
ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಅವರನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗುತ್ತಿದೆ. ಕೆಲವೇ ತಿಂಗಳಲ್ಲಿ ಅವರು ಆ ಪರಿ ಬದಲಾಗಿದ್ದಾರೆ. ಅಗತ್ಯಕ್ಕಿಂತಲೂ ಅಧಿಕ ತೂಕ ಹೊಂದಿದ್ದ ಅವರು ಬಹಳ ಶಿಸ್ತಿನ ಜೀವನ ನಡೆಸುವ ಮೂಲಕ ಸ್ಲಿಮ್ ಆಗಿದ್ದಾರೆ. ಅಚ್ಚರಿ ಏನೆಂದರೆ, ಕೇವಲ 8 ತಿಂಗಳುಗಳಲ್ಲಿ ಬರೋಬ್ಬರಿ 42 ಕೆಜಿ ದೇಹದ ತೂಕ ಕಡಿಮೆ (Weight Loss) ಮಾಡಿಕೊಂಡಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ 42 ಕೆಜಿ ಕಡಿಮೆ ಆಗುವುದು ಎಂದರೆ ತಮಾಷೆಯ ಮಾತಲ್ಲ. ಈ ಮೂಲಕ ಅಜಿತ್ ಕುಮಾರ್ ಅವರು ಅಭಿಮಾನಿಗಳಿಗೂ ಸ್ಫೂರ್ತಿ ತುಂಬಿದ್ದಾರೆ.
ಈ ಮೊದಲು ಅಜಿತ್ ಕುಮಾರ್ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ನೀಡುತ್ತಿರಲಿಲ್ಲ. ವರ್ಷದಿಂದ ವರ್ಷಕ್ಕೆ ಅವರ ದೇಹದ ತೂಕ ಹೆಚ್ಚುತ್ತಲೇ ಇತ್ತು. ಅಭಿಮಾನಿಗಳು ಕೂಡ ಈ ಬಗ್ಗೆ ಟೀಕೆ ಮಾಡಿದ್ದರು. ಅಜಿತ್ ಅವರು ಫಿಟ್ನೆಸ್ ಮತ್ತು ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಫ್ಯಾನ್ಸ್ ಸಲಹೆ ನೀಡಿದ್ದರು. ಈಗ ಅಜಿತ್ ಸೂಪರ್ ಫಿಟ್ ಆಗಿದ್ದಾರೆ.
ಅಜಿತ್ ಅವರಿಗೆ 42 ಕೆಜಿ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಪ್ರಕ್ರಿಯೆ ಸುಲಭವಾಗಿ ಇರಲಿಲ್ಲ. ಅದಕ್ಕಾಗಿ ಅವರು ಸಾಕಷ್ಟು ಬದ್ಧತೆ ತೋರಿಸಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳಿಂದ ಅವರು ಡಯೆಟ್ ಮತ್ತು ವ್ಯಾಯಾಮ ಶುರು ಮಾಡಿದರು. ಬಹಳ ಮುಖ್ಯವಾಗಿ, ಅಜಿತ್ ಅವರು ಮದ್ಯಪಾನ ತ್ಯಜಿಸಿದ್ದಾರೆ. ಅಲ್ಲದೇ ಮಾಂಸಾಹಾರ ಕೂಡ ನಿಲ್ಲಿಸಿದ್ದಾರೆ. ಅದರ ಫಲವಾಗಿ ಅವರು ದಿನದಿಂದ ದಿನಕ್ಕೆ ದೇಹದ ತೂಕ ಕಡಿಮೆ ಮಾಡಿಕೊಳ್ಳುತ್ತ ಬಂದರು.
‘ತುಂಬ ಫಿಟ್ ಆಗಿರಲು ಬೇಕಾದ ಎಲ್ಲ ಕ್ರಮಗಳನ್ನು ನಾನು ಕೈಗೊಳ್ಳುತ್ತಿದ್ದೇನೆ. ರೇಸಿಂಗ್ನಲ್ಲಿ ಇದು ಬಹಳ ಮುಖ್ಯ. ರೇಸಿಂಗ್ಗಾಗಿ ನಾನು ಪೂರ್ತಿ ಶ್ರಮ ಹಾಕಬೇಕು. ಅದನ್ನೇ ನಾನೀಗ ಮಾಡುತ್ತಿದ್ದೇನೆ’ ಎಂದು ಮಾಧ್ಯಮವೊಂದಕ್ಕೆ ಅಜಿತ್ ಕುಮಾರ್ ಅವರು ಹೇಳಿದ್ದಾರೆ. ಇತ್ತೀಚೆಗೆ ಅಜಿತ್ ಅವರು ಸಿನಿಮಾಗಿಂತಲೂ ರೇಸಿಂಗ್ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಅಜಿತ್ ಕುಮಾರ್; ಈ ಪರಿಸ್ಥಿತಿ ಬರಲು ಅಭಿಮಾನಿಗಳೇ ಕಾರಣ
ಅಜಿತ್ ಕುಮಾರ್ ಅವರಿಗೆ ಇತ್ತೀಚೆಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಬಹಳ ಸ್ಲಿಮ್ ಆಗಿ ಕಾಣುತ್ತಿದ್ದರು. ಅವರ ಹಳೇ ಫೋಟೋ ಜೊತೆ ಹೊಸ ಫೋಟೋವನ್ನು ಇಟ್ಟು ನೋಡಿದರೆ ಎಷ್ಟು ಬದಲಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.