ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು ಕಿರುತೆರೆಯಲ್ಲೂ ಬ್ಯುಸಿ ಆಗಿದ್ದಾರೆ. ಜನಪ್ರಿಯ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮವನ್ನು ಅವರು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈಗ ಈ ಶೋನ 14ನೇ ಆವೃತ್ತಿ ನಡೆಯುತ್ತಿದೆ. ‘ಕೌನ್ ಬನೇಗಾ ಕರೋಡ್ಪತಿ’ (Kaun Banega Crorepati) ಕಾರ್ಯಕ್ರಮ ಎಂದರೆ ಅಲ್ಲಿ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಗಳು ಸಿಗುತ್ತವೆ. ವೀಕ್ಷಕರ ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಅಮಿತಾಭ್ ಬಚ್ಚನ್ ಅವರು ಈಗ ಸೈಫ್ ಅಲಿ ಖಾನ್ ತಂದೆ, ಮಾಜಿ ಕ್ರಿಕೆಟರ್ ಮನ್ಸೂರ್ ಅಲಿ ಖಾನ್ (Mansoor Ali Khan Pataudi) ಬಗ್ಗೆ ಒಂದು ಅಪರೂಪದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಕಷ್ಟಗಳನ್ನು ಎದುರಿಸಿ ನಿಂತು ಕ್ರಿಕೆಟ್ ಲೋಕದಲ್ಲಿ ವಿಶೇಷ ಸಾಧನೆ ಮಾಡಿದ ಮನ್ಸೂರ್ ಅಲಿ ಖಾನ್ ಅವರ ಸ್ಫೂರ್ತಿಯ ಕಥೆಯನ್ನು ವೀಕ್ಷಕರಿಗೆ ಬಿಗ್ ಬಿ ತಿಳಿಸಿಕೊಟ್ಟಿದ್ದಾರೆ.
ಭಾರತ ಕ್ರಿಕೆಟ್ ತಂಡದಲ್ಲಿ ಮನ್ಸೂರ್ ಅಲಿ ಖಾನ್ ಸಕ್ರಿಯರಾಗಿದ್ದರು. ಆದರೆ ಅಪಘಾತವೊಂದರಲ್ಲಿ ಅವರು ಒಂದು ಕಣ್ಣಿನ ದೃಷ್ಟಿಯನ್ನು ಬಹುತೇಕ ಕಳೆದುಕೊಳ್ಳಬೇಕಾಯಿತು. ಲೋಟಕ್ಕೆ ನೀರು ಹಾಕಿಕೊಳ್ಳುವುದು ಕೂಡ ಅವರಿಗೆ ಕಷ್ಟ ಆಗುತ್ತಿತ್ತು. ಅಂಥ ಸ್ಥಿತಿಯಲ್ಲೂ ಅವರು ಕುಗ್ಗಲಿಲ್ಲ. ಅವರ ಬಗ್ಗೆ ಕೌನ್ ಬನೇಗಾ ಕರೋಡ್ಪತಿ ವೇದಿಕೆಯಲ್ಲಿ ಅಮಿತಾಭ್ ಬಚ್ಚನ್ ಮಾತನಾಡಿದ್ದಾರೆ.
‘ಇಂಥ ಕಷ್ಟದ ಸಮಯದಲ್ಲಿ ತಮ್ಮ ಕ್ರಿಕೆಟ್ ಜೀವನ ಮುಗಿದುಹೋಯ್ತು ಎಂದುಕೊಂಡರು. ಆದರೆ ಪರಿಸ್ಥಿತಿಗೆ ಸವಾಲು ಹಾಕಿದ ಅವರು ಮತ್ತೆ ಕ್ರಿಕೆಟ್ ಆಡುವ ಸಾಮರ್ಥ್ಯ ಪಡೆದುಕೊಂಡರು. ಅಪಘಾತ ಸಂಭವಿಸಿ 6 ತಿಂಗಳು ಕಳೆಯುವುದರಲ್ಲಿ ಅವರು ಭಾರತ ಕ್ರಿಕೆಟ್ ತಂಡದ ಅತಿ ಕಿರಿಯ ಕ್ಯಾಪ್ಟನ್ ಆಗಿ ಆಯ್ಕೆಯಾದರು. ಅವರ ನಾಯಕತ್ವದಲ್ಲಿ ಭಾರತ ತಂಡ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಜಯ ಸಾಧಿಸಿತು’ ಎಂದಿದ್ದಾರೆ ಅಮಿತಾಭ್ ಬಚ್ಚನ್.
‘ನಿಮ್ಮ ಗುರಿ ನಿಮಗೆ ಸ್ಪಷ್ಟವಾಗಿದ್ದರೆ, ಜಗತ್ತಿನ ಯಾವ ಶಕ್ತಿ ಕೂಡ ನಿಮ್ಮನ್ನು ಅದರಿಂದ ದೂರ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮನ್ಸೂರ್ ಅಲಿ ಖಾನ್ ಅವರು ತೋರಿಸಿಕೊಟ್ಟಿದ್ದಾರೆ’ ಎಂದು ಹೊಗಳುವ ಮೂಲಕ ಬಿಗ್ ಬಿ ಚಪ್ಪಾಳೆ ತಟ್ಟಿದ್ದಾರೆ. ಈ ಪ್ರೋಮೋವನ್ನು ಸೋನಿ ವಾಹಿನಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಅಮಿತಾಭ್ ಬಚ್ಚನ್ ಅವರಿಗೆ ಈಗ 80 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಅವರು ನಟಿಸಿರುವ ‘ಊಂಚಾಯಿ’ ಸಿನಿಮಾ ನವೆಂಬರ್ 11ರಂದು ಬಿಡುಗಡೆಯಾಗಿ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಹಲವು ಸಿನಿಮಾ ಆಫರ್ಗಳು ಅವರ ಕೈಯಲ್ಲಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:23 am, Wed, 16 November 22