20 ಲಕ್ಷ ರೂಪಾಯಿ ಆಮಿಷಕ್ಕೂ ಬದಲಾಗಲಿಲ್ಲ ಬಿಗ್ ಬಾಸ್ ಫೈನಲಿಸ್ಟ್ಗಳ ನಿಯತ್ತು
ಬಿಗ್ ಬಾಸ್ ಆಟದಲ್ಲಿ ಹಲವು ಟ್ವಿಸ್ಟ್ಗಳು ಎದುರಾಗುತ್ತವೆ. ಈ ಬಾರಿ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಅವರು ಒಂದು ದೊಡ್ಡ ಟ್ವಿಸ್ಟ್ ಕೊಟ್ಟರು. 5 ಫೈನಲಿಸ್ಟ್ಗಳಿಗೆ ಒಂದು ಆಫರ್ ಕೊಡಲಾಯಿತು. 20 ಲಕ್ಷ ರೂಪಾಯಿ ತೆಗೆದುಕೊಂಡು ಆಟವನ್ನು ಅರ್ಧಕ್ಕೆ ನಿಲ್ಲಿಸಬಹುದು ಎಂದು ಹೇಳಲಾಯಿತು. ಆದರೆ ಈ ಆಮಿಷಕ್ಕೆ ಯಾರೂ ಬಲಿ ಆಗಲಿಲ್ಲ.
ಬಿಗ್ ಬಾಸ್ ಎಂಬುದು ಕೇವಲ ಟಾಸ್ಕ್ಗಳ ಆಟ ಅಲ್ಲ. ಅದು ವ್ಯಕ್ತಿತ್ವದ ಆಟ ಕೂಡ ಹೌದು. ನೋಡನೋಡುತ್ತಿದ್ದಂತೆಯೇ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನ ಫಿನಾಲೆ ಬಂದಿದೆ. ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ, ರಜತ್, ಮೋಕ್ಷಿತಾ ಪೈ ಅವರು ಫಿನಾಲೆ ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದರು. ಆಗ ಕಿಚ್ಚ ಸುದೀಪ್ ಅವರು ಒಂದು ಬಂಪರ್ ಆಫರ್ ನೀಡಿದರು. ಸೂಟ್ ಕೇಸ್ ತುಂಬ ಹಣ ನೀಡಿ, ಅದನ್ನು ತೆಗೆದುಕೊಂಡವರು ನೇರವಾಗಿ ಮನೆಗೆ ಹೋಗಬಹುದು ಎಂದು ಹೇಳಿದರೆ. ಆದರೆ ಈ ಅವಕಾಶವನ್ನು ಯಾರೂ ಕೂಡ ಸ್ವೀಕರಿಸಲಿಲ್ಲ.
ಎಲ್ಲರಿಗೂ ದುಡ್ಡಿನ ಅನಿವಾರ್ಯತೆ ಇರುತ್ತದೆ. ಗೆಲ್ಲುವ ಸ್ಪರ್ಧಿಗೆ 50 ಲಕ್ಷ ರೂಪಾಯಿ ಸಿಗುತ್ತದೆ. ಆದರೆ 5ನೇ ಸ್ಥಾನದಲ್ಲಿ ಔಟ್ ಆಗುವವರಿಗೆ ಅಷ್ಟು ಹಣ ಸಿಗುವುದಿಲ್ಲ. ಅದರ ಬದಲು 20 ಲಕ್ಷ ರೂಪಾಯಿ ಪಡೆದು ಅರ್ಧಕ್ಕೆ ಆಟವನ್ನು ನಿಲ್ಲಿಸುವುದು ಕೂಡ ಉತ್ತಮ ಅವಕಾಶ ಆಗಿತ್ತು. ಆದರೆ ವ್ಯಕ್ತಿತ್ವದ ಆಟ ಆದ್ದರಿಂದ ಯಾರೂ ಕೂಡ ಆ ನಿರ್ಧಾರಕ್ಕೆ ಬರಲಿಲ್ಲ. ಎಲ್ಲರೂ ದುಡ್ಡನ್ನು ತಿರಸ್ಕರಿಸಿದರು.
‘ಈ ರೀತಿಯಾಗಿ ಕೋಟಿ ರೂಪಾಯಿ ಕೊಟ್ಟರೂ ಕೂಡ ನಮಗೆ ಇದು ಬೇಡ’ ಎಂದು ಎಲ್ಲ ಸ್ಪರ್ಧಿಗಳು ಹೇಳಿದರು. ಹಾಗಾಗಿ 20 ಲಕ್ಷ ರೂಪಾಯಿಯನ್ನು ವಾಪಸ್ ತೆಗೆದುಕೊಳ್ಳಲಾಯಿತು. ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್, ರಜತ್, ಹನುಮಂತ ಅವರ ಈ ನಿರ್ಧಾರವನ್ನು ಕಿಚ್ಚ ಸುದೀಪ್ ಅವರು ಸಿಕ್ಕಾಪಟ್ಟೆ ಮೆಚ್ಚಿಕೊಂಡರು. ಹಣಕ್ಕಿಂತ ಆಟವೇ ಮುಖ್ಯ ಎಂದು ಹೇಳಿದ ಈ ಫೈನಲಿಸ್ಟ್ಗಳು ಪ್ರೇಕ್ಷಕರ ಮನಸ್ಸನ್ನು ಕೂಡ ಗೆದ್ದರು.
ಇದನ್ನೂ ಓದಿ: ಭಾವನೆಗೆ ಸೋತು ಬಿಗ್ ಬಾಸ್ ಟ್ರೋಫಿ ಕಳೆದುಕೊಂಡ ಉಗ್ರಂ ಮಂಜು
ಆ ಬಳಿಕ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಉಗ್ರಂ ಮಂಜು ಅವರು ಔಟ್ ಆದರು. ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂಬ ಆಸೆ ಇಟ್ಟುಕೊಂಡಿದ್ದ ಅವರಿಗೆ ನಿರಾಸೆ ಆಯಿತು. ಆದರೆ 20 ಲಕ್ಷ ರೂಪಾಯಿ ಸಿಗಲಿಲ್ಲ ಎಂಬ ವಿಷಾದ ಅವರಿಗೆ ಇರಲಿಲ್ಲ. ಕಿಚ್ಚ ಸುದೀಪ್ ಅವರ ಜೊತೆ ವೇದಿಕೆಯಲ್ಲಿ ನಿಂತು ಮಾತನಾಡಿದ್ದು, ಅವರ ಜೊತೆ ಸಿನಿಮಾ ಮಾಡಿದ್ದೇ ನಿಜವಾದ ಗೆಲುವು ಎಂದು ಉಗ್ರಂ ಮಂಜು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.