ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಒಂದು ವರ್ಷ ಕಳೆದಿದೆ. ಹಾಗಿದ್ದರೂ ಅಭಿಮಾನಿಗಳು ಅವರನ್ನು ಮರೆತಿಲ್ಲ. ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಅವರನ್ನು ನೆನಪು ಮಾಡಿಕೊಳ್ಳಲಾಗುತ್ತದೆ. ಜೂ.14ರಂದು ಸುಶಾಂತ್ ಅವರ ಮೊದಲ ವರ್ಷದ ಪುಣ್ಯತಿಥಿ. ಸರಿಯಾಗಿ ಒಂದು ವರ್ಷದ ಹಿಂದೆ ಆ ಕರಾಳ ದಿನದಂದು ಮುಂಬೈನ ತಮ್ಮ ಅಪಾರ್ಟ್ಮೆಂಟ್ನಲ್ಲಿ ಸುಶಾಂತ್ ನಿಧನರಾಗಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಮೃತದೇಹ ಪತ್ತೆಯಾಗಿತ್ತು. ಅಚ್ಚರಿ ಎಂದರೆ, ಈಗ ಅದೇ ಮನೆ ಬಾಡಿಗೆಗೆ ಲಭ್ಯವಿದೆ!
ಸಮುದ್ರಕ್ಕೆ ಮುಖ ಮಾಡಿರುವ ಈ ಅಪಾರ್ಟ್ಮೆಂಟ್ನ ಎರಡು ಮಹಡಿಗಳನ್ನು ಸುಶಾಂತ್ ಪಡೆದುಕೊಂಡಿದ್ದರು. ಅವರ ನಿಧನದ ಬಳಿಕ ಅದು ಖಾಲಿ ಉಳಿದುಕೊಂಡಿತ್ತು. ಲಾಕ್ಡೌನ್ ಕಾರಣದಿಂದಾಗಿ ಹೊಸ ಬಾಡಿಗೆದಾರರು ಬಂದಿರಲಿಲ್ಲ. ಆ ಎರಡೂ ಫ್ಲೋರ್ಗೆ ಸುಶಾಂತ್ ಅವರು ನಾಲ್ಕೂವರೆ ಲಕ್ಷ ರೂ. ಬಾಡಿಗೆ ಕಟ್ಟುತ್ತಿದ್ದರು. 2022ರ ಡಿಸೆಂಬರ್ ತಿಂಗಳವರೆಗೆ ಅವರು ಅಗ್ರೀಮೆಂಟ್ ಮಾಡಿಕೊಂಡಿದ್ದರು.
ನಿಧನರಾಗುವುದಕ್ಕೂ ಮುನ್ನ ತನ್ನ ಸ್ನೇಹಿತರು ಹಾಗೂ ಪ್ರೇಯಸಿ ರಿಯಾ ಚಕ್ರವರ್ತಿ ಜೊತೆ ಈ ಮನೆಯಲ್ಲಿ ಸುಶಾಂತ್ ವಾಸಿಸುತ್ತಿದ್ದರು. ಆಗಾಗ ಅವರ ಅಕ್ಕ, ಭಾವ ಕೂಡ ಬಂದು ಹೋಗುತ್ತಿದ್ದರು. ಸುಶಾಂತ್ ಸಾವಿನ ಸುದ್ದಿ ಹೊರಬಿದ್ದ ನಂತರ ಆ ಅಪಾರ್ಟ್ಮೆಂಟ್ ಇಡೀ ಪ್ರಕರಣದ ಕೇಂದ್ರ ಬಿಂದು ಆಗಿತ್ತು. ಪೊಲೀಸ್ ತನಿಖೆ ನಡೆದಿತ್ತು. ಈಗ ಅದೇ ಮನೆ ಬಾಡಿಗೆಗೆ ಲಭ್ಯವಾಗಿದೆ. ತಿಂಗಳ ಬಾಡಿಗೆ 4 ಲಕ್ಷ ರೂ. ಎಂದು ತಿಳಿದುಬಂದಿದೆ.
ಸುಶಾಂತ್ ಸಿಂಗ್ ರಜಪೂತ್ ಪುಣ್ಯ ಸ್ಮರಣೆ ಅಂಗವಾಗಿ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಅವರಿಗೆ ನಮನ ಸಲ್ಲಿಸಿದ್ದಾರೆ. ಸುಶಾಂತ್ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಪ್ರೇಯಸಿ ರಿಯಾ ಚಕ್ರವರ್ತಿ ಕೂಡ ದೀರ್ಘವಾದ ಪೋಸ್ಟ್ ಹಾಕಿಕೊಂಡಿದ್ದಾರೆ. ‘ನೀನು ಬಂದು ನನ್ನನ್ನು ಕರೆದುಕೊಂಡು ಹೋಗುತ್ತೀಯ ಎಂದು ನಾನು ಪ್ರತಿದಿನ ನಿನಗಾಗಿ ಕಾಯುತ್ತಿದ್ದೇನೆ’ ಎಂದು ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಸುಶಾಂತ್ ಇಹಲೋಕ ತ್ಯಜಿಸಿ ಒಂದು ವರ್ಷ ಕಳೆದರೂ ತನಿಖೆ ಇನ್ನೂ ಜಾರಿಯಲ್ಲಿದೆ. ಸಿಬಿಐ ಅಧಿಕಾರಿಗಳು ಅಂತಿಮ ವರದಿ ಸಲ್ಲಿಸುವುದು ಬಾಕಿ ಇದೆ. ಮಾದಕ ವಸ್ತು ಜಾಲದ ಜೊತೆ ಸುಶಾಂತ್ ನಂಟು ಹೊಂದಿದ್ದರು ಎಂಬ ಅನುಮಾನ ಕೂಡ ಇರುವುದರಿಂದ ಎನ್ಸಿಬಿ ಅಧಿಕಾರಿಗಳು ಆ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಸುಶಾಂತ್ ಅವರ ಹಣಕಾಸಿನ ವ್ಯವಹಾರಗಳ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಮಾಡಿದೆ.
ಇದನ್ನೂ ಓದಿ:
SSR Death Anniversary: ಸಾಯುವುದಕ್ಕೂ ಮೊದಲು ಎರಡು ಗಂಟೆಗಳ ಕಾಲ ತಮ್ಮ ಹೆಸರನ್ನೇ ಗೂಗಲ್ ಮಾಡಿದ್ದ ಸುಶಾಂತ್?
SSR Case: ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಒಂದು ವರ್ಷ ಕಳೆಯುವುದರೊಳಗೆ ಆದ 30 ಪ್ರಮುಖ ಘಟನೆಗಳೇನು?