ಸುದೀಪ್ ಮಾತಿಗೂ ಬೆಲೆ ಕೊಡದ ಜಾಹ್ನವಿ, ಅಶ್ವಿನಿ ಗೌಡ: ಮನೆ ದಾರಿ ನೆನಪಿಸಿದ ಬಿಗ್ ಬಾಸ್
ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ನೀಡಿದ ಸೂಚನೆಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಅವರು ಸುದೀಪ್ ಮಾತಿಗೆ ಈ ವಾರ ಕಿಂಚಿತ್ತೂ ಬೆಲೆ ಕೊಟ್ಟಿಲ್ಲ. ಸುದೀಪ್ ನೀಡಿದ್ದ ಎಚ್ಚರಿಕೆಯನ್ನೂ ಮೀರಿ ಅವರಿಬ್ಬರು ಮನೆಯ ನಿಯಮ ಉಲ್ಲಂಘನೆ ಮಾಡಿದ್ದಾರೆ.

ಬಿಗ್ ಬಾಸ್ ಆಟದಲ್ಲಿ ಕೆಲವು ಮೂಲ ನಿಮಯಗಳು ಇವೆ. ಅವುಗಳನ್ನು ಉಲ್ಲಂಘನೆ ಮಾಡಿದರೆ ಖಂಡಿತಾ ಶಿಕ್ಷೆ ಆಗುತ್ತದೆ. ಅಲ್ಲದೇ, ಕಿಚ್ಚ ಸುದೀಪ್ ಕೂಡ ಸ್ಪರ್ಧಿಗಳಿಗೆ ಆಗಾಗ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ. ಹಾಗಿದ್ದರೂ ಕೆಲವರು ಬುದ್ಧಿ ಕಲಿಯುವುದಿಲ್ಲ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಅಶ್ವಿನಿ ಗೌಡ ಮತ್ತು ಜಾಹ್ನವಿ (Jahnavi) ಅವರು ಅತಿರೇಕದ ವರ್ತನೆ ತೋರಿದ್ದಾರೆ. ಕಿಚ್ಚ ಸುದೀಪ್ ಅವರ ಮಾತಿಗೂ ಅವರು ಬೆಲೆ ಕೊಟ್ಟಿಲ್ಲ. ತಾವು ಮಾಡಿದ ತಪ್ಪು ಏನು ಎಂಬುದನ್ನು ಇಡೀ ಮನೆಯ ಎದುರು ವಿಡಿಯೋ ಸಮೇತ ತೋರಿಸಿದಾಗಲೂ ಜಾಹ್ನವಿ ಮತ್ತು ಅಶ್ವಿನಿ ಗೌಡ (Ashwini Gowda) ನಗುತ್ತಿದ್ದರು! ಅವರಿಬ್ಬರ ಈ ಉದ್ಧಟತನಕ್ಕೆ ಬಿಗ್ ಬಾಸ್ ಕಠಿಣ ಶಿಕ್ಷೆ ನೀಡಿದ್ದಾರೆ.
ಬಿಗ್ ಬಾಸ್ ಮನೆಯ ಒಳಗೆ ಯಾರೂ ಕೂಡ ಪಿಸುಧ್ವನಿಯಲ್ಲಿ ಮಾತನಾಡುವಂತಿಲ್ಲ. ಆದರೆ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ಆರಂಭದಿಂದಲೂ ಈ ನಿಯಮವನ್ನು ಮುರಿಯುತ್ತಿದ್ದಾರೆ. ಡ್ರೆಸಿಂಗ್ ರೂಮ್ಗೆ ತೆರಳಿ, ಮೈಕ್ ಇಲ್ಲದೇ ಮಾತನಾಡಿದ್ದು ಕೂಡ ಅವರಿಂದಲೇ ಬಯಲಾಗಿತ್ತು. ಈಗ ಅವರು ಮತ್ತೆ ಡ್ರೆಸಿಂಗ್ ರೂಮ್ಗೆ ತೆರಳಿ ಪಿಸುದನಿಯಲ್ಲಿ ಮಾತನಾಡಿದ್ದಾರೆ.
ಡ್ರೆಸಿಂಗ್ ರೂಮ್ಗೆ ಹೋಗಿ ಪಿಸುದನಿಯಲ್ಲಿ ಮಾತನಾಡುವಂತಿಲ್ಲ ಎಂದು ಕಿಚ್ಚ ಸುದೀಪ್ ಅವರು ಕಳೆದ ವಾರಾಂತ್ಯದ ಸಂಚಿಕೆಯಲ್ಲಿ ಎಚ್ಚರಿಕೆ ನೀಡಿದ್ದರು. ಆದರೆ ಅದಕ್ಕೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ಕಿಂಚಿತ್ತೂ ಬೆಲೆ ಕೊಟ್ಟಿಲ್ಲ. ಅದರಿಂದ ಬಿಗ್ ಬಾಸ್ ಕೋಪಗೊಂಡರು. ‘50 ದಿನ ಕಳೆದರೂ ಸದಸ್ಯರು ಮನೆಯ ನಿಯಮ ಮುರಿಯುತ್ತಿದ್ದಾರೆ. ಕಿಚ್ಚ ಸುದೀಪ್ ನೀಡಿದ ಎಚ್ಚರಿಕೆ ಮೀರಿಯೂ ಮತ್ತೆ ಪಿಸುದನಿಯಲ್ಲಿ ಮಾತನಾಡಿದ್ದಾರೆ’ ಎಂದು ಬಿಗ್ ಬಾಸ್ ಹೇಳಿದರು.
ತಪ್ಪು ಮಾಡಿದ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರ ವಿಡಿಯೋ ಪ್ರದರ್ಶಿಸಲಾಯಿತು. ಆ ವಿಡಿಯೋ ಪ್ಲೇ ಆಗುವಾಗಲೂ ಅಶ್ವಿನಿ ಗೌಡ ಮತ್ತು ಜಾಹ್ನವಿ ನಗುತ್ತಿದ್ದರು. ಅವರ ಮುಖದಲ್ಲಿ ತಪ್ಪು ಮಾಡಿದ ಭಾವನೆಯೇ ಕಾಣುತ್ತಿರಲಿಲ್ಲ. ಇದರಿಂದ ಬಿಗ್ ಬಾಸ್ ಇನ್ನಷ್ಟು ಅಸಮಾಧಾನಗೊಂಡರು. ‘ಈ ತಪ್ಪು ಮಾಡಿದ್ದಕ್ಕೆ ಹಾಗೂ ಉದ್ದಟತನ ತೋರಿದ್ದಕ್ಕೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ’ ಎಂದು ಬಿಗ್ ಬಾಸ್ ಘೋಷಿಸಿದರು.
ಇದನ್ನೂ ಓದಿ: ಯೋಗ್ಯತೆ ಇಲ್ಲದೇ ಬಿಗ್ ಬಾಸ್ ಮನೆ ಒಳಗೆ ಇರುವ ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಕಡೆಯಿಂದ ಇಷ್ಟು ದೊಡ್ಡ ಶಿಕ್ಷೆ ಸಿಗುತ್ತದೆ ಎಂದು ಪ್ರಾಯಶಃ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ಊಹಿಸಿರಲಿಲ್ಲ. ನೇರವಾಗಿ ನಾಮಿನೇಟ್ ಆದ ಬಳಿಕ ಅವರಿಗೆ ಬಿಸಿ ತಟ್ಟಿತು. ಕ್ಯಾಮೆರಾ ಎದುರು ಬಂದು ಬಿಗ್ ಬಾಸ್ ಬಳಿ ಅವರು ಮನವಿ ಮಾಡಿಕೊಂಡರು. ದಯವಿಟ್ಟು ಕ್ಷಮಿಸಿ ಎಂದರು. ಕಿಚ್ಚ ಸುದೀಪ್ ಅವರಿಗೂ ಕ್ಷಮೆ ಕೇಳಿದರು. ಆದರೆ ಅದಕ್ಕೆ ಬಿಗ್ ಬಾಸ್ ಕಡೆಯಿಂದ ಪ್ರತಿಕ್ರಿಯೆ ಬರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




