ಖ್ಯಾತ ನಿರ್ದೇಶಕ ಎಸ್.ಪಿ. ಜನನಾಥನ್ ಹೃದಯಾಘಾತದಿಂದ ನಿಧನ! ಸೆಲೆಬ್ರಿಟಿಗಳ ಸಂತಾಪ
SP Jananathan Death: ನಿರ್ದೇಶಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ ಎಸ್.ಪಿ. ಜನನಾಥನ್ ಅವರು ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಭಾನುವಾರ ಅವರು ಹೃದಯಾಘಾತದಿಂದ ನಿಧನರಾದರು.
ವಿಶೇಷ ಸಿನಿಮಾಗಳ ಮೂಲಕ ತಮಿಳು ಚಿತ್ರರಂಗಕ್ಕೆ ಕೊಡುಗೆ ನೀಡಿದ್ದ ಖ್ಯಾತ ನಿರ್ದೇಶಕ ಎಸ್.ಪಿ. ಜನನಾಥನ್ ಅವರು ಭಾನುವಾರ (ಮಾ.14) ನಿಧನರಾದರು. ಅವರ ಅಗಲಿಕೆಗೆ ಕಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಜನನಾಥನ್ ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅನೇಕರು ಪ್ರಾರ್ಥಿಸುತ್ತಿದ್ದಾರೆ.
ಕಳೆದ ಗುರುವಾರವೇ (ಮಾ.11) ಎಸ್.ಪಿ. ಜನನಾಥನ್ ಅವರು ಚೆನ್ನೈನ ತಮ್ಮ ನಿವಾಸದಲ್ಲಿ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಆಸ್ಪತ್ರೆಯಲ್ಲೇ ಅವರಿಗೆ ಹೃದಯಾಘಾತ ಆಯಿತು ಎಂದು ವರದಿ ಆಗಿದೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಎಸ್.ಪಿ. ಜನನಾಥನ್ ನಿರ್ದೇಶಿಸಿದ್ದ ಮೊದಲ ಸಿನಿಮಾ ‘ಇಯರ್ಕೈ’ (2003) ಬಾಕ್ಸ್ ಆಫೀಸ್ನಲ್ಲಿ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡಿರಲಿಲ್ಲ. ಆದರೆ ಅತ್ಯುತ್ತಮ ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿತ್ತು.
‘ಇಯರ್ಕೈ’ ಬಳಿಕ ಕಾಲಿವುಡ್ನಲ್ಲಿ ಜನನಾಥನ್ ಅವರು ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಮಾಡಿದ್ದು ಬೆರಳೆಣಿಕೆಯ ಸಿನಿಮಾಗಳಾದರೂ ಅಪಾರ ಮನ್ನಣೆ ಗಳಿಸಿದ್ದರು. ನಿಧನರಾಗುವುದಕ್ಕೂ ಮುನ್ನ ಅವರು ‘ಲಾಭಂ’ ಸಿನಿಮಾ ನಿರ್ದೇಶಿಸುತ್ತಿದ್ದರು. ಆ ಚಿತ್ರಕ್ಕೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ನಾಯಕಿ. ಜನನಾಥನ್ ನಿಧನಕ್ಕೆ ಟ್ವಿಟರ್ ಮೂಲಕ ಶ್ರುತಿ ಅವರು ಸಂತಾಪ ಸೂಚಿಸಿದ್ದಾರೆ.
‘ಭಾರವಾದ ಹೃದಯದಿಂದ ನಿಮಗೆ ನಾವು ವಿದಾಯ ಹೇಳುತ್ತಿದ್ದೇವೆ. ನಿಮ್ಮ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿತ್ತು. ನಿಮ್ಮನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ನಿಮ್ಮ ಕುಟುಂಬದವರಿಗೆ ನನ್ನ ಸಂತಾಪಗಳು’ ಎಂದು ಶ್ರುತಿ ಹಾಸನ್ ಟ್ವೀಟ್ ಮಾಡಿದ್ದಾರೆ.
It is with the heaviest Heart that We say good bye to #SPJananathan sir – it was a pleasure working with you sir Thankyou for your wisdom and kind words you will always be in my thoughts ! My deepest condolences to his family ? pic.twitter.com/Ox1Ag0EEYE
— shruti haasan (@shrutihaasan) March 14, 2021
ಸಂಗೀತ ನಿರ್ದೇಶಕ ಡಿ. ಇಮ್ಮಾನ್, ನಟ ಮೋಹನ್ ರಾಜ ಮುಂತಾದವರು ಜನನಾಥನ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ವಿಜಯ್ ಸೇತುಪತಿ, ಜಗಪತಿ ಬಾಬು, ಶ್ರುತಿ ಹಾಸನ್ ನಟನೆಯ ‘ಲಾಭಂ’ ಚಿತ್ರಕ್ಕೆ ಜನನಾಥನ್ ನಿರ್ದೇಶನ ಮಾಡುತ್ತಿದ್ದರು. ಆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದವು. ಚಿತ್ರ ಬಿಡುಗಡೆ ಆಗುವುದಕ್ಕೂ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ರೂಪದರ್ಶಿಯ ನಿಗೂಢ ಸಾವು: ಮಾಡಲಿಂಗ್ ಆಸೆಯೇ ಆ ವಿದ್ಯಾರ್ಥಿನಿಯ ಬದುಕಿಗೆ ಮುಳುವಾಯಿತಾ?