ಗಿಲ್ಲಿಯ ನೆರಳಿನಲ್ಲಿ ಅಲ್ಲ ಸ್ವಂತ ಬಲದಲ್ಲಿ ಫಿನಾಲೆಗೆ ಬಂದಿದ್ದ ಕಾವ್ಯಾ ಈಗ ಹೊರಗೆ
Bigg Boss Kannada 12: ಗಿಲ್ಲಿಯ ನೆರಳಲ್ಲೇ ಇರುತ್ತಾಳೆ, ಸ್ವಂತ ಬಲದಲ್ಲಿ ಆಡುವುದಿಲ್ಲ, ಸ್ವಂತ ಶಕ್ತಿ, ಪ್ರತಿಭೆ ಇಲ್ಲ ಎಂದು ಪದೇ ಪದೇ ಟೀಕೆಗೆ ಒಳಗಾಗುತ್ತಲೇ ಇದ್ದ ಕಾವ್ಯಾ ಸ್ವಂತ ಬಲದಲ್ಲಿ ಆಡಿ ಫಿನಾಲೆ ವರೆಗೆ ಬಂದಿದ್ದರು, ಮಾತ್ರವಲ್ಲದೆ ಇದೀಗ ಈ ಸೀಸನ್ನ ಮೂರನೇ ರನ್ನರ್ ಅಪ್ ಸಹ ಆಗಿದ್ದಾರೆ ಕಾವ್ಯಾ. ನಟಿಯ ಬಿಗ್ಬಾಸ್ ಜರ್ನಿ ಹೇಗಿತ್ತು? ಇಲ್ಲಿದೆ ಮಾಹಿತಿ...

ಬಿಗ್ಬಾಸ್ (Bigg Boss) ಕನ್ನಡ ಫಿನಾಲೆ ಚಾಲ್ತಿಯಲ್ಲಿದೆ. ಸಮಯ ಕಳೆದಂತೆ ವಿನ್ನರ್ ಯಾರಾಗಬಹುದು ಎಂಬ ಕುತೂಹಲ ಹೆಚ್ಚಾಗುತ್ತಿದೆ. ಗಿಲ್ಲಿ, ಅಶ್ವಿನಿ, ಧನುಶ್, ರಘು, ರಕ್ಷಿತಾ, ಕಾವ್ಯಾ ಆರು ಮಂದಿ ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಈಗಾಗಲೇ ಧನುಶ್ ಮತ್ತು ರಘು ಅವರು ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಇದೀಗ ಕಾವ್ಯಾ ಅವರು ಸಹ ಬಿಗ್ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಕಾವ್ಯಾ ಅವರು ಮೂರನೇ ರನ್ನರ್ ಅಪ್ ಆಗಿ ಹೊರಗೆ ಬಂದಿದ್ದಾರೆ.
ಗಿಲ್ಲಿ ಜೊತೆಗೆ ಜೋಡಿಯಾಗಿ ಬಿಗ್ಬಾಸ್ ಮನೆ ಒಳಗೆ ಹೋದ ಕಾವ್ಯಾ ಮೊದಲ ದಿನದಂದ ಕೊನೆಯ ವಾರದ ವರೆಗೆ ಗಿಲ್ಲಿ ಜೊತೆ ಒಳ್ಳೆಯ ಗೆಳೆತನ ಕಾಯ್ದುಕೊಂಡಿದ್ದರು. ಗಿಲ್ಲಿ ಮತ್ತು ಕಾವ್ಯಾ ಅವರ ಗೆಳೆತನ ರಾಜ್ಯದಾದ್ಯಂತ ಜನಪ್ರಿಯ ಆಗಿಬಿಟ್ಟಿದೆ. ಅವರಿಬ್ಬರ ತಮಾಷೆ, ಪರಸ್ಪರ ಕಾಲೆಳೆಯುವ ರೀತಿ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ ಇದೇ ಕೆಲವೊಮ್ಮೆ ಕಾವ್ಯಾಗೆ ನೆಗೆಟಿವ್ ಆಗಿದ್ದೂ ಉಂಟು. ಗಿಲ್ಲಿ ಇಂದ ಮಾತ್ರವೇ ಕಾವ್ಯಾಗೆ ಹೆಸರು, ಗಿಲ್ಲಿ ಇಲ್ಲದ ಹೊರತು ಕಾವ್ಯಾ ಏನೂ ಅಲ್ಲ ಎಂಬ ಅಭಿಪ್ರಾಯ ಮನೆಯಲ್ಲಿ ಉಂಟಾಗಿತ್ತು.
ಇದನ್ನೂ ಓದಿ:ಬಲಿಷ್ಠ ದೇಹ, ಮಗುವಿನ ಮನಸ್ಸು, ಶಿಸ್ತಿನ ಆಟ: ಆದರೆ ಅಷ್ಟೇ ಸಾಕಾಗಲಿಲ್ಲ ಗೆಲ್ಲಲು
ಆದರೆ ಕಾವ್ಯಾ ತಮ್ಮ ಸ್ವಂತ ಶಕ್ತಿಯ ಪ್ರದರ್ಶಿಸುತ್ತಲೇ ಬಂದರು. ಅವಕಾಶ ಸಿಕ್ಕಾಗೆಲ್ಲ ಟಾಸ್ಕ್ಗಳಲ್ಲಿ ಒಳ್ಳೆಯ ಪ್ರದರ್ಶನವನ್ನು ಸಹ ನೀಡಿದರು. ಜೊತೆಗೆ ಗಿಲ್ಲಿಯ ಜೊತೆಗೆ ಸ್ನೇಹ ಕಾಯ್ದುಕೊಳ್ಳುವ ಜೊತೆಗೆ ಗಿಲ್ಲಿಯ ಆಟವನ್ನು, ವ್ಯಕ್ತಿತ್ವವನ್ನೂ ಸಹ ತಿದ್ದುವ ಕಾರ್ಯ ಮಾಡಿದರು. ಕಾವ್ಯಾ ಮನೆಗೆ ಹೋಗುತ್ತಾರೆ ಎಂದು ಹೇಳಿದವರೆಲ್ಲ ಮನೆಗೆ ಹೋಗಿ ಎಷ್ಟೋ ವಾರಗಳ ಬಳಿಕ ಇದೀಗ ಕಾವ್ಯಾ ಫಿನಾಲೆ ವರೆಗೆ ಬಂದಿದ್ದು ಮಾತ್ರವೇ ಅಲ್ಲದೆ, ಮೂರನೇ ರನ್ನರ್ ಅಪ್ ಸಹ ಆಗಿದ್ದಾರೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಬಿಗ್ಬಾಸ್ ಮನೆಗೆ ಹೋಗಿ ನಾಲ್ಕನೇ ಸ್ಪರ್ಧಿಯನ್ನು ಕರೆದುಕೊಂಡು ಬರಲು ಬಂದಿದ್ದರು. ಸೂಟ್ಕೇಸ್ ಜೊತೆಗೆ ಬಂದಿದ್ದ ಅವರು ಐದು ಲಕ್ಷ ರೂಪಾಯಿ ಹಣದ ಆಸೆಯನ್ನು ಸಹ ತೋರಿಸಿದರು. ಆದರೆ ರಕ್ಷಿತಾ ಆಗಲಿ, ಕಾವ್ಯಾ ಆಗಲಿ ಯಾರೂ ಸಹ ಹಣ ಪಡೆದುಕೊಳ್ಳಲು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಆಕ್ಟಿವಿಟಿ ರೂಂನಲ್ಲಿ ನಡೆದ ಆಕ್ಟಿವಿಟಿಯಲ್ಲಿ ಕಾವ್ಯಾ ಅವರು ಎವಿಕ್ಷನ್ ಆದರು. ಕಾವ್ಯಾ ಅವರಿಗೆ ಇಂಡಸ್ 555 ಸಂಸ್ಥೆಯಿಂದ ಹತ್ತು ಲಕ್ಷ ರೂಪಾಯಿ ನಗದು ಬಹುಮಾನ ಸಹ ನೀಡಲಾಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




