‘ಜಗದೀಶ್, ರಂಜಿತ್ ಈ ಕೂಡಲೇ ಮನೆಯಿಂದ ಹೊರಗೆ ಬನ್ನಿ’: ಬಿಗ್ ಬಾಸ್ ಆದೇಶ
ಬಿಗ್ ಬಾಸ್ ಮನೆಯ ಪರಿಸ್ಥಿತಿ ಕೈ ಮೀರಿ ಹೋಗಿದೆ. ಸ್ವತಃ ಬಿಗ್ ಬಾಸ್ ಮಾತುಗಳಿಗೂ ಕೆಲವು ಸ್ಪರ್ಧಿಗಳು ಗೌರವ ನೀಡಿಲ್ಲ. ಜಗದೀಶ್ ಮತ್ತು ರಂಜಿತ್ ಈ ಕೂಡಲೇ ಮನೆಯಿಂದ ಹೊರಗೆ ಹೋಗಬೇಕು ಎಂದು ಸೂಚನೆ ನೀಡಲಾಗಿದೆ. ಇಷ್ಟಕ್ಕೆಲ್ಲ ಕಾರಣ ಆಗಿರುವುದು ಜಗದೀಶ್ ಆಡಿದ ಕೆಲವು ಅಶ್ಲೀಲ ಮಾತುಗಳು. ಇಡೀ ಮನೆಯಲ್ಲಿ ಜಗದೀಶ್ ಅಶಾಂತಿ ಸೃಷ್ಟಿಸಿದ್ದಾರೆ.
ಈ ಹಿಂದಿನ ಸೀಸನ್ಗಳಿಗಿಂತಲೂ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಹೆಚ್ಚು ವಿವಾದಕ್ಕೆ ಕಾರಣ ಆಗುತ್ತಿದೆ. ಹೊರಜಗತ್ತಿನಲ್ಲಿ ಹಲವು ಬಗೆಯ ಕಾಂಟ್ರವರ್ಸಿ ಮಾಡಿಕೊಂಡ ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಮನೆಯೊಳಗೆ ಕೆಟ್ಟ ಮಾತುಗಳನ್ನು ಆಡುವ ಮೂಲಕ ಕಿಚ್ಚು ಹಚ್ಚಿದ್ದಾರೆ. ದೊಡ್ಮನೆಯಲ್ಲಿ ಇರುವ ಹೆಣ್ಣು ಮಕ್ಕಳ ಬಗ್ಗೆ ಅವರು ಕೀಳಾಗಿ ಮಾತನಾಡಿದ್ದಾರೆ. ಇದನ್ನು ಇನ್ನುಳಿದ ಎಲ್ಲ ಸದಸ್ಯರು ಖಂಡಿಸಿದ್ದಾರೆ. ಈ ಬಗ್ಗೆ ವಾದ ನಡೆಯುವಾಗ ರಂಜಿತ್ ಅವರು ಜಗದೀಶ್ ಮೇಲೆ ಕೈ ಮಾಡಿದ್ದಾರೆ. ಇದರಿಂದ ಬಿಗ್ ಬಾಸ್ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.
ಗುರುವಾರದ (ಅಕ್ಟೋಬರ್ 17) ಸಂಚಿಕೆಯಲ್ಲಿ ಜಗದೀಶ್ ಮತ್ತು ಗೋಲ್ಡ್ ಸುರೇಶ್ ಮಾತನಾಡುತ್ತ ಕುಳಿತಿದ್ದರು. ಆಗ ಹಂಸಾ ಬಗ್ಗೆ ಜಗದೀಶ್ ಅವರು ಒಂದಷ್ಟು ಆರೋಪಗಳನ್ನು ಮಾಡಿದರು. ಮಾತಿನ ಭರದಲ್ಲಿ ಹಂಸಾ ಬಗ್ಗೆ ಜಗದೀಶ್ ಅಸಭ್ಯ ಪದ ಬಳಕೆ ಮಾಡಿದ್ದಾರೆ. ಇದನ್ನು ಗೋಲ್ಡ್ ಸುರೇಶ್ ಅವರು ಕೂಡಲೇ ಖಂಡಿಸಿದ್ದಾರೆ. ಅಲ್ಲಿಂದ ದೊಡ್ಡ ಜಗಳ ಶುರುವಾಗಿದೆ.
ಜಗದೀಶ್ ತುಂಬ ಕೆಟ್ಟ ಮಾತುಗಳನ್ನು ಆಡಿದ್ದರಿಂದ ಇಡೀ ಮನೆಯೇ ಅವರ ವಿರುದ್ಧ ತಿರುಗಿ ಬಿದ್ದಿದೆ. ಚೈತ್ರಾ ಕುಂದಾಪುರ, ಮಾನಸಾ, ಭವ್ಯಾ ಗೌಡ, ಗೌತಮಿ ಜಾದವ್, ಮೋಕ್ಷಿತಾ ಪೈ, ತ್ರಿವಿಕ್ರಮ್, ರಂಜಿತ್, ಉಗ್ರಂ ಮಂಜು ಮುಂತಾದವರು ಜಗದೀಶ್ಗೆ ಪಾಠ ಕಲಿಸಲು ಮುಂದಾಗಿದ್ದಾರೆ. ಈ ವೇಳೆ ಚೈತ್ರಾ ಕುಂದಾಪುರ ಅವರ ವೈಯಕ್ತಿಕ ವಿಚಾರಗಳನ್ನು ಕೂಡ ಜಗದೀಶ್ ಎಳೆದು ತಂದಿದ್ದಾರೆ. ಜಗಳ ನಿಲ್ಲಿಸುವಂತೆ ಸ್ವತಃ ಬಿಗ್ ಬಾಸ್ ಆದೇಶ ನೀಡಿದರೂ ಕೂಡ ಅದಕ್ಕೆ ಕೆಲವರು ಬೆಲೆ ನೀಡಲಿಲ್ಲ.
ಇದನ್ನೂ ಓದಿ: ಜಗದೀಶ್ಗೆ ಸೀರೆ ಕೊಡೋಕೆ ಮುಂದಾದ ಮನೆ ಮಂದಿ; ಹೆಂಗಸಾಗೋಕೂ ಯೋಗ್ಯತೆ ಇಲ್ಲ ಎಂದ ಹಂಸಾ
ಹೆಣ್ಮಕ್ಕಳ ಬಗ್ಗೆ ಜಗದೀಶ್ ಆಡಿದ ಮಾತುಗಳನ್ನು ಖಂಡಿತಾ ಸಹಿಸಲು ಸಾಧ್ಯವಿಲ್ಲ ಎಂದು ಬಿಗ್ ಬಾಸ್ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೇ, ಜಗದೀಶ್ ಮೇಲೆ ಕೈ ಮಾಡಿದ್ದಕ್ಕಾಗಿ ರಂಜಿತ್ ಅವರ ಮೇಲೂ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ‘ಜಗದೀಶ್ ಹಾಗೂ ರಂಜಿತ್ ಈ ಕೂಡಲೇ ಮನೆಯಿಂದ ಹೊರಗೆ ಬನ್ನಿ’ ಎಂದು ಬಿಗ್ ಬಾಸ್ ಹೇಳಿದ್ದಾರೆ. ಮುಖ್ಯದ್ವಾರ ಓಪನ್ ಆಗಿದೆ. ಆದರೆ ಅವರಿಬ್ಬರು ಮನೆಯಿಂದ ಹೊರಬಂದಿದ್ದು ಇನ್ನೂ ಕಾಣಿಸಿಲ್ಲ. ಮುಂದಿನ ಸಂಚಿಕೆಯಲ್ಲಿ ಆ ಬಗ್ಗೆ ಸ್ಪಷ್ಟತೆ ಸಿಗಲಿದೆ.
ಜಗದೀಶ್ ಅವರ ವರ್ತನೆಯಿಂದ ಇಡೀ ಬೇಸತ್ತಿದ್ದರೂ ಕೂಡ ಅವರು ಮನೆಯಿಂದ ಹೊರಗೆ ಹೋಗುವುದು ಬೇಡ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಯಾಕೆಂದರೆ, ಜಗದೀಶ್ ಅವರ ವ್ಯಕ್ತಿತ್ವ ಯಾವ ರೀತಿ ಇದೆ ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತಾಗಬೇಕು. ಹಾಗಾಗಿ ಅವರನ್ನು ಮನೆಯಲ್ಲೇ ಇರಲು ಬಿಡಬೇಕು ಎಂದು ಅವರು ಹೇಳಿದ್ದಾರೆ. ಭ್ಯವ್ಯಾ ಕೂಡ ಅದೇ ರೀತಿಯ ಅಭಿಪ್ರಾಯ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.