ಸೂರ್ಯ ಮುಂದಿನ ಸಿನಿಮಾ 38 ಭಾಷೆಗಳಲ್ಲಿ ಬಿಡುಗಡೆ: ನಿರ್ಮಾಪಕ
Kanguva: ತಮಿಳು ಸ್ಟಾರ್ ನಟ ಸೂರ್ಯ ನಟಿಸಿರುವ ‘ಕಂಗುವ’ ಸಿನಿಮಾ ಏಕಕಾಲಕ್ಕೆ ಬರೋಬ್ಬರಿ 38 ಭಾಷೆಗಳಲ್ಲಿ ಬಿಡುಗಡೆ ಆಗಲಿದೆಯಂತೆ. ಸಿನಿಮಾದ ಬಗ್ಗೆ ಇನ್ನೂ ಕೆಲವು ವಿಷಯಗಳನ್ನು ನಿರ್ಮಾಪಕ ಹೇಳಿಕೊಂಡಿದ್ದಾರೆ.

ಈಗ ಪ್ಯಾನ್ ಇಂಡಿಯಾ (Pan India) ಸಿನಿಮಾಗಳ ಜಮಾನ. ಸಿನಿಮಾಗಳು ಅದರ ಮೂಲ ಭಾಷೆಯ ಜೊತೆಗೆ ಒಟ್ಟು ಐದು ಬೇರೆ-ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗುತ್ತವೆ. ‘ಆರ್ಆರ್ಆರ್’ ಅಂಥಹಾ ಸಿನಿಮಾಗಳು ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿಯ ಜೊತೆಗೆ ಜಪಾನಿ, ಚೀನಿ ಭಾಷೆಗೂ ಡಬ್ ಆಗಿ ಆಗಿದ್ದುಂಟು. ಆದರೆ ಸೂರ್ಯ ನಟಿಸುತ್ತಿರುವ ಹೊಸ ಸಿನಿಮಾ ಒಂದು ಬರೋಬ್ಬರಿ 38 ಭಾಷೆಗಳಲ್ಲಿ ಒಮ್ಮೆಗೆ ಬಿಡುಗಡೆ ಆಗಲಿದೆ. ಈ ವಿಷಯವನ್ನು ಸ್ವತಃ ಸಿನಿಮಾದ ನಿರ್ಮಾಪಕರು ಬಹಿರಂಗಪಡಿಸಿದ್ದಾರೆ.
ಸೂರ್ಯ ಪ್ರಸ್ತುತ ‘ಕಂಗುವ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವು ಐತಿಹಾಸಿಕ, ಥ್ರಿಲ್ಲರ್, ಮೈಥಾಲಜಿ ಅಂಶಗಳನ್ನು ಹೊಂದಿರುವ ಕತೆಯನ್ನು ಒಳಗೊಂಡ ಸಿನಿಮಾ. ಅದ್ಧೂರಿ ಸೆಟ್ಗಳನ್ನು ಹಾಕಿ ಭಾರಿ ಅದ್ಧೂರಿಯಾಗಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಸಿನಿಮಾಕ್ಕೆ ಕೆಇ ಜ್ಞಾನವೇಲ್ ರಾಜಾ ಬಂಡವಾಳ ಹೂಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘ಕಂಗುವ’ ಸಿನಿಮಾದ ಬಗ್ಗೆ ಮಾತನಾಡಿರುವ ನಿರ್ಮಾಪಕ ಕೆಇ ಜ್ಞಾನವೇಲ್ ರಾಜಾ ‘ನಮ್ಮ ಸಿನಿಮಾ 38 ವಿವಿಧ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ’ ಎಂದಿದ್ದಾರೆ. ‘ಕಂಗುವ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡುವ ಆಲೊಚನೆಯನ್ನು ನಿರ್ಮಾಪಕರು ಹಾಕಿಕೊಂಡಿದ್ದಾರೆ. ಹಾಗಾಗಿ ವಿಶ್ವದ ಬೇರೆ ಬೇರೆ ಭಾಷೆಗಳಲ್ಲಿ ಡಬ್ ಮಾಡಿಸಿ ಏಕಕಾಲಕ್ಕೆ ಬಿಡುಗಡೆ ಮಾಡುವುದು ಅವರ ಆಲೋಚನೆ.
ಇದನ್ನೂ ಓದಿ:ಬಿಗ್ ಬಜೆಟ್ನಲ್ಲಿ ಸಿದ್ಧಗೊಳ್ಳುತ್ತಿರುವ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳಿವು; ಇದೆ ಭರ್ಜರಿ ನಿರೀಕ್ಷೆ
‘ಕಂಗುವ’ ಸಿನಿಮಾವನ್ನು 3ಡಿ ಹಾಗೂ ಐಮ್ಯಾಕ್ಸ್ ಮಾದರಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾದ ವೀಕ್ಷಣೆ ಅನುಭವ ಉತ್ಕೃಷ್ಟವಾಗಿರಲಿದೆ ಎಂದು ಸಹ ನಿರ್ಮಾಪಕ ಕೆಇ ಜ್ಞಾನವೇಲ್ ರಾಜಾ ಹೇಳಿದ್ದಾರೆ. ‘ನಮ್ಮ ಸಿನಿಮಾ ತಮಿಳು ಸಿನಿಮಾದ ಎಲ್ಲ ಮಾರುಕಟ್ಟೆ ಗಡಿಗಳನ್ನು ದಾಟಿಕೊಂಡು ಹೋಗಲಿದೆ. ಇಡೀ ವಿಶ್ವಕ್ಕೆ ತಲುಪಲಿದ್ದೇವೆ. ಇದಕ್ಕಾಗಿ ನಾವು ಭಿನ್ನ ಮಾದರಿಯ ಮಾರುಕಟ್ಟೆ ಸ್ಟ್ರಾಟೆಜಿಗಳನ್ನು ಬಳಸಲಿದ್ದೇವೆ’ ಎಂದಿದ್ದಾರೆ.
‘ಕಂಗುವ’ ಸಿನಿಮಾದಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ನಾಯಕಿಯಾಗಿ ನಟಿಸಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ನಟರಾಜ್ ಸುಬ್ರಹ್ಮಣಿಯನ್, ಯೋಗಿ ಬಾಬು, ಜಗಪತಿ ಬಾಬು, ಕೋವೈ ಸರಳ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡುತ್ತಿರುವುದು ದೇವಿ ಶ್ರೀ ಪ್ರಸಾದ್. ಸಿನಿಮಾವನ್ನು ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಶನ್ಸ್ ಒಟ್ಟಿಗೆ ನಿರ್ಮಾಣ ಮಾಡಿದೆ. ಸಿನಿಮಾಕ್ಕೆ ಸುಮಾರು 400 ರಿಂದ 500 ಕೋಟಿ ಬಜೆಟ್ ಸುರಿಯಲಾಗಿದ್ದು 2024ರ ಮಧ್ಯಭಾಗದಲ್ಲಿ ಸಿನಿಮಾ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ