ತೆಲಂಗಾಣ ಸರ್ಕಾರದಿಂದ ‘ಕೆಜಿಎಫ್ 2’ಗೆ ಬಂಪರ್ ಆಫರ್; ಚಿತ್ರತಂಡ ಫುಲ್ ಖುಷ್
ತೆಲಂಗಾಣದಲ್ಲಿ ಟಿಕೆಟ್ ದರವನ್ನು ಮನಸೋ ಇಚ್ಛೆ ಏರಿಸಲು ಅವಕಾಶವಿಲ್ಲ. ಅಲ್ಲಿ ದರ ನಿಗದಿ ಮಾಡಲಾಗಿದೆ. ಆದರೆ, ‘ಕೆಜಿಎಫ್ 2’ ಸಿನಿಮಾಗೆ ಟಿಕೆಟ್ ದರ ಹೆಚ್ಚಿಸಲು ಅವಕಾಶ ನೀಡಲಾಗಿದೆ.
‘ಕೆಜಿಎಫ್ 2’ ಸಿನಿಮಾ (KGF Chapter 2) ತೆಲುಗು ನಾಡಿನಲ್ಲೂ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗುತ್ತಿದೆ. ಆಂಧ್ರದಲ್ಲಿ ಟಿಕೆಟ್ ದರದ ಗೊಂದಲಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ಮಧ್ಯೆ ತೆಲಂಗಾಣ ಸರ್ಕಾರದಿಂದ (Telangana Government) ‘ಕೆಜಿಎಫ್ 2’ಗೆ ಬಂಪರ್ ಆಫರ್ ಸಿಕ್ಕಿದೆ. ಸಿನಿಮಾ ಟಿಕೆಟ್ ದರ (Ticket Price) ಹೆಚ್ಚಿಸಲು ಅನುಮತಿ ನೀಡಿ ಸರ್ಕಾರದಿಂದ ಸುತ್ತೋಲೆ ಬಂದಿದೆ. ಇದರಿಂದ ಈ ಸಿನಿಮಾದ ಕಲೆಕ್ಷನ್ ಹೆಚ್ಚುವುದರಲ್ಲಿ ಯಾವುದೇ ಅನುಮಾನ ಇಲ್ಲ. ಸರ್ಕಾರ ಟಿಕೆಟ್ ದರ ಹೆಚ್ಚಿಸಲು ಅವಕಾಶ ನೀಡುವುದರ ಜತೆಗೆ ಕೆಲವು ಷರತ್ತುಗಳನ್ನು ಕೂಡ ವಿಧಿಸಿದೆ.
ತೆಲಂಗಾಣದಲ್ಲಿ ಟಿಕೆಟ್ ದರವನ್ನು ಮನಸೋ ಇಚ್ಛೆ ಏರಿಸಲು ಅವಕಾಶವಿಲ್ಲ. ಅಲ್ಲಿ ದರ ನಿಗದಿ ಮಾಡಲಾಗಿದೆ. ಈ ಮೊದಲು ತೆರೆಗೆ ಬಂದಿದ್ದ ಸಿನಿಮಾಗಳಿಗೆ ಟಿಕೆಟ್ ದರ ನಿಗದಿ ಮಾಡಲಾಗಿತ್ತು. ಮಲ್ಟಿಪ್ಲೆಕ್ಸ್ಗಳಲ್ಲಿ 200+ಜಿಎಸ್ಟಿ ಹಾಗೂ ಸಿಂಗಲ್ ಸ್ಕ್ರೀನ್ಗಳಲ್ಲಿ 150 ರೂಪಾಯಿ (ಜಿಎಸ್ಟಿ ಸಹಿತ) ನಿಗದಿ ಮಾಡಲು ಅವಕಾಶ ನೀಡಲಾಗಿತ್ತು. ಈಗ ತೆಲಂಗಾಣ ಸರ್ಕಾರ ‘ಕೆಜಿಎಫ್ 2’ಗೆ ವಿನಾಯಿತಿ ನೀಡಿ ಹೊಸ ಆದೇಶ ಹೊರಡಿಸಿದೆ.
ಈ ಆದೇಶದ ಅನ್ವಯ ‘ಕೆಜಿಎಫ್ 2’ ರಿಲೀಸ್ ಆದ ನಂತರ ನಾಲ್ಕು ದಿನಗಳ ಕಾಲ ಮಲ್ಟಿಪ್ಲೆಕ್ಸ್ಗಳಲ್ಲಿ 50 ರೂಪಾಯಿ ಹಾಗೂ ಸಿಂಗಲ್ ಸ್ಕ್ರೀನ್ಗಳಲ್ಲಿ 30 ರೂಪಾಯಿ ಟಿಕೆಟ್ ದರ ಹೆಚ್ಚಿಸಲು ಅವಕಾಶ ಇದೆ. ತೆಲಂಗಾಣದಲ್ಲಿ ಪ್ರತಿ ದಿನ ನಾಲ್ಕು ಶೋಗಳನ್ನು ಮಾತ್ರ ಮಾಡಲು ಅವಕಾಶ ಇತ್ತು. ಇದನ್ನು ಐದಕ್ಕೆ ಹೆಚ್ಚಿಸಲಾಗಿದೆ. ಇದರಿಂದ ‘ಕೆಜಿಎಫ್ 2’ ತಂಡದವರು ಖುಷಿಪಟ್ಟಿದ್ದಾರೆ.
#KGFChapter2 Permission Granted For 5 Shows per Day and Hike From Telangana Government
Official Press Release ?#KGF2onApr14 #KGF2 @TheNameIsYash
Bookings will Start From Evening ? pic.twitter.com/cwpnbKjWhz
— Telugu Yash Fans Clubᴷᴳᶠ²ᴬᴾᴿ¹⁴ (@YashTeluguFc) April 12, 2022
ಆಂಧ್ರದಲ್ಲಿ ಗೊಂದಲ:
ಸಿನಿಮಾ ಟಿಕೆಟ್ ದರದ ವಿಚಾರದಲ್ಲಿ ಆಂಧ್ರ ಪ್ರದೇಶ ಸರ್ಕಾರ ಹೊಸ ನಿಯಮ ಜಾರಿಗೆ ತಂದಿತ್ತು. ನಗರ ವ್ಯಾಪ್ತಿಯಲ್ಲಿ ಇರುವ ಮಲ್ಟಿಪ್ಲೆಕ್ಸ್ಗಳಿಗೆ ಟಿಕೆಟ್ ಮೊತ್ತ 75 ರೂಪಾಯಿ ಕನಿಷ್ಠ ಹಾಗೂ 250 ರೂಪಾಯಿ ಗರಿಷ್ಟ ಮೊತ್ತ ನಿಗದಿ ಮಾಡಲಾಗಿತ್ತು. ಎಸಿ ಹಾಗೂ ಎಸಿ ರಹಿತ ಚಿತ್ರಮಂದಿರಗಳ ಟಿಕೆಟ್ ದರ 20-100 ರೂ ಅಂತರದಲ್ಲಿ ಇರಬೇಕು ಎಂದು ಹೇಳಿತ್ತು. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದೊಡ್ಡ ಬಜೆಟ್ನ ಚಿತ್ರಗಳಿಗೆ ವಿನಾಯಿತಿ ನೀಡುವ ಬಗ್ಗೆ ಸರ್ಕಾರ ಘೋಷಿಸಿತ್ತು. ಜತೆಗೆ ಕೆಲ ಷರತ್ತುಗಳನ್ನು ಕೂಡ ವಿಧಿಸಿತ್ತು.
ಸಿನಿಮಾದ ಬಜೆಟ್ 100 ಕೋಟಿ ರೂಪಾಯಿ ದಾಟಿರಬೇಕು ಮತ್ತು ಸಿನಿಮಾದ ಶೇ.20 ಶೂಟಿಂಗ್ ಆಂಧ್ರ ಪ್ರದೇಶದಲ್ಲೇ ಆಗಿರಬೇಕು. ಹೀಗಿದ್ದರೆ ಮಾತ್ರ ಟಿಕೆಟ್ ದರ ಹೆಚ್ಚಿಸಿಕೊಳ್ಳಬಹುದು. ‘ಕೆಜಿಎಫ್ 2’ ಬಜೆಟ್ 100 ಕೋಟಿ ಮೇಲಿದೆ. ಆದರೆ, ಚಿತ್ರದ ಶೇ.20 ಶೂಟಿಂಗ್ ಆಂಧ್ರದಲ್ಲಿ ನಡೆದಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಸೂಕ್ತ ಸ್ಪಷ್ಟನೆ ಸಿಕ್ಕಿಲ್ಲ. ಈ ಕಾರಣಕ್ಕೆ ಸಿನಿಮಾದ ಟಿಕೆಟ್ ದರವನ್ನು ಹೆಚ್ಚಿಸುವಂತಿಲ್ಲ. ಇದಕ್ಕೆ ಸರ್ಕಾರ ವಿನಾಯಿತಿ ಕೊಡಲಿದೆಯೇ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ‘ಗಂಧದ ಗುಡಿ ಬಗ್ಗೆ ನೀವು ಟ್ವೀಟ್ ಮಾಡಬೇಕು’; ಪುನೀತ್ ಹೇಳಿದ ಮಾತು ನೆನಪಿಸಿಕೊಂಡ ಯಶ್
ಆನ್ಲೈನ್ ಟಿಕೆಟ್ ಬುಕಿಂಗ್ನಲ್ಲಿ ಧೂಳೆಬ್ಬಿಸಿದ ‘ಕೆಜಿಎಫ್: ಚಾಪ್ಟರ್ 2’; ಹಲವು ಶೋಗಳು ಸೋಲ್ಡ್ಔಟ್
Published On - 3:25 pm, Tue, 12 April 22