆಯ ಯಾವ ದೃಶ್ಯಗಳೂ ಸಹ ಇಲ್ಲ. ಕೇವಲ ಪುರಾತನ ಕಾಲದ ದೃಶ್ಯಗಳನ್ನು ಮಾತ್ರವೇ ತೋರಿಸಲಾಗಿದೆ. ಸಿನಿಮಾದಲ್ಲಿರುವ ಮತ್ತೊಬ್ಬ ಸ್ಟಾರ್ ನಟನ ದೃಶ್ಯವೂ ಟ್ರೈಲರ್ನಲ್ಲಿ ಇದೆಯಾದರೂ ಅದು ಯಾರೆಂಬುದನ್ನು ತೋರಿಸಲಾಗಿಲ್ಲ. ಕೆಲವರ ಪ್ರಕಾರ, ಸೂರ್ಯ ಸಹೋದರ ಕಾರ್ತಿ ಈ ಸಿನಿಮಾದ ಎರಡನೇ ನಾಯಕನಾಗಿ ನಟಿಸಿದ್ದಾರಂತೆ.
ಇದನ್ನೂ ಓದಿ:ಖ್ಯಾತನಟ ಸೂರ್ಯಗೆ ಸೆಟ್ನಲ್ಲಿ ಗಾಯ; ಈಗ ಹೇಗಿದೆ ಆರೋಗ್ಯ ಸ್ಥಿತಿ?
ಟ್ರೈಲರ್ನಲ್ಲಿ ಬಾಬಿ ಡಿಯೋಲ್ ಸಖತ್ ಗಮನ ಸೆಳೆಯುತ್ತಿದ್ದಾರೆ. ಜೊತೆಗೆ ಸೂರ್ಯ ಸಹ ತಮ್ಮ ಅದ್ಧೂರಿ ಮೈಕಟ್ಟು, ಮೈಗಳ ಮೇಲೆ ಹಾಕಿಕೊಂಡಿರುವ ಹಚ್ಚೆ, ಸಂಭಾಷಣೆ ಹೇಳುವ ವಿಧಾನಗಳಿಂದ ಬಹಳ ಗಮನ ಸೆಳೆಯುತ್ತಾರೆ. ಈ ಸಿನಿಮಾವನ್ನು ಕೆಇ ಜ್ಞಾನವೇಲು ನಿರ್ಮಾಣ ಮಾಡಿದ್ದು, ಸಿನಿಮಾದಲ್ಲಿ ಸೂರ್ಯಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ದಿಶಾ ಪಟಾನಿ ನಟಿಸಿದ್ದಾರೆ. ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್. ಸಿನಿಮಾ ನಿರ್ದೇಶನ ಮಾಡಿರುವುದು ಶಿವ. ಸಿನಿಮಾ ಅಕ್ಟೋಬರ್ 10 ರಂದು ತಮಿಳು, ಮಲಯಾಳಂ, ಹಿಂದಿ, ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ