‘ಜೊತೆ ಜೊತೆಯಲಿ’ (Jothe Jotheyali Serial) ಧಾರಾವಾಹಿಯಲ್ಲಿ ಹಲವರ ಪಾಲಿಗೆ ಆರ್ಯವರ್ಧನ್ ನಿಧನ ಹೊಂದಿದ್ದಾನೆ. ಆದರೆ, ಅಸಲಿಗೆ ಆತ ಬದುಕಿದ್ದಾನೆ. ಸಂಜು ಆಗಿ ಹೊಸ ಆರ್ಯವರ್ಧನ್ ಮನೆಗೆ ಬಂದಿದ್ದಾನೆ. ಆತನ ತಾಯಿ ಪ್ರಿಯಾಗೆ ಮಾತ್ರ ಗೊತ್ತಿದೆ. ಈ ಕಾರಣಕ್ಕೆ ಮೊದಲಿನ ಘಟನೆ ನೆನಪಿಗೆ ಬರಲಿ ಎಂಬ ಕಾರಣಕ್ಕೆ ರಾಜ ನಂದಿನಿ (Raja Nandini) ನಿವಾಸಕ್ಕೆ ಸಂಜುನ ಕರೆದುಕೊಂಡು ಬರಲಾಗಿದೆ. ಈಗ ಧಾರಾವಾಹಿಗೆ ಮತ್ತೊಂದು ಟ್ವಿಸ್ಟ್ ಸಿಗುವ ಸೂಚನೆ ಸಿಕ್ಕಿದೆ. ಅನುನ ಕೊಲ್ಲೋಕೆ ಸುಪಾರಿ ಕೊಟ್ಟಿದ್ದಾನೆ ಝೇಂಡೆ. ಅನು ಜತೆಲ್ಲೇ ಇರುವ ಸಂಜು ಆಕೆಯನ್ನು ಕಾಪಾಡಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ.
ಆರ್ಯವರ್ಧನ್ನ ಅಸ್ಥಿ ಬಿಡೋಕೆ ಅನು ಹಾಗೂ ಕುಟುಂಬ ನದಿಯ ಅಂಚಿಗೆ ತೆರಳಿದೆ. ನದಿಯಲ್ಲಿ ಅಸ್ಥಿ ಬಿಡುವ ಸಂದರ್ಭದಲ್ಲಿ ಆಕೆಗೆ ಹಲವು ಆಲೋಚನೆಗಳು ಹಾಗೂ ನೆನಪುಗಳು ಕಾಡಿವೆ. ಆರ್ಯವರ್ಧನ್ ಜತೆ ಕಳೆದ ದಿನಗಳು ನೆನಪಿಗೆ ಬಂದಿದೆ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಗಂಡನನ್ನು ಕಳೆದುಕೊಂಡು ಅನು ಒಂಟಾಗಿಯಾಗಿದ್ದಾಳೆ. ಈ ಮಧ್ಯೆ ಅವಳ ಪ್ರಾಣಕ್ಕೆ ಕಂಟಕ ಆಗಿದೆ. ಆರ್ಯವರ್ಧನ್ ಆಪ್ತನಾಗಿದ್ದ ಝೇಂಡೆ ಸುಪಾರಿ ನೀಡಿದ್ದಾನೆ.
ಆರ್ಯವರ್ಧನ್ ಕಾರು ಅಪಘಾತಕ್ಕೆ ಕಾರಣ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಆರ್ಯವರ್ಧನ್ ಕಾರನ್ನು ಯಾರೋ ಬೆನ್ನತ್ತಿ ಹೋಗಿದ್ದರು ಎಂಬುದಷ್ಟೇ ತಿಳಿದಿದೆ. ಹೀಗಿರುವಾಗಲೇ ಕಾರು ಅಪಘಾತ ಆಗಿತ್ತು. ಈ ಸಂದರ್ಭದಲ್ಲಿ ಆರ್ಯವರ್ಧನ್ ಮೃತಪಟ್ಟಿದ್ದಾನೆ ಎಂದು ಭಾವಿಸಿದ್ದಾನೆ ಝೇಂಡೆ. ಹೀಗೆ ಕೊಲ್ಲಿಸಿದ್ದು ಅನು ಎಂಬುದು ಝೇಂಡೆಯ ಬಲವಾದ ನಂಬಿಕೆ. ಈ ಕಾರಣಕ್ಕೆ ಅನುನ ಕೊಲ್ಲಲು ಸಂಚು ಮಾಡಿದ್ದಾನೆ.
ಮೊದಲು ಅನುನ ಜೈಲಿಗೆ ಕಳುಹಿಸಲು ಆತ ಪ್ಲ್ಯಾನ್ ಮಾಡಿದ್ದ. ಪೊಲೀಸರು ಅನುನ ಅರೆಸ್ಟ್ ಕೂಡ ಮಾಡಿದ್ದರು. ಆದರೆ, ಕೆಲವೇ ಕ್ಷಣಗಳಲ್ಲಿ ಜಾಮೀನು ಸಿಕ್ಕಿತ್ತು. ಈ ಕಾರಣಕ್ಕೆ ಆಕೆ ಜೈಲಿನಿಂದ ಹೊರ ಬಂದಿದ್ದಳು. ಆದರೆ, ಝೇಂಡೆಯ ದ್ವೇಷ ಕಡಿಮೆ ಆಗಿಲ್ಲ. ಹೀಗಾಗಿ, ಆಕೆಯನ್ನು ಕೊಲ್ಲಲೇಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾನೆ. ಹೀಗಾಗಿ, ಅನುನ ಹತ್ಯೆ ಮಾಡೋಕೆ ಸುಪಾರಿ ನೀಡಿದ್ದಾನೆ ಝೇಂಡೆ.
ಆರ್ಯವರ್ಧನ್ನ ಅಸ್ಥಿ ಬಿಡೋಕೆ ಅನು ಕುಟುಂಬದ ಜತೆ ನದಿ ಪಕ್ಕಕ್ಕೆ ತೆರಳಿದ್ದಾಳೆ. ಈ ಸಂದರ್ಭದಲ್ಲಿ ಆಕೆಯನ್ನು ನೀರಿಗೆ ತಳ್ಳುವಂತೆ ಸುಪಾರಿ ಕಿಲ್ಲರ್ಗೆ ಝೇಂಡೆ ಸೂಚಿಸಿದ್ದಾನೆ. ಅಷ್ಟೇ ಅಲ್ಲ, ಇದು ಅಪಘಾತ ಎಂಬ ರೀತಿ ಕಾಣಬೇಕು ಎಂಬುದು ಆತನ ಕಟ್ಟಾಜ್ಞೆ. ಇತ್ತ ಅಸ್ಥಿ ಬಿಡುವ ಜಾಗದಲ್ಲಿ ಅನು ಒಂದೇ ಸಮನೆ ಅಳುತ್ತಿದ್ದಾಳೆ. ಆಕೆಯ ಕಣ್ಣೀರು ನೋಡಿ ಸಂಜುಗೆ ಮರುಕ ಉಂಟಾಗಿದೆ. ಯಾರಾದರೂ ಆಕೆಯನ್ನು ಸಮಾಧಾನ ಮಾಡಬಹುದಿತ್ತು ಎಂದು ಆತನ ಮನಸ್ಸಿನಲ್ಲೇ ಅಂದುಕೊಂಡಿದ್ದಾನೆ.
ಒಂದೊಮ್ಮೆ ಸುಪಾರಿ ಕಿಲ್ಲರ್ ಅನುನ ನದಿಗೆ ದೂಡಿದರೆ ಆಕೆಯನ್ನು ಸಂಜು ರಕ್ಷಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಆಕೆಯನ್ನು ಸಂಜು ಸೇವ್ ಮಾಡಿದರೆ ಇಬ್ಬರ ನಡುವೆ ಆಪ್ತತೆ ಬೆಳೆಯಲಿದೆ. ಸಂಜುಗೆ ತಾನೇ ಆರ್ಯವರ್ಧನ್ ಎಂಬ ಹಳೆಯ ನೆನಪು ಮರಳಿ ಬರಹುದು. ಈ ಎಲ್ಲಾ ಕಾರಣದಿಂದ ಝೇಂಡೆ ಕೊಟ್ಟ ಸುಪಾರಿ ಧಾರಾವಾಹಿಗೆ ಬಹಳ ಮಹತ್ವದ ತಿರುವು ಸಿಗುವ ಸಾಧ್ಯತೆ ಇದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಮಾನ್ಸಿಗೆ ಬಂದಿದೆ ಅನುಮಾನ
ಅನು ಅಳುತ್ತಿರುವುದನ್ನು ಸಂಜು ಒಂದೇ ಸಮನೆ ನೋಡುತ್ತಲೇ ಇದ್ದ. ಇದನ್ನು ನೋಡಿದ ಮಾನ್ಸಿಗೆ ಸಾಕಷ್ಟು ಅನುಮಾನ ಮೂಡಿದೆ. ‘ಸಂಜು ಯಾಕೆ ಅನುನ ಈ ರೀತಿ ನೋಡುತ್ತಿದ್ದಾರೆ’ ಎಂದು ತನಗೆ ತಾನೇ ಪ್ರಶ್ನೆ ಮಾಡಿಕೊಂಡಿದ್ದಾಳೆ. ಸಂಜು ಬಗ್ಗೆ ಆಕೆಗೆ ಸಾಕಷ್ಟು ಅನುಮಾನ ಮೂಡಿದೆ.
ಶ್ರೀಲಕ್ಷ್ಮಿ ಎಚ್.